ನೇತ್ರಗಳು ಪವಿತ್ರ.. ಅವುಗಳನ್ನು ಸುಡಬೇಡಿ…: ಡಾ.ರಾಮಲಿಂಗಪ್ಪ

Advertisement

ಹುಬ್ಬಳ್ಳಿ : ನೇತ್ರದಾನದಿಂದ ಮತ್ತೊಬ್ಬರ ಬದುಕಿಗೆ ಬೆಳಕು ನೀಡಿದಂತಾಗುತ್ತದೆ. ಇದೊಂದು ಮಹೋನ್ನತ ಕಾರ್ಯ. ಪ್ರತಿಯೊಬ್ಬರು ನೇತ್ರದಾನ ಮಾಡಬೇಕು. ಅವುಗಳು ಪವಿತ್ರವಾಗಿದ್ದು, ಯಾರೂ ಅವುಗಳನ್ನು ಸುಡಬಾರದು ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರತಾನಿ ಮನವಿ ಮಾಡಿದರು.
ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯು ಕಿಮ್ಸ್ ಆವರಣದಿಂದ ಎಂ.ಎಂ ಜೋಶಿ ಆಸ್ಪತ್ರೆಯವರೆಗೆ ಹಮ್ಮಿಕೊಂಡಿದ್ದ ದೃಷ್ಟಿಗಾಗಿ ನಡಿಗೆ ಎಂಬ ನೇತ್ರದಾನ ಜಾಗೃತಿ ಕುರಿತ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.


ನೇತ್ರದಾನ ಮಾಡುವುದರಿಂದ ಯಾರಿಗೂ ನಷ್ಟವಿಲ್ಲ. ಬದಲಾಗಿ ಒಂದು ಪವಿತ್ರ ಕಾರ್ಯ ಮಾಡಿದಂತಾಗುತ್ತದೆ. ದೃಷ್ಟಿಯನ್ನು ಕಳೆದುಕೊಂಡವರಿಗೆ ಈ ಜಗತ್ತು ನೋಡುವ ಭಾಗ್ಯ ನೀಡಿದಂತಾಗುತ್ತದೆ. ನೇತ್ರದಾನ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಬೇಕಾಗಿದೆ ಎಂದರು.
ಡಾ.ಎಂ.ಎಂ.ಜೋಶಿ ಅಸ್ಪತ್ರೆಯ ನಿರ್ದೇಶಕ ಡಾ.ಶ್ರೀನಿವಾಸ್ ಜೋಶಿ ಮಾತನಾಡಿ, ನಮ್ಮ ದೇಶದಲ್ಲಿ ಲಕ್ಷಾಂತರ ಜನರು ದೃಷ್ಟಿಯನ್ನು ಪಡೆಯಲು ಕುತೂಹಲದಿಂದ ಕಾಯುತ್ತಿದ್ದಾರೆ. ಬೇರೆಯವರು ನೇತ್ರದಾನ ಮಾಡಿದರೆ ಮಾತ್ರ ಅವರು ಮತ್ತೆ ಜಗತ್ತನ್ನು ಅವರು ನೋಡಬಲ್ಲರು. ಹೀಗಾಗಿ ಎಲ್ಲರೂ ನೇತ್ರದಾನ ಮಾಡಲು ಮುಂದೆ ಬರಬೇಕು. ಬೇರೆಯವರಿಗೂ ನೇತ್ರದಾನಕ್ಕೆ ಪ್ರೋತ್ಸಾಹಿಸಬೇಕು. ಇದೊಂದು ಮಾನವೀಯ ಕಾರ್ಯವಾಗಿದೆ ಎಂದು ನುಡಿದರು.
ಡಾ. ಎಂ.ಎಂ ಜೋಶಿ ಆಸ್ಪತ್ರೆಯ ನಿರ್ದೇಶಕರಾದ ಕೃಷ್ಣಪ್ರಸಾದ್ ಮಾತನಾಡಿ, ನೇತ್ರದಾನದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಬೇಕಾಗಿದೆ. ಈ ಉದ್ದೇಶದಿಂದ ನಮ್ಮ ಸಂಸ್ಥೆಯು ಈ ಜಾಥಾ ಅಯೋಜನೆ ಮಾಡಿದೆ ಎಂದರು.
ಡಾ.ಎಂ.ಎಂ.ಜೋಶಿ ಆಸ್ಪತ್ರೆಯ ನಿರ್ದೇಶಕ ಡಾ.ಗುರುಪ್ರಸಾದ್ , ಕಿಮ್ಸ್ ನೇತ್ರ ವಿಭಾಗದ ಮುಖ್ಯಸ್ಥೆ ಡಾ.ಸವಿತಾ, ಕಿಮ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ ಹಾಗೂ ಇತರರಿದ್ದರು.
ಡಾ.ಎಂ.ಎಂ.ಜೋಶಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು, ಕಿಮ್ಸ್ ಕಾಲೇಜಿನ ನೇತ್ರ ವಿಭಾಗದ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.