ಕನ್ನಡದಲ್ಲಿ ನೀಡಿದ ಚೆಕ್ ಅಮಾನ್ಯ: ಬ್ಯಾಂಕಿಗೆ ದಂಡ

Advertisement

ಧಾರವಾಡ: ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ ಮಾಡಿದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 85,177 ರೂ. ದಂಡ ಪರಿಹಾರ ಪಾವತಿಸುವಂತೆ ಆದೇಶಿಸಿದೆ.

ಧಾರವಾಡದ ಇಂಗ್ಲಿಷ್ ಪ್ರಾಧ್ಯಾಪಕ ವಾದಿರಾಜಾಚಾರ್ಯ ಇನಾಮದಾರ ಎಂಬುವರು ತಮ್ಮ ಉಳಿತಾಯ ಖಾತೆಯಲ್ಲಿದ್ದ ಹಣ ಹಿಂಪಡೆಯಲು ಕನ್ನಡದಲ್ಲಿ ಬರೆದು ಸಲ್ಲಿಸಿದ್ದ ಚೆಕ್ ಅನ್ನು ಹಳಿಯಾಳದ ಎಸ್‌ಬಿಐ ಶಾಖೆ ತಿರಸ್ಕರಿಸಿತ್ತು. ಇದರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ವಾದಿರಾಜಾಚಾರ್ಯ ದೂರು ದಾಖಲಿಸಿದ್ದರು.
ಪ್ರಕರಣವನ್ನು ವಿಚಾರಣೆ ಕೈಗೆತ್ತಿಕೊಂಡ ಆಯೋಗವು, ದೂರುದಾರರ ಉಳಿತಾಯ ಖಾತೆಯಲ್ಲಿ 9 ಲಕ್ಷ ರೂ.ಕ್ಕಿಂತ ಹೆಚ್ಚು ಹಣ ಇದ್ದರೂ ಕೇವಲ 6 ಸಾವಿರ ರೂ. ಮೌಲ್ಯದ ಚೆಕ್‌ನ್ನು ಕನ್ನಡ ಭಾಷೆಯಲ್ಲಿ ಬರೆದಿದ್ದಕ್ಕಾಗಿ ಅಮಾನ್ಯ ಮಾಡಿರುವುದನ್ನು ಸೇವಾ ನ್ಯೂನ್ಯತೆ ಎಂದು ಪರಿಗಣಿಸಿತು. ಹಳಿಯಾಳ ಎಸ್‌ಬಿಐ ಬ್ಯಾಂಕ್ ಶಾಖೆಯು ಫಿರ್ಯಾದಿಗೆ ಪರಿಹಾರ ಮತ್ತು ದಂಡ ರೂಪದಲ್ಲಿ ಒಟ್ಟು 85,177 ರೂ.ಗಳನ್ನು ಪಾವತಿಸುವಂತೆ ಆದೇಶಿಸಿತು. ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಈ ತೀರ್ಪು ನೀಡಿದ್ದಾರೆ.
ಬ್ಯಾಂಕುಗಳಲ್ಲಿ ತ್ರಿಭಾಷಾ ಸೂತ್ರದ ಬಳಕೆ ನಿಯಮಾನುಸಾರ ಸ್ಥಳೀಯ ಭಾಷಾ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ನೀಡಿರುವ ತೀರ್ಪು ವಿಶೇಷ ಹಾಗೂ ಮಹತ್ವದ್ದಾಗಿದೆ.