ಮುಗ್ಧತೆಯ ಪ್ರತಿರೂಪ

Advertisement

ಡಾ. ಕಲಾಂರವರ ದರ್ಶನ ಮತ್ತು ಸಂಪರ್ಕವಾದದ್ದು ನನ್ನ ಬದುಕಿಗೆ ಒಂದು ಸುಂದರವಾದ ಅನುಭವ ಸರಣಿಗೆ ಬಾಗಿಲನ್ನು ತೆರೆದಂತಾಯಿತು. ೨೦೦೧ ರಲ್ಲಿ ಪ್ರಾರಂಭವಾದ ಆತ್ಮೀಯ ಸಂಬಂಧ ೨೦೧೫ ರವರೆಗೂ ಉಳಿದದ್ದು ನನ್ನ ಭಾಗ್ಯವಿಶೇಷ. ಆಗಾಗ ದೆಹಲಿಗೆ ಹೋದಾಗ ಅಥವಾ ಅವರು ಕರ್ನಾಟಕಕ್ಕೆ ಬಂದಾಗ ಅವರನ್ನು ಭೆಟ್ಟಿಯಾಗುವ ಅವಕಾಶ ದೊರಕುತ್ತಿತ್ತು. ಕರ್ನಾಟಕದ ಗ್ರಾಮೀಣ ಪ್ರದೇಶಗಳಿಗೆ ಅವರು ಬಂದಾಗ, ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸುವ ಭಾಗ್ಯ ಸಿಕ್ಕಿತ್ತು. ಒಂದು ಬಾರಿ ನಾನವರಿಗೆ ಹೇಳಿದ್ದೆ, “ಸರ್, ನಾನು ಕನ್ನಡವನ್ನು ಆಳವಾಗಿ ತಿಳಿದವನಲ್ಲ, ನಾನು ವಿಜ್ಞಾನದ ವಿದ್ಯಾರ್ಥಿ. ನಿಮಗೆ ಬೇಕಾದರೆ ಒಬ್ಬ ಕನ್ನಡದ ವಿದ್ವಾಂಸರ ಪರಿಚಯ ಮಾಡುತ್ತೇನೆ”. ಅವರು ತಲೆ ಅಲ್ಲಾಡಿಸಿ, “ನೋ, ನೋ, you know me, I know you. You should do it” (ಇಲ್ಲ ಇಲ್ಲ, ನಿಮಗೆ ನನ್ನ ಪರಿಚಯವಿದೆ, ನನಗೆ ನೀವು ಗೊತ್ತು. ನೀವೇ ಅದನ್ನು ಮಾಡಬೇಕು”. ಎಂದರು. ಮುಂದೆ ಹತ್ತಾರು ಕಡೆಗೆ ಅನುವಾದ ಮಾಡುವ ತೃಪ್ತಿಕರವಾದ ಅನುಭವ ನನ್ನದಾಯಿತು. ಆಗೆಲ್ಲ ಅವರನ್ನು ಹತ್ತಿರದಿಂದ ನೋಡುವ, ಅವರ ಸ್ವಭಾವವನ್ನು ಅರ್ಥಮಾಡಿಕೊಳ್ಳುವ ಅವಕಾಶ ಸಿಕ್ಕಿತು. ಪ್ರತಿಬಾರಿಯೂ ಒಂದು ಹೊಸ ಅನುಭವ, ಹೊಸ ಕಲಿಕೆ.
ಅವರು ಪ್ರತಿಯೊಂದು ಸಂದರ್ಭದಲ್ಲಿಯೂ ಹೇಗೆ ಕಲಿಯುತ್ತಿದ್ದರು ಮತ್ತು ಕಲಿಯುತ್ತಿದ್ದೇನೆ ಎಂದು ಹೇಳಲು ಹಿಂಜರಿಯುತ್ತಿರಲಿಲ್ಲವೆಂಬುದು ನನಗೆ ಅಚ್ಚರಿಯನ್ನುಂಟುಮಾಡುತ್ತಿತ್ತು.
ಅದೊಂದು ಬಹುದೊಡ್ಡ ಕಾರ್ಯಕ್ರಮ. ಲಕ್ಷಾಂತರ ಜನ ಬಂದು ಸೇರಿದ್ದಾರೆ. ಎಲ್ಲರ ಕೇಂದ್ರ ಬಿಂದು ಅವರೇ. ಡಾ. ಕಲಾಂ ಭಾಷಣಕ್ಕೆಂದು ವೇದಿಕೆಗೆ ಬಂದರು. ಭಾಷಣದ ಅನುವಾದ ಮಾಡುವುದಕ್ಕಾಗಿ ನಾನು ಅವರ ಪಕ್ಕದಲ್ಲೇ ನಿಂತಿದ್ದೆ. ಅವರ ಮಾತೆಂದರೆ ಕೇವಲ ಏಕಮುಖವಾದ ಭಾಷಣವಲ್ಲ. ಅವರಿಗೆ ಸಂವಾದ ಇಷ್ಟ. ಭಾಷಣ ಪ್ರಾರಂಭಿಸಿದರು. ಅಲ್ಲಿ ಸೇರಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೇಳಿದರು, “ನಿಮ್ಮಲ್ಲಿ ಎಷ್ಟು ಜನ ವೈದ್ಯರಾಗಬಯಸುತ್ತೀರಿ?” ಒಂದಷ್ಟು ಕೈಗಳು ಮೇಲಕ್ಕೆದ್ದವು. “ಎಷ್ಟು ಜನ ಇಂಜಿನೀಯರ್‌ರಾಗಲು ಬಯಸುತ್ತೀರಿ?” ಮತ್ತಷ್ಟು ಕೈಗಳು ಉತ್ಸಾಹದಿಂದ ಮೇಲಕ್ಕೇರಿದವು. ಹಾಗೆಯೇ ಎಷ್ಟು ಮಂದಿ ವಕೀಲರಾಗುತ್ತೀರಿ, ಆರ್ಕಿಟೆಕ್ಟ್ ಆಗುತ್ತೀರಿ, ಐ.ಎ.ಎಸ್, ಐ.ಪಿಎಸ್ ಆಗುತ್ತೀರಿ ಎಂದು ಕೇಳಿದರು. ನಂತರ ಮಾತು ಮುಂದುವರೆಸಬೇಕೆಂದಿದ್ದಾಗ ಸಭೆಯ ಮುಂಭಾಗದಿಂದ, “ಸರ್, ಸರ್” ಎಂಬ ಜೋರಾದ ಧ್ವನಿ ಕೇಳಿಸಿತು. ಕಲಾಂ ಮಾತು ನಿಲ್ಲಿಸಿ ಆ ಕಡೆಗೆ ನೋಡಿದರು. ತರುಣನೊಬ್ಬ ಕೈ ಎತ್ತಿ ಕೂಗುತ್ತಿದ್ದ, “ಸರ್ ನನ್ನದೊಂದು ಪ್ರಶ್ನೆ ಇದೆ”. ಹತ್ತಿರದಲ್ಲಿದ್ದ ಪೊಲೀಸರು ಅವನನ್ನು ಸುಮ್ಮನಿರುವಂತೆ ಒತ್ತಾಯಿಸುತ್ತಿದ್ದರು. ಅದನ್ನು ಕಂಡ ಡಾ. ಕಲಾಂ, “ಪರವಾಗಿಲ್ಲ, ಅವನಿಗೆ ಪ್ರಶ್ನೆ ಕೇಳಲು ಬಿಡಿ” ಎಂದರು. ಆಗ ಒಬ್ಬರು ಆ ತರುಣನಿಗೆ ಮೈಕ್ ಒಂದನ್ನು ತಂದುಕೊಟ್ಟರು. ಆ ಹುಡುಗ ಕೇಳಿದ, “ಸರ್, ನೀವು ಯಾರು ವೈದ್ಯರು, ಇಂಜಿನೀಯರ್, ವಕೀಲರು, ಆರ್ಕಿಟೆಕ್ಟ್ ಆಗುತ್ತೀರಿ ಎಂದೆಲ್ಲ ಕೇಳಿದಿರಿ. ಆದರೆ ಎಷ್ಟು ಜನ ರೈತರಾಗಿ ಒಕ್ಕಲುತನ ಮಾಡುತ್ತೀರಿ ಎಂದು ಕೇಳಲಿಲ್ಲ. ನಮ್ಮದು ಕೃಷಿ ಪ್ರಧಾನವಾದ ದೇಶವಲ್ಲವೆ? ಯಾರೂ ರೈತರಾಗಬಾರದೇ?”. ಆ ಕ್ಷಣ ಡಾ. ಕಲಾಂ ಬಿಳಿಚಿಕೊಂಡರು. ನಾನು ಅವರಿಗೆ ಅತ್ಯಂತ ಹತ್ತಿರದಲ್ಲೇ ನಿಂತಿದ್ದವನು. ಅದನ್ನು ಕಂಡೆ. ಅವರು ಬುದ್ಧಿವಂತರು.
ಕ್ಷಣದಲ್ಲೇ ಸಾವರಿಸಿಕೊಂಡು, “ಅದು ಹಾಗಲ್ಲ. ಉಳಿದ ಎಲ್ಲ ಕ್ಷೇತ್ರದ ಪರಿಣಿತರು ರೈತನಿಗೆ ಸಹಾಯವಾಗಿ ನಿಲ್ಲಬೇಕು” ಎಂದರು. ಜನಸಾಗರ ಕರತಾಡನ ಮಾಡಿತು. ಭಾಷಣ ಮುಗಿದ ಮೇಲೆ ಹೊರಬರುವಾಗ ನನ್ನನ್ನು ಕಂಡು, “ಡಾ. ಕೆ. (ಅವರು ನನ್ನನ್ನು ಕರೆಯುತ್ತಿದ್ದದ್ದು ಹಾಗೆಯೇ), ಇಂದು ನಾನೊಂದು ಒಳ್ಳೆಯ ಪಾಠ ಕಲಿತೆ. ಮುಂದಿನ ಉಪನ್ಯಾಸಗಳಲ್ಲಿ ಎಷ್ಟು ಜನ ರೈತರಾಗುತ್ತೀರಿ ಎಂದು ಕೇಳಿಯೇ ತೀರುತ್ತೇನೆ” ಎಂದರು! ಅಂದರೆ, ಅವರ ಮನಸ್ಸು ಹೇಗೆ ಪ್ರತಿಕ್ಷಣ ಜಾಗ್ರತವಾಗಿರುತ್ತಿತ್ತು ಮತ್ತು ಪ್ರತಿ ಅನುಭವವೂ ಕಲಿಕೆಯಾಗಿತ್ತು ಎಂಬುದಕ್ಕೆ ಸಾಕ್ಷಿ ಈ ಘಟನೆ.
ಡಾ. ಕಲಾಂರವರ ಮನಸ್ಸು ಮಗುವಿನ ಮನಸ್ಸು. ಅಷ್ಟು ಮುಗ್ಧ, ನಿರ್ಮಲ. ಅವರು ರಾಷ್ಟ್ರಪತಿ ಎಂಬುದು ಬಹುಶ: ಅವರಿಗೇ ನೆನಪಿರಲಿಕ್ಕಿಲ್ಲವೆಂಬಂತೆ ನಡೆಯುತ್ತಿದ್ದರು. ಯಾರಾದರೂ ಎದುರಿಗೆ ಬಂದರೆ ಅವರಿಗಿಂತ ಮೊದಲು ಇವರೇ ಕೈ ಮುಗಿದು, happy to meet you ಎನ್ನುವರು. ಮುಂದಿದ್ದವರಿಗೆ ಮುಜುಗರ.
ಒಂದು ಬಾರಿ ಕಲಬುರಗಿಗೆ ಬಂದಿದ್ದರು. ಡಾ. ಬಸವರಾಜ ಪಾಟೀಲ ಸೇಡಂರವರ ನೇತೃತ್ವದಲ್ಲಿ ನಡೆದ ಅದ್ಭುತ `ಕಲಬುರ್ಗಿ ಕಂಪು’ ಕಾರ್ಯಕ್ರಮದಲ್ಲಿ ಅವರ ಭಾಗವಹಿಸುವಿಕೆ ಇತ್ತು. ಸುಮಾರು ಎರಡು ಲಕ್ಷ ಜನರು ವಿಶಾಲವಾದ ಮಂಟಪದಲ್ಲಿ ಕಿಕ್ಕಿರಿದು ನೆರೆದಿದ್ದರು. ಎಲ್ಲರ ಲಕ್ಷ ಡಾ. ಕಲಾಂ ಮೇಲೆಯೇ. ಅವರ ಭಾಷಣದ ಅನುವಾದಕ್ಕೆಂದು ನಾನು ವೇದಿಕೆಯ ಮೇಲೆ ಹೋಗಿ ಅವರಿಗೆ ನಮಸ್ಕರಿಸಿದೆ. ಅವರ ಮನಸ್ಸಿನಲ್ಲಿ ಏನೋ ಆತಂಕವಿರಬೇಕು. ನನ್ನ ಭುಜ ಹಿಡಿದು ಹತ್ತಿರಕ್ಕೆ ಎಳೆದುಕೊಂಡು ಕೇಳಿದರು, “ಡಾ. ಕೆ, ಇಲ್ಲಿ ಬಂದಿರುವ ಎಲ್ಲರಿಗೂ ನನ್ನ ಭಾಷಣ ಅರ್ಥವಾಗುತ್ತದೆಯೇ?” ಬಹುಶ: ಅವರಿಗೆ ಅಲ್ಲಿ ಅಪಾರಸಂಖ್ಯೆಯಲ್ಲಿ ಸೇರಿದ್ದ ರೈತಾಪಿ ಜನ, ಮಹಿಳೆಯರು ಮತ್ತು ಮಕ್ಕಳಿಗೆ ತಮ್ಮ ಇಂಗ್ಲೀಷ್ ಭಾಷಣ ಹೇಗೆ ಅರ್ಥವಾದೀತು ಎಂಬ ಚಿಂತೆ ಇದ್ದೀತು. ನಾನು ಹೇಳಿದೆ, “ಬಹಳಷ್ಟು ಜನರಿಗೆ ತಮ್ಮ ಇಂಗ್ಲೀಷ್ ಭಾಷಣ ಅರ್ಥವಾಗಲಿಕ್ಕಿಲ್ಲ.
ಆದರೆ ಹೇಗೂ ನಾನು ಕನ್ನಡಕ್ಕೆ ಅನುವಾದ ಮಾಡುತ್ತೇನಲ್ಲ”. “ಮಾತು ಅರ್ಥವಾಗದಿದ್ದರೆ ಅವರೆಲ್ಲ ಬಂದದ್ದು ಏಕೆ?” ಎಂದು ಕೇಳಿ ಹುಬ್ಬೇರಿಸಿದರು. ನಾನು ನಗುತ್ತ ಹೇಳಿದೆ, “ಸರ್, ಅವರು ತಮ್ಮನ್ನು ನೋಡಲು ಬಂದಿದ್ದಾರೆ”. ಅವರಿಗೂ ನಗು ಬಂತು. ನಗುತ್ತಲೇ ಕೇಳಿದರು, “ನಾನೇನು ಸಿನಿಮಾ ಹೀರೋನೇ?”. “ಸರ್, ನಿಮ್ಮನ್ನು ಸಿನಿಮಾ ಹೀರೋಗಳಿಗೆ ಏಕೆ ಹೋಲಿಸಿಕೊಳ್ಳುತ್ತೀರಿ? ನೀವು ಅವರೆಲ್ಲರಿಗಿಂತ ಬಹು ಎತ್ತರದಲ್ಲಿರುವವರು” ಎಂದೆ. ನಗುನಗುತ್ತ “ಸರಿ, ಸರಿ” ಎಂದರು.
ಡಾ. ಕಲಾಂ ಮಾತನಾಡಲು ಬಂದು ನಿಂತರು. ಅವರ ಪಕ್ಕದಲ್ಲಿ ಎಂದಿನಂತೆ ನಾನು ಹೋಗಿ ನಿಂತೆ. ಆಗ ನನಗೊಂದು ಫಜೀತಿ ಕಾದಿತ್ತು. ನನ್ನ ಕೈಯಲ್ಲಿ ಒಬ್ಬರು ಒಂದು ಮೈಕ್ ತಂದುಕೊಟ್ಟರು. ಅದು ಹಗುರವಾದ ಮೈಕ್ ಅಲ್ಲ. ಸುಮಾರು ಎರಡು ಕಿಲೋ ತೂಗುವ ಪೀಠವಿದ್ದ ಮೈಕ್. ಅದನ್ನು ನಾನು ಕೈಯಲ್ಲಿ ಹಿಡಿದುಕೊಂಡೇ ಮಾತನಾಡಬೇಕು. ನನ್ನ ಇನ್ನೊಂದು ಕೈಯಲ್ಲಿ ಡಾ. ಕಲಾಂರವರ ಭಾಷಣದ ಮುದ್ರಿತ ಪ್ರತಿ. ಮುಂದೆ ಪುಟ್ಟ ಮೇಜನ್ನಾದರೂ ಇಟ್ಟಿದ್ದರೆ ತುಂಬ ಅನುಕೂಲವಾಗುತ್ತಿತ್ತು ಎಂದುಕೊಂಡೆ. ಆಗೊಂದು ತಮಾಷೆ ಪ್ರಸಂಗ ನಡೆಯಿತು. ಡಾ. ಕಲಾಂ ಒಬ್ಬ ತಂತ್ರಜ್ಞರು. ಅವರು ಸಾಮಾನ್ಯವಾಗಿ ಕಾಲರ್ ಮೈಕ್ ಧರಿಸಿ ಮಾತನಾಡುವವರು. ಆದರೆ ಆಯೋಜಕರು ತಂದದ್ದು ಹಾಡುಗಾರರು ಬಳಸುವಂಥದ್ದು. ಅದಕ್ಕೆ ತಲೆಗೆ ಸಿಕ್ಕಿಸಿಕೊಳ್ಳುವಂಥ ಒಂದು ಪಟ್ಟಿಯ ಉಂಗುರ. ಅದರಿಂದ ಕೆಳಗೊಂದು ಇಳಿಬಿದ್ದ ಮೈಕ್. ಅದರ ನೋಟವೇ ಕಲಾಂರವರಿಗೆ ಇಷ್ಟವಾಗಲಿಲ್ಲ. ಅವರಿಗೆ ತಮ್ಮ ತಲೆಗೂದಲು ಹಾರುತ್ತಲೇ ಇರಬೇಕು. ತಲೆಗೂದಲಿಗೆ ಕಟ್ಟು ಹಾಕುವ ಈ ಮೈಕ್ ಅವರಿಗೆ ಬೇಕಾಗಲಿಲ್ಲ. “”I do not want this fellow” ಎಂದರು. ಅವರಿಗೆ ಎಲ್ಲವೂ ಫೆಲೋ. ಅದು ಮನುಷ್ಯರಾಗಬಹುದು, ಪೆನ್ನಾಗಬಹುದು, ಜಿರಳೆಯಾಗಬಹುದು. ಎಲ್ಲದಕ್ಕೂ ಅವರು ಕರೆಯುತ್ತಿದ್ದರು ಫೆಲೋ ಎಂತಲೇ. ಇದರ ಬಗ್ಗೆ ಅನೇಕ ತಮಾಷೆ ಘಟನೆಗಳಿವೆ.
“Give a collar mike” ಎಂದು ಕಲಾಂ ಹೇಳಿದಾಗ ಆಯೋಜಕರು ಹೌಹಾರಿದರು. ಅವರು ತಂದದ್ದು ಇದೊಂದನ್ನೇ. ಏನು ಮಾಡುವುದೆಂದು ಒಂದು ಕ್ಷಣ ತಡಬಡಿಸಿದರು. ಅಲ್ಲಿಗೆ ಬಂದ ತರುಣನೊಬ್ಬ ಯೋಚಿಸಿ ಮೈಕಿನ ದುಂಡಗಾದ ಪ್ಲಾಷ್ಟಿಕ್ ತಲೆಪಟ್ಟಿಯನ್ನು ಮುರಿದು ಹಾಕಿ ಬಿಟ್ಟ. ಉಳಿದದ್ದು ಮೈಕ್ ಇದ್ದ ಉದ್ದವಾದ ಕಡ್ಡಿ. ಅದಕ್ಕೆ ಕ್ಲಿಪ್ ಇಲ್ಲ. ಅದನ್ನು ಕಾಲರ್‌ಗೆ ಸಿಕ್ಕಿಸುವುದು ಹೇಗೆ? ಆ ಉದ್ದವಾದ ಕಡ್ಡಿಯನ್ನು ಅವರ ಕೋಟಿನ ಮೊದಲನೆ ಹಾಗೂ ಎರಡನೇ ಕೋಟಿನ ನಡುವೆ ಸಿಕ್ಕಿಸಿದ. ಅದು ಸರಿದು ಸರಿದು ಕೋಟಿನೊಳಗೆ ಹೋಗುತ್ತಿತ್ತು. ಅದಕ್ಕೊಂದು ಅಂಟಿನ ಕಾಗದ ಹಚ್ಚಿ ಹೋದ. ಕಲಾಂ ಬೇಸರದಿಂದಲೇ “I do not like this fellow” ಎನ್ನುತ್ತಲೇ ಭಾಷಣ ಪ್ರಾರಂಭಿಸಿದರು. ನನಗೆ ಈಗ ಮೂರು ಕೆಲಸಗಳು. ಒಂದು ಕೈಯಲ್ಲಿ ತೂಕದ ಮೈಕ್ ಹಿಡಿದುಕೊಳ್ಳುವುದು, ಇನ್ನೊಂದು ಕೈಯಲ್ಲಿ ಭಾಷಣದ ಪ್ರತಿ. ಇದಲ್ಲದೇ ಅವರ ಕೋಟಿನಲ್ಲಿ ಜಾರಿ ಒಳಸೇರುತ್ತಿದ್ದ ಮೈಕ್‌ನ್ನು ಪದೇ ಪದೇ ಹೊರಗಳೆಯುವುದು. ಅವರ ಭಾಷಣವನ್ನು ಅನುವಾದಿಸುವುದು ಕಷ್ಟ. ಯಾಕೆಂದರೆ ಅವರು ಒಂದೆರಡು ವಾಕ್ಯಗಳನ್ನು ಮಾತನಾಡಿ ಅನುವಾದಕ್ಕೆ ನಿಲ್ಲುವವರಲ್ಲ. ಒಂದೇ ಸಮನೆ ಆರೇಳು ನಿಮಿಷ ಮಾತನಾಡಿ, ನನ್ನ ಕಡೆಗೆ ತಿರುಗಿ yes ಎನ್ನುವರು. ನಾನು ಅವರು ಹೇಳಿದ್ದನ್ನೆಲ್ಲ ನೆನಪಿಟ್ಟುಕೊಂಡು ಸಂಕ್ಷಿಪ್ತವಾಗಿ ಆದರೆ ಅವರು ಹೇಳಿದ ಯಾವುದನ್ನೂ ಮರೆಯದೆ ಹೇಳಬೇಕಿತ್ತು. ಆಗ ಒಂದೆಡೆ ನಾನು ಹೀಗೆ ಅನುವಾದ ಮಾಡುತ್ತಿದ್ದಾಗ ಜನ ಚಪ್ಪಾಳೆ ತಟ್ಟುತ್ತಿದ್ದರು. ಡಾ. ಕಲಾಂ ನನ್ನನ್ನೇ ನೋಡುತ್ತಿದ್ದರು. ನನ್ನ ಮಾತು ಮುಗಿದ ಮೇಲೆ ಮೈಕ್‌ನ್ನು ದೂರ ಸರಿಸಿ “ತಾವು ಪ್ರಾರಂಭ ಮಾಡಬಹುದು ಸರ್” ಎಂದೆ. ಅವರು ಮಾತನ್ನು ಮುಂದುವರೆಸಲಿಲ್ಲ. ಮತ್ತೊಮ್ಮೆ ಸ್ವಲ್ಪ ಜೋರಾಗಿ ಹೇಳಿದೆ. ಮತ್ತೂ ಅವರ ಮಾತಿಲ್ಲ. ಅವರ ಕೈ ಅಲುಗಾಡಿಸಿ, “ತಾವು ಮಾತನಾಡಿ ಸರ್” ಎಂದೆ. ಅವರು ಧ್ಯಾನಸ್ಥಿತಿಯಿಂದ ಮರಳಿದವರಂತೆ, , “What lovely translation I say, I also understood Kannada” (ಎಷ್ಟು ಒಳ್ಳೆಯ ಅನುವಾದ! ನನಗೂ ಕನ್ನಡ ಅರ್ಥವಾಯಿತು”) ಎಂದರು. ಅವರಿಗೆ ಮಾಧ್ಯಮಗಳ ಎಲ್ಲ ಕ್ಯಾಮರಗಳು, ಜನರ ಕಣ್ಣುಗಳು ತಮ್ಮನ್ನೇ ನೋಡುತ್ತಿವೆ ಎಂಬುದು ತಿಳಿದಿರದಂತೆ ಮುಗ್ಧತೆ ಪ್ರದರ್ಶಿಸಿದರು. ಮಾತು ಮುಗಿದ ಮೇಲೆ ವೇದಿಕೆಯಿಂದ ಹೊರಬಂದು ಮತ್ತೊಂದು ಮೈಕ್ ಇಸಿದುಕೊಂಡು, “ಎಲ್ಲರೂ ಡಾ. ಕೆ. ಅವರಿಗೆ ಧನ್ಯವಾದಗಳನ್ನು ಹೇಳಬೇಕು. ಅವರಿಂದಾಗಿ ನನ್ನ ಭಾಷಣ ನಿಮಗೆ ತಿಳಿಯಿತು” ಎಂದು ನನ್ನನ್ನು ತಬ್ಬಿಕೊಂಡರು. ನನಗೆ ಅದೊಂದು ಅಮೃತಕ್ಷಣ. ಆಗ ನಾನವರಿಗೆ ಹೇಳಿದೆ, “ಸರ್, ಆಗಲೆ ತಾವು ಕೇಳಿದಿರಲ್ಲ, ಯಾಕೆ ತಮ್ಮನ್ನು ನೋಡಲು ಬರುತ್ತಾರೆ ಎಂದು? ಅದಕ್ಕೆ ಉತ್ತರ ನನಗೆ ಗೊತ್ತಿದೆ ಸರ್. ಬದುಕಿನುದ್ದಕ್ಕೂ ಮೂರ್ಖರಾಗಿ ಇರುವುದು ಸುಲಭ. ಆದರೆ ಮುಗ್ಧರಾಗಿ ಬದುಕುವುದು ಅಸಾಧ್ಯ. ನೀವು ಹಾಗಿದ್ದೀರಿ. ನಿಮ್ಮ ಮುಗ್ಧತೆಯೇ ಎಲ್ಲರನ್ನೂ ಸೆಳೆಯುತ್ತದೆ”.
ಅದು ಕಲಾಂರವರ ವಿಶೇಷತೆ. ಅವರು ಪಡೆದ ಶಿಕ್ಷಣ, ಹೊಂದಿದ ಅಧಿಕಾರ, ಪಡೆದ ಪ್ರಶಸ್ತಿಗಳು, ರಾಷ್ಟ್ರಪತಿ ಪದವಿ ಯಾವವೂ ಅವರ ಮುಗ್ಧತೆಯನ್ನು ಕಿತ್ತುಕೊಳ್ಳಲಿಲ್ಲ ಎನ್ನುವುದೇ ವಿಶೇಷ, ನಮ್ಮೆಲ್ಲರ ಭಾಗ್ಯ.