ಎಮ್‌ಇಎಸ್ ಕಿಡಿಗೇಡಿಗಳ ಸಂಘಟನೆ

Advertisement

ಹುಬ್ಬಳ್ಳಿ: ಎಮ್‌ಇಎಸ್ ಕಿಡಿಗೇಡಿಗಳ ಸಂಘಟನೆ, ಅದನ್ನು ನಾವು ಹ್ಯಾಂಡಲ್ ಮಾಡುತ್ತೇವೆ. ಚುನಾವಣೆ ವೇಳೆ ಎಮ್‌ಇಎಸ್‌ನವರು ಜನರ ಮನಸ್ಸ‌ನ್ನು ಕೆಡಿಸುವ ಗಿಮಿಕ್ ಮಾಡುತ್ತಾರೆ. ಬೆಳಗಾವಿ ಜನರಿಗೆ ಇದೆಲ್ಲಾ ಗೊತ್ತಿದೆ, ಜನರೇ ಉತ್ತರ ಕೊಡ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಆದರ್ಶನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಎಇಎಸ್‌ನವರನ್ನು ಮನೆಗೆ ಕಳುಹಿಸುವ ಕೆಲಸ ಜನ ಮಾಡುತ್ತಾರೆ ಎಂದರು. ನಮ್ಮ ಪ್ರಧಾನಿ ಕಾಂಗ್ರೆಸ್‌ನ ಪ್ರಧಾ‌ನಮಂತ್ರಿ ತರಹ ಇರಬೇಕು ಅಂತಾ ಏನಿಲ್ಲ. ಜನರ ಬಳಿ ಹೋಗಬಾರದು ಜನರ ಭಾವನೆ ತಿಳಿದುಕೊಳ್ಳಬಾರದು. ‌ಹಳ್ಳಿಗೆ ಹೋದರೆ ಅವರು ಪ್ರಧಾನಿ ಅಲ್ಲ ಎಂಬುದು ಕಾಂಗ್ರೆಸ್‌ನ ವಿಚಾರಧಾರೆ. ನಮ್ಮ ಪ್ರಧಾನಿಗಳು ವಿಭಿನ್ನವಾಗಿದ್ದಾರೆ. ಸಿದ್ದರಾಮಯ್ಯ ಅದೇ ವಿಚಾರಧಾರೆಗೆ ಹೊಂದಿಕೊಂಡಿದ್ದಾರೆ, ಅದರಿಂದ ಹೊರಗೆ ಬರಲು ಅವರಿಗೂ ಸಾಧ್ಯವಿಲ್ಲ. ವಿಭಿನ್ನವಾಗಿರುವ ಪ್ರಧಾನಿಗಳು ಇದ್ದಾಗ ಅವರಿಗೆ ಕಷ್ಟವಾಗುತ್ತದೆ ಎಂದರು.
ಚುನಾವಣೆಗೋಸ್ಕರ್ ಪ್ರಧಾನಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂಬುದಕ್ಕೆ ಉತ್ತರಿಸಿ, ರಾಜ್ಯದ ಜನರು ಕಷ್ಟದಲ್ಲಿದ್ದಾಗ ನಮ್ಮ ಪ್ರಧಾನಿ ಅತಿ ಹೆಚ್ಚು ಪರಿಹಾರ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತೀ ಹೆಚ್ಚು ಆತ್ಮಹತ್ಯೆಗಳಾಗಿದ್ದವು. ಆಗ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಿದ್ರಾ? ಸುಮ್ನೆ ಮಾತಾಡ್ತಾರೆ ಎಂದರು. ಎಲ್ಲಿಯವರೆಗೆ ಕಾಂಗ್ರೆಸ್‌ನವರು ಪಿಎಫ್‌ಐ, ಎಸ್‌ಡಿಪಿಐ ಅನ್ನು ಸಂತೋಷಪಡಿಸುವ ಪ್ರಯತ್ನದಲ್ಲಿ ಇರುತ್ತಾರೆ. ಅಲ್ಲಿಯವರೆಗೆ ಭಜರಂಗದಳದ ವಿಚಾರ ಜನರ ಮಧ್ಯೆ ಇರುತ್ತದೆ. ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿ ಹೆದರಿದೆ ಅನ್ನೋದು ಹಾಸ್ಯಾಸ್ಪದ ಎಂದರು. ಲಿಂಗಾಯತರ ಮತ ಅಗತ್ಯವಿಲ್ಲ ಎಂಬ ಬಿಎಲ್ ಸಂತೋಷ ಹೇಳಿಕೆ ವಿಚಾರಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೋ ರಿಯಾಕ್ಷನ್ ಎಂದು ತೆರಳಿದರು.