ಟಿ-ಶರ್ಟ್ ಇದ್ದ ವಾಹನ ಪತ್ತೆ: ನಗರದಲ್ಲಿ ರಾತ್ರೋರಾತ್ರಿ ಹೈಡ್ರಾಮ

Advertisement

ಬಾಗಲಕೋಟೆ: ಕಾರವೊಂದರಲ್ಲಿ ಸಾಗಿಸುತ್ತಿದ್ದ ಟಿಶರ್ಟ್ ಮೂಟೆ ಬಿಜೆಪಿಗೆ ಸೇರಿದ್ದು ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಚರಂತಿಮಠ ಪರ ಕಾರ್ಯಕರ್ತರು ಪ್ರತಿಭಟಿಸಿದ ಘಟನೆ ನಗರದಲ್ಲಿ ಸೋಮವಾರ ರಾತ್ರಿ ಜರುಗಿದೆ.

ಉದ್ಯಮಿ ಪ್ರಭುಕಾಂತ ನಾರಾ ಅವರಿಗೆ ಸೇರಿದ ವಾಹನದಲ್ಲಿ ನಂ.೪ ಶಿಖರ್ ಧವನ್ ಎಂದು ಬರೆದಿರುವ ಮೂರು ಮೂಟೆಗಳನ್ನು ಹೊತ್ತು ತರುವುದನ್ನು ಮುಚಖಂಡಿ ಕ್ರಾಸ್ ನಲ್ಲಿ ಮಲ್ಲಿಕಾರ್ಜುನ ಪರ ಬೆಂಬಲಿಗರು ಬೆನ್ನಟ್ಟಿ ಬಂದಿದ್ದಾರೆ. ಆಗ ಟಿಶರ್ಟ್ ಹೊತ್ತ ಕಾರು‌ ಬಸವೇಶ್ವರ ವೃತ್ತದಲ್ಲಿರುವ ನಾರಾ ಅವರ ಗೋದಾಮು ಪ್ರವೇಶಿಸಿದೆ. ಈ ವಿಚಾರವನ್ನು ಪೊಲೀಸರು, ಚುನಾವಣಾ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಘಟನೆ ಕುರಿತು ಮಾಧ್ಯಮಗಳ‌ ಜತೆಗೆ ಮಾತನಾಡಿದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಇಲ್ಲಿ ಅಧಿಕಾರಿಗಳು ಶಾಸಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮೇಲಾಧಿಕಾರಿಗಳು ಕಾಣದ ಕೈಗಳ ಜತೆಗೆ ಶಾಮೀಲಾಗಿದ್ದಾರೆ. ನಾರಾ ಗೋದಾಮು ತೆಗೆದು ಪರಿಶೀಲಿಸಬೇಕೆಂದು ಪಟ್ಟು ಹಿಡಿದರು. ಮುಂದೆ ಗೋದಾಮು ಪರಿಶೀಲಿಸಿದಾಗ ಅಕ್ರಮ ಪತ್ತೆಯಾಗಿಲ್ಲ ಎಂದು ಪರಿಶೀಲನೆ ಕೈಗೊಂಡ ಅಧಿಕಾರಿ ಸುನೀಲ ಸನ್ನಕ್ಕಿ ಮಾಧ್ಯಮಗಳ ಎದುರು ಘೋಷಿಸಿದರು.

ನಂತರ ಮಾತನಾಡಿದ ಪ್ರಭುಕಾಂತ ನಾರಾ, ಟಿಶರ್ಟ್ ಗೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿಯಿವೆ. ಅವನ್ನು ನೀಡುತ್ತೇನೆ. ‌ಇಲ್ಲಿ ಬಂದು ಪ್ರತಿಭಟನೆ ಹೆಸರಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಪಾನಿಯಾ ದೋಚಲಾಗಿದೆ. ಸೋಲಿನಿಂದ ಹತಾಶರಾಗಿರುವ ಈ ಲಪುಟರಿಂದ ಇಂಥ ಘಟನೆ ಸಂಭವಿಸಿದೆ ಎಂದು ಆಕ್ರೋಶ ಹೊರಹಾಕಿದರು.