ಹುಬ್ಬಳ್ಳಿ: ಮೇ 9 ಮತ್ತು 10 ರಂದು ಸಾರಿಗೆ ಬಸ್ ಸಂಚಾರ ಎಂದಿನಂತೆ ಇರುತ್ತದೆ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಧಾನ ಸಭೆ ಚುನಾವಣೆ ಕಾರ್ಯಕ್ಕಾಗಿ ವ್ಯಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಅಂದಾಜು 1,500 ಬಸ್ಸುಗಳನ್ನು ನಿಯೋಜಿಸಲಾಗಿದೆ.
ಮತದಾನದ ದಿನ ಮೇ 10 ಬುಧವಾರ ಶಾಲಾ ಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ರಜೆ ಘೋಷಿಸಿರುವ ಪ್ರಯುಕ್ತ ಸಹಜವಾಗಿ ಪ್ರಯಾಣಿಕರ ಓಡಾಟದಲ್ಲಿ ಕೊಂಚ ಇಳಿಕೆ ನಿರೀಕ್ಷಿಸಲಾಗಿದೆ.
ಈ ದಿನಗಳಂದು ಎಲ್ಲಾ ಎಲ್ಲಾ ಡಿಪೋ ಗಳಲ್ಲಿ ಲಭ್ಯವಿರುವ ಬಸ್ಸುಗಳನ್ನು ಹಾಗೂ ಚಾಲಕ-ನಿರ್ವಾಹಕರನ್ನು ಬಳಸಿಕೊಂಡು ಮಾರ್ಗಗಳ ಮೇಲೆ ಎಂದಿನಂತೆ ಬಸ್ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿರುತ್ತದೆ.
ವಿದ್ಯಾರ್ಥಿಗಳಿಗಾಗಿಯೇ ಸಂಚರಿಸುವ ಕೆಲ ಬಸ್ಸುಗಳನ್ನು ರದ್ದುಗೊಳಿಸಿ ಪ್ರಯಣಿಕರ ಬೇಡಿಕೆ ಇರುವ ಮಾರ್ಗಗಳಲ್ಲಿ ಓಡಿಸಲಾಗುತ್ತದೆ. ಮೇಲ್ವಿಚಾರಣೆಗೆ ಪ್ರಮುಖ ಬಸ್ ನಿಲ್ದಾಣಗಳಿಗೆ ಅಧಿಕಾರಿ,ಸಿಬ್ಬಂದಿ ನಿಯೋಜಿಸಲಾಗಿದೆ. ಹಾಗೂ ಬಸ್ ಬೇಡಿಕೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 7760991687 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಜಿಲ್ಲೆಯೊಳಗೆ, ನೆರೆ ಜಿಲ್ಲಾ ಕೇಂದ್ರಗಳ ನಡುವಿನ ತಡೆರಹಿತ, ವೇಗದೂತ ಸಾರಿಗೆಗಳು, ದೂರ ಮಾರ್ಗದ ಹಾಗೂ ರಾತ್ರಿ ಸಾರಿಗೆಯ ಎಲ್ಲಾ ಪ್ರತಿಷ್ಠಿತ ಹಾಗೂ ಮುಂಗಡ ಬುಕ್ಕಿಂಗ್ ಬಸ್ಸುಗಳು ಎಂದಿನಂತೆ ಸಂಚರಿಸುತ್ತವೆ. ಹೀಗಾಗಿ, ಮೇ 9 ಮತ್ತು 10ರಂದು ಬಸ್ ಸಂಚಾರದಲ್ಲಿ ವ್ಯತ್ಯಯವಾಗುವುದಿಲ್ಲ. ಅದ್ದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ವಾಕರಸಾ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.