ಸ್ವತಃ ಗ್ಯಾರಂಟಿಯಲ್ಲದ ಕೈ ನಾಯಕರಿಂದ ಕರ್ನಾಟಕಕ್ಕೇನು ಗ್ಯಾರಂಟಿ?

Advertisement

ಮಂಗಳೂರು: ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನ ಗಳಿಸಿ ಭರ್ಜರಿ ಬಹುಮತದಿಂದ ಗೆಲುವು ಸಾಧಿಸುವುದು ಖಚಿತ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಪ್ರತಿಪಾದಿಸಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಆರ್ಥಿಕ, ಸಾಂಸ್ಕೃತಿಕ ಪ್ರಗತಿಗೆ ಕರ್ನಾಟಕದ ಕೊಡುಗೆಗಳು ಅಪಾರ. ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಇಲ್ಲಿನ ಜನರ ಭಾವನೆಗಳು ಮತ್ತು ಸ್ಪಂದನೆಗಳನ್ನು ಗಮನಿಸಿದರೆ ಬಿಜೆಪಿಯ ಬಹುಮತದ ಸಂಖ್ಯೆ ದಾಖಲೆಯ ಮಟ್ಟ ತಲುಪುವುದರಲ್ಲಿ ಸಂದೇಹವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಮತ್ತು ಸಮಾವೇಶಗಳಿಗೆ ಕರ್ನಾಟಕದ ಜನತೆಯ ಭಾರೀ ಬೆಂಬಲವನ್ನು ಗಮನಿಸಿದರೆ ಪಕ್ಷದ ಗೆಲುವಿನ ಸಂಖ್ಯೆ 150 ಸೀಟುಗಳನ್ನೂ ದಾಟುವುದು ಖಚಿತ’ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದರು.
ಕರ್ನಾಟಕದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿದ್ದ ಆರಂಭಿಕ ಚಿತ್ರಣಗಳು ಈಗ ಅತ್ಯಂತ ಗಮನಾರ್ಹವಾಗಿ ಬದಲಾಗಿದೆ. ಪ್ರಚಾರ ಹಂತದಲ್ಲೇ ಆರಂಭಿಕ ಲೆಕ್ಕಾಚಾರಗಳನ್ನು ಮೀರಿ ಬಿಜೆಪಿ ಮುನ್ನಡೆ ಸಾಧಿಸಿದೆ. ನಾನು ಒಂದು ವಾರದಿಂದ ಸುತ್ತಾಟ ನಡೆಸಿದ ಪ್ರದೇಶಗಳಲ್ಲೆಲ್ಲೂ ಒಂದೇ ಒಂದು ಕಾಂಗ್ರೆಸ್‌ಪ್ರಚಾರ ಅಥವಾ ರ್ಯಾಲಿ ನಡೆಯುವುದನ್ನು ಕಂಡಿಲ್ಲ. ಕರ್ನಾಟಕ ಚುನಾವಣೆ ಘೋಷಣೆಗೆ ಹಲವು ತಿಂಗಳ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದರು. ಆದರೆ ಚುನಾವಣೆ ಘೋಷಣೆಯಾದ ಬಳಿಕ ಅವರ ಪಕ್ಷವನ್ನು ಗೆಲುವಿನ ಕಡೆಗೆ ಮುನ್ನಡೆಸಬೇಕಾದ ವ್ಯಕ್ತಿ ಬಳಿಕ ಆ ನಾಪತ್ತೆಯಾಗಿದ್ದಾರೆ. ಸ್ವತಃ ತನ್ನ ಬಗ್ಗೆ ಗ್ಯಾರಂಟಿ ಇಲ್ಲದ ಒಬ್ಬ ನಾಯಕ ರಾಹುಲ್ ಗಾಂಧಿ. ಅಂತಹ ವ್ಯಕ್ತಿ ಕರ್ನಾಟಕದ ಜನತೆಗೆ ನೀಡುವ ಗ್ಯಾರಂಟಿಯನ್ನು ನೀವು ನಂಬುವಿರಾ? ಎಂದು ಶರ್ಮಾ ಪ್ರಶ್ನಿಸಿದರು.
ಕರ್ನಾಟಕದ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಆತ್ಮಘಾತುಕ. ಮುಸ್ಲಿಂ ತುಷ್ಟೀಕರಣದ ಎಲ್ಲ ಮೇರೆಗಳನ್ನೂ ಮೀರಿರುವ ಕಾಂಗ್ರೆಸ್‌ಗೆ ದೇಶದ ಬಹುಸಂಖ್ಯಾತ ಸಮುದಾಯದ ವಿರುದ್ಧ ಯುದ್ಧ ಸಾರುವುದೇ ಏಕಮಾತ್ರ ಧ್ಯೇಯವಾಗಿದೆ. ಆ ಪಕ್ಷ ಬಹುಸಂಖ್ಯಾತ ಸಮುದಾಯವನ್ನು ಗೌರವಿಸುವುದಿಲ್ಲ. ನಮ್ಮ ಸಂಸ್ಕೃತಿ, ಧರ್ಮವನ್ನು ವಿರೋಧಿಸುವುದೇ ಅವರ ಗುರಿ. ಮುಸ್ಲಿಮರಿಗೆ ಮೀಸಲಾತಿ ಎನ್ನುವ ಮೂಲಕ ಇತರ ಸಮುದಾಯಗಳನ್ನು ಕಡೆಗಣಿಸಿದೆ. ಈ ದೇಶದ ಹಿಂದೂಗಳಿಗೆ, ಕ್ರೈಸ್ತರಿಗೆ, ಜೈನರಿಗೆ, ಬೌದ್ಧರಿಗೆ ಮೀಸಲಾತಿ ಬೇಡವೆ? ಬರೀ ಮುಸ್ಲಿಮರಿಗೆ ಮೀಸಲಾತಿ ಎಂದರೆ ಸಾಕೆ? ಕಾಂಗ್ರೆಸ್ ಅನುಸರಿಸುವ ಮೀಸಲಾತಿಗೂ ಬಿಜೆಪಿ ಅನುಸರಿಸುವ ಮೀಸಲಾತಿಗೂ ಬಹಳ ಅಂತರವಿದೆ. ಎಲ್ಲ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದವರಿಗೆ ಸಮಾನವಾಗಿ ಮೀಸಲಾತಿಯ ಲಾಭ ದೊರಕಬೇಕು ಎನ್ನುವುದು ಬಿಜೆಪಿಯ ನೀತಿ. ಅದಕ್ಕನುಗುಣವಾಗಿಯೇ ಬಿಜೆಪಿ ಸರಕಾರಗಳು ಕೆಲಸ ಮಾಡುತ್ತಿವೆ ಎಂದು ಅಸ್ಸಾಂ ಮುಖ್ಯಮಂತ್ರಿ ನುಡಿದರು.
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಈಗಾಗಲೇ ನಿಷೇಧಿಸಲಾಗಿರುವ ಪಿಎಫ್‌ಐ ಮತ್ತು ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳುವ ಮೂಲಕ ಭಿನ್ನ ರೀತಿಯಲ್ಲಿ ದೇಶದ್ರೋಹಿ ಸಂಘಟನೆ ಪಿಎಫ್‌ಐ ಜತೆಗಿನ ತನ್ನ ನಂಟನ್ನು ಹೇಳಿಕೊಂಡಿದೆ. ಪಿಎಫ್‌ಐ ದೇಶವ್ಯಾಪಿ ನೆಟ್‌ವರ್ಕ್‌ಹೊಂದಿರುವ ಉಗ್ರ ಸಂಘಟನೆ. ಪಿಎಫ್‌ಐ ಅನ್ನು ಭಾರತ ಸರಕಾರ ನಿಷೇಧಿಸಿದಾಗ ಯಾವ ಕಾಂಗ್ರೆಸ್ ನಾಯಕನೂ ಅದನ್ನು ವಿರೋಧಿಸಲಿಲ್ಲ, ಖಂಡಿಸಿ ಪತ್ರಿಕಾಗೋಷ್ಠಿ ಮಾಡಿಲ್ಲ ಅಥವಾ ಪತ್ರಿಕಾ ಹೇಳಿಕೆಯನ್ನೂ ನೀಡಿಲ್ಲ. ಇಡೀ ದೇಶದ ಸರಕಾರದ ಕ್ರಮವನ್ನು ಸ್ವಾಗತಿಸಿತ್ತು. ಆದರೆ ಬಹುಸಂಖ್ಯಾತ ಹಿಂದೂ ವಿರೋಧಿ ಕಾಂಗ್ರೆಸ್‌ಅಂತರಂಗದಲ್ಲಿ ವಿರೋಧಿಸಿತ್ತು. ಆ ಭಾವನೆಗಳೇ ಅದರ ಪ್ರಣಾಳಿಕೆಯಲ್ಲಿ ವ್ಯಕ್ತವಾಗಿದೆ ಎಂದು ಶರ್ಮಾ ಟೀಕಿಸಿದರು.
ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ, ವಿಧ್ವಂಸಕ ಅಪರಾಧ ಕೃತ್ಯಗಳಲ್ಲಿ ಜೈಲು ಸೇರಿದ್ದ ಪಿಎಫ್‌ಐನ 1,700ಕ್ಕೂ ಹೆಚ್ಚು ದುಷ್ಕರ್ಮಿಗಳನ್ನು ಕಾಂಗ್ರೆಸ್‌ನ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ದೇಶದ ಹಲವು ಭಾಗಗಳಿಂದ ಐಸಿಸ್‌ಜತೆ ಸಂಪರ್ಕ ಹೊಂದಿರುವ ಪಿಎಫ್‌ಐ ಉಗ್ರರನ್ನು ಬಂದಿಸಿದೆ. ಹಲವಾರು ಸ್ಲೀಪರ್‌ಸೆಲ್‌ಗಳನ್ನು ಧ್ವಂಸಗೊಳಿಸಿದೆ. ಅಂತಹ ಪಿಎಫ್‌ಐ ಅನ್ನು ನಿಷೇಧಿಸಿರುವುದನ್ನು ಅದೇ ಸಂಘಟನೆಯ ರಾಜಕೀಯ ಮುಖವಾದ ಎಸ್‌ಡಿಪಿಐ ವಿರೋಧಿಸುತ್ತಿದೆ. ಜಾತ್ಯತೀತತೆಯ ಮುಖವಾಡ ಹೊತ್ತ ಕಾಂಗ್ರೆಸ್ ನೇರವಾಗಿ ವಿರೋಧಿಸಲು ಆಗದ ಕಾರಣ ಬಜರಂಗದಳವನ್ನು ಪಿಎಫ್‌ಐ ಜತೆ ಸಮೀಕರಿಸುವ ಮೂಲಕ ಭಿನ್ನ ರೀತಿಯಲ್ಲಿ ತನ್ನ ನಿಲುವನ್ನು ತೋರಿಸಿಕೊಂಡಿದೆ ಎಂದು ಶರ್ಮಾ ವಿವರಿಸಿದರು.
ಬಜರಂಗ ದಳ ಯಾವತ್ತೂ ಉಗ್ರವಾದಿ ಸಂಘಟನೆಯಲ್ಲ. ಅದು ಯಾವುದೇ ವಿಧ್ವಂಸಕ ಕೃತ್ಯದಲ್ಲಿ ತೊಡಗಿಲ್ಲ, ರಾಷ್ಟ್ರೀಯತೆ, ಹಿಂದುತ್ವ ಪ್ರತಿಪಾದಿಸುವ ಅವರು ದೇಶದ್ರೋಹದ ಕೃತ್ಯ ಮಾಡಿಲ್ಲ. ಹಾಗಿರುವಾಗ ಬಜರಂಗ ದಳ ನಿಷೇಧ ಮಾಡುತ್ತೇವೆ ಎಂದಿರುವುದು ಪಿಎಫ್‌ನಿಷೇಧಕ್ಕೆ ಕಾಂಗ್ರೆಸ್ ತೋರಿರುವ ಪ್ರತಿರೋಧ ಅಷ್ಟೆ ಎಂದರು.