ನೇಗಿನಹಾಳ ಬಸವಸಿದ್ಧಲಿಂಗ ಸ್ವಾಮೀಜಿ ಅಂತ್ಯಕ್ರಿಯೆ

ಬಸವಸಿದ್ಧಲಿಂಗ ಸ್ವಾಮೀಜಿ
Advertisement

ಬೈಲಹೊಂಗಲ(ಬೆಳಗಾವಿ ಜಿಲ್ಲೆ): ಮಠದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರಮಠದ ಬಸವಸಿದ್ಧಲಿಂಗ ಸ್ವಾಮೀಜಿ ಅವರ ಅಂತ್ಯಕ್ರಿಯೆ ಭಕ್ತ ಸಾಗರದ ಮಧ್ಯೆ ಮಂಗಳವಾರ ನೆರವೇರಿತು.
ಮರಣೋತ್ತರ ಪರೀಕ್ಷೆ ಬಳಿಕ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಸೋಮವಾರ ರಾತ್ರಿ ಮಠಕ್ಕೆ ತರಲಾಗಿತ್ತು. ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಅಪಾರ ಸಂಖ್ಯೆಯ ಜನ ತಂಡೋಪ ತಂಡವಾಗಿ ಬಂದು ಪಾರ್ಥಿವ ಶರೀರದ ದರ್ಶನ ಪಡೆದರು.
ಗದಗ ಡಂಬಳದ ಡಾ. ಸಿದ್ಧರಾಮ ಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ, ಯಕ್ಕುಂಡಿ ಪಂಚಾಕ್ಷರ ಸ್ವಾಮೀಜಿ, ಉಳವಿ ಬಸವಪೀಠದ ಬಸವಪ್ರಕಾಶ ಸ್ವಾಮೀಜಿ, ಶಿವಮೊಗ್ಗ, ದಾವಣಗೆರೆ ಬಸವಪ್ರಭು ಸ್ವಾಮೀಜಿ, ಸೇರಿದಂತೆ ಸುತ್ತಮುತ್ತಲಿನ ಹಲವಾರು ಪೂಜ್ಯರು, ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಡಿ.ಬಿ.ಇನಾಮದಾರ, ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದುಕೊಂಡರು.
ಗ್ರಾಮದಲ್ಲಿ ಮೆರವಣಿಗೆ:
ಮಠದ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಭವ್ಯ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಸಹಸ್ರಾರು ಭಕ್ತರು, ಗ್ರಾಮಸ್ಥರು ಕೈ ಮುಗಿದು, ಹೂವು ಮಾಲೆ ಅರ್ಪಿಸಿ ಭಕ್ತಿ ಮೆರೆದರು.