`ಒಂದು ನಿಲ್ದಾಣ ಒಂದು ಉತ್ಪನ್ನ’ ಜನಪ್ರಿಯತೆ

Advertisement

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಭಾರತೀಯ ರೈಲ್ವೆ ಸಚಿವಾಲಯದ ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯನ್ನುವೋಕಲ್ ಫಾರ್ ಲೋಕಲ್’ ಎಂಬ ದೃಷ್ಟಿಕೋನದಿಂದ ಪ್ರಾರಂಭಿಸಿದ ಯೋಜನೆಗೆ ಪ್ರಯಾಣಿಕರು, ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಲಭಿಸಿದೆ.
ಸ್ಥಳೀಯರೇ ತಯಾರಿಸಿದ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಒದಗಿಸುವುದು ಮತ್ತು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ಸ್ವಾವಲಂಬನೆಗೆ ಅವಕಾಶ ನೀಡುವ ಮೂಲಕ ಅವರನ್ನು ಉತ್ತೇಜಿಸುವಂತೆ ಮಾಡುವುದು. ಈ ಯೋಜನೆಯಡಿ ಸ್ಥಳೀಯರಿಂದ ತಯಾರಿಸಿದ ಸ್ಥಳೀಯ ಉತ್ಪನ್ನಗಳ ಪ್ರದರ್ಶನ, ಮಾರಾಟ ಮತ್ತು ಹೆಚ್ಚಿನ ಪ್ರಚಾರವನ್ನು ನೀಡುವ ಉದ್ದೇಶದಿಂದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗಿದೆ.
2022ರ ಮಾರ್ಚ್ 25ರಂದು ಯೋಜನೆ ಆರಂಭಿಸಿ ರೈಲ್ವೆ ಇಲಾಖೆಯು 728 ನಿಲ್ದಾಣ, 21 ರಾಜ್ಯ, 3 ಕೇಂದ್ರಾಡಳಿತ ಪ್ರದೇಶದ 728 ನಿಲ್ದಾಣಗಳಲ್ಲಿ ಒಟ್ಟು 785 ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆ ಆರಂಭಿಸಿದೆ. ಈ ಮೂಲಕ ದೇಶಾದ್ಯಂತ ವಿಸ್ತರಿಸಿಕೊಂಡು ಜನಮನ ಗೆದ್ದಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳ ಮತ್ತು ಉತ್ಪನ್ನಗಳ ಪ್ರದರ್ಶನಕ್ಕೆ ಅವಕಾಶವನ್ನು ನೀಡಲಾಗಿದೆ. ರಾಷ್ಟ್ರದೆಲ್ಲೆಡೆ ಏಕರೂಪದ ಆಕರ್ಷಕವಾದ ವಿನ್ಯಾಸವನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಅವರು ಮಾಡಿದ್ದು ವಿಶೇಷ. ಕರ್ನಾಟಕದ ಒಟ್ಟು 21 ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಮಳಿಗೆಗಳನ್ನು ಕಾಣಬಹುದು.
ಮಳಿಗೆ ಸ್ಥಾಪನೆ ಉದ್ದೇಶವೇನು?
ಮಹಿಳಾ ಸಬಲೀಕರಣ ಉತ್ತೇಜಿಸುವ ಜೊತೆಗೆ ಸ್ಥಳೀಯ ಸ್ವಸಹಾಯ ಸಂಘ ಮತ್ತು ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಸ್ಥಳೀಯರಿಗೆ ಆದ್ಯತೆ ನೀಡಿ ಅವರನ್ನು ಉತ್ತೇಜನ ಮಾಡುವುದ ಮತ್ತು ಆ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದಾಗಿದೆ. ಬುಡಕಟ್ಟು ಜನಾಂಗದವರು ಸ್ಥಳೀಯವಾಗಿ ತಯಾರಿಸಿದ ಕಲಾಕೃತಿಗಳು, ನೇಕಾರಿಕೆಯಿಂದ ತಯಾರಿಸಿದ ಕೈಮಗ್ಗಗಳು, ಕರಕುಶಲ ವಸ್ತುಗಳು ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಒಳಗೊಂಡಿರುತ್ತವೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಹೇಳುತ್ತಾರೆ.

೧. ಕರಕುಶಲ/ಕಲಾಕೃತಿಗಳು
೨. ಜವಳಿ ಮತ್ತು ಕೈಮಗ್ಗಗಳು
೩. ಸಾಂಪ್ರದಾಯಿಕ ಉಡುಪುಗಳು
೪. ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗಳಿಂದ ಸಂಸ್ಕರಿಸಿದ ಆಹಾರಗಳು (ಉದಾಹರಣೆಗೆ ಸಿರಿಧಾನ್ಯ)

ಕರ್ನಾಟಕದಲ್ಲಿ ಎಲ್ಲೆಲ್ಲಿ ಸ್ಥಾಪನೆ, ಉದ್ಯಮಿಗಳ ನುಡಿ ಏನು?
ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಮಳಿಗೆಯಲ್ಲಿ ಚನ್ನಪಟ್ಟಣದ ಆಟಿಕೆಗಳು, ತುಮಕೂರಿನ ಮಳಿಗೆಯಲ್ಲಿ ತೆಂಗಿನ ಉತ್ಪನ್ನಗಳು, ಅರಸೀಕೆರೆ ನಿಲ್ದಾಣದಲ್ಲಿ ಸಾಂಪ್ರದಾಯಿಕ ಕೋಲ್ಡ್ ಪ್ರೆಸ್ಡ್ ಎಣ್ಣೆಗಳು ಸೇರಿದಂತೆ ಇನ್ನೀತರ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಮಳಿಗೆಗೆ ರಾಜ್ಯದ ಮತ್ತು ಇತರ ರಾಜ್ಯಗಳಿಂದ ಹೆಚ್ಚು ಹೆಚ್ಚು ಪ್ರಯಾಣಿಕರು ಭೇಟಿ ನೀಡಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹೆಚ್ಚಿನ ಗ್ರಾಹಕರು (ಆಯುರ್ವೇದ ತೈಲ-ಕೀಲು ನೋವು ನಿವಾರಣೆಗೆ ಸಂಬಂಧಿಸಿ ತೈಲ, ಶೀತದ ಲಕ್ಷಣಗಳಿಗೆ ಬೇಕಾಗುವ ತೈಲಗಳು ಇತ್ಯಾದಿ) ಬುಕ್ ಆರ್ಡರ್ ಮಾಡುವ ಮೂಲಕವೂ ಖರೀದಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಬೇಕಾಗುವ ವಸ್ತುಗಳನ್ನು ಗ್ರಾಹಕರಿಗೆ ಪೂರೈಸಲು ಸಹಾಯವಾಗುತ್ತಿದೆ ಎಂದು ಹುಬ್ಬಳ್ಳಿ ಮೂಲದ ವೇದಗಿರಿ ಫಾರ್ಮಾಸ್ಯುಟಿಕಲ್ಸ್ನ್ ಶ್ರೀ ರಾಚಪ್ಪ ತಂಬರಳ್ಳಿ ತಿಳಿಸಿದ್ದಾರೆ.
ಬೆಳಗಾವಿ ನಿಲ್ದಾಣದಲ್ಲಿ ಚಚಡಿ ಗ್ರಾಮದ (ಸವದತ್ತಿ ತಾಲ್ಲೂಕು) ಮೀನಾಕ್ಷಿ ಸ್ವ-ಸಹಾಯ ಗುಂಪಿನ ಸ್ವ-ಸಹಾಯ ಸಂಘಕ್ಕೆ ಅವಕಾಶ ಕಲ್ಪಿಸಿದೆ. ಮಹಿಳಾ ಉದ್ಯಮಿಗಳು ಮುಂಚೂಣಿಗೆ ಬರಲು ಇದು ಸಹಾಯ ಮಾಡುವ ಜೊತೆಗೆ ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುತ್ತಿದೆ. ಮನೆಯಲ್ಲಿ ತಯಾರಿಸಿದ ತಿನಿಸುಗಳನ್ನು ಸುಲಭವಾಗಿ ಸಂಗ್ರಹಿಸಲು ಮತ್ತು ಪ್ರದರ್ಶಿಸಲು ಅನುವು ಮಾಡಿಕೊಟ್ಟಿರುವ ರೈಲ್ವೆ ಇಲಾಖೆಗೆ ಮೀನಾಕ್ಷಿಯವರು ಅಭಿನಂದಿಸಿದ್ದಾರೆ.
ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ನಾಗಶ್ರೀ ವೈ.ಆರ್ ಅವರಿಗೆ ರಾಗಿ ಮತ್ತು ಸಾವಯವ ಜೇನುತುಪ್ಪವನ್ನು ಮಾರಾಟ ಮಾಡಲು ಹಂಚಿಕೆ ಮಾಡಲಾಗಿದೆ. ನಾಗಶ್ರೀ ವೈ.ಆರ್ ಅವರು ಬೆಂಗಳೂರಿನಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಮ್ಮೆ ಎನಿಸುತ್ತದೆ ಜೊತೆಗೆ ಈ ಯೋಜನೆಯಿಂದ ಮಹಿಳಾ ಉದ್ಯಮಿಗಳ ಬೆಂಬಲಿಸಿದ್ದಕ್ಕಾಗಿ ರೈಲ್ವೆ ಇಲಾಖೆಗೆ ಕೃತಜ್ಞತೆ ಸಲ್ಲಿಸುವೆ ಎಂದು ಹೇಳುತ್ತಾರೆ.
ಕೆ.ಎಸ್.ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಬೆಂಗಳೂರಿನ ಬಾಲಾಜಿ ಹ್ಯಾಂಡಿಕ್ರಾಫ್ಟ್ಸ್ನ ಕಾಟೇಜ್ ಉದ್ಯಮಿ ವಿ. ಪ್ರಕಾಶ್ ಅವರು ಮಾತನಾಡಿ, ಈ ಯೋಜನೆಯಿಂದ ತಮ್ಮ ಉತ್ಪನ್ನವನ್ನು ಕರ್ನಾಟಕದ ಅತ್ಯಂತ ಜನನಿಬಿಡ ರೈಲು ನಿಲ್ದಾಣದಲ್ಲಿ ಪ್ರದರ್ಶಿಸಲಾಗುತ್ತಿರುವುದರಿಂದ ತಮಗೆ ಅಪಾರ ಲಾಭವಾಗಿದೆ. ಬೆಂಗಳೂರು ನಿಲ್ದಾಣಕ್ಕೆ ಬರುವ ಪ್ರವಾಸಿಗರಲ್ಲಿ ಚನ್ನಪಟ್ಟಣದ ಆಟಿಕೆಗಳು ಹೆಚ್ಚು ಜನಪ್ರಿಯವಾಗುತ್ತಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಾವಣಗೆರೆ ರೈಲು ನಿಲ್ದಾಣದಲ್ಲಿ ಅಕ್ಕನಾಗಮ್ಮ ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಮಹಿಳಾ ಮಂಡಳಿಯ ಸಾಕಮ್ಮ ಅವರು ಖಾದಿ ಜವಳಿ ಮಾರಾಟ ಮಾಡುತ್ತಿದ್ದಾರೆ. ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಕೃಷಿ ಉತ್ಪನ್ನಗಳು ಮತ್ತು ಜವಳಿ ಉತ್ಪನ್ನಗಳ ಮಾರಾಟದ ಮಳಿಗೆ ನಡೆಸುತ್ತಿದ್ದಾರೆ. ಒಟ್ಟಾರೆ ಈ ಯೋಜನೆಯು ವಿಶೇಷವಾಗಿ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡಿದೆ ಎಂದು ಹೇಳಬಹುದು.