ರಸ್ತೆ ಅಪಘಾತ: ಚಿಕ್ಕ ಮಕ್ಕಳು ಸೇರಿ ಆರು ಜನರ ಸಾವು

Advertisement

ಕುಷ್ಟಗಿ: ಕಾರಿನ ಟೈಯರ್ ಬ್ಲಾಸ್ಟ್ ಆಗಿ ವನ್ ವೇದಲ್ಲಿ ಇಳಕಲ್ ಕಡೆಗೆ ಹೊರಟಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ೨ ವರ್ಷದ ಮಗು ಸೇರಿದಂತೆ ಆರು ಜನರು ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ರುದ್ರಾವಕ ಘಟನೆ ರವಿವಾರ ಸಂಜೆ ಸಂಭವಿಸಿದೆ.
ತಾಲೂಕಿನ ರಾಷ್ಟ್ರೀಯ ದಾರಿಯಲ್ಲಿರುವ ಕಲಿಕೇರಿ ಸಸ್ಯ ಕ್ಷೇತ್ರದ ಹತ್ತಿರ ಬರುವ ಒನ್ ವೇ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ ಆಗಿ ಡಿವೈಡರ್‌ನಿಂದ ಕಾರು ಜಿಗಿದು ಇಳಕಲ್‌ ಕಡೆಗೆ ಹೊರಟಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದ್ದು ಲಾರಿಯ ಮುಂಭಾಗದ ಕೆಳಗಡೆಗೆ ಕಾರಿನ ಅರ್ಧಭಾಗ ಸಿಲುಕು ಹಾಕಿಕೊಂಡಿದೆ. ಈ ಪರಿಣಾಮವಾಗಿ ಕಾರಿನಲ್ಲಿದ್ದ ಆರು ಜನರು ದುರ್ಮರಣ ಹೊಂದಿದ್ದಾರೆ.
ಕಾರಿನ ಚಾಲಕನ ನಿರ್ಲಕ್ಷತನ: ಕಾರಿನ ಚಾಲಕನ ನಿರ್ಲಕ್ಷತನದಿಂದ ಈ ದುರ್ಘಟನೆ ಸಂಭವಿಸಿದ್ದು. ವಿಜಯಪುರ ಮೂಲದವರಾದ ರಾಜಪ್ಪ ಬನಸೂಡಿ(೪೦),ರಾಘವೇಂದ್ರ ಕಾಂಬಳೆ(೨೪), ಅಕ್ಷಯ ಶಿವಶರಣ(೨೧), ಜಯಶ್ರೀ (೨೬),ಚಿಕ್ಕ ಮಕ್ಕಳಾದ ರಾಕಿ(೪) ಹಾಗೂ ರಕ್ಷಿತಾ (೨) ಈ ಎಲ್ಲರು ಸಾವನಪ್ಪಿದ್ದಾರೆ ಎನ್ನಲಾಗಿದೆ.
ಕ್ರೇನ್ ಮೂಲಕ ಕಾರ ತೆಗೆಯಲಾಯಿತು: ಲಾರಿಯ ಮುಂಭಾಗದ ಭಾಗದಲ್ಲಿ ಸಿಲುಕಿದ ಕಾರನ್ನು ಓರಿಟಿಲ್ ಕಂಪನಿಗೆ ಸೇರಿದ ವಾಹನದ ಮೂಲಕ ಕಾರನ್ನು ಹೊರ ತೆಗೆಯಲು ಎಷ್ಟು ಪ್ರಯತ್ನ ನಡೆಸಿದರು ಸಹ ವಿಫಲವಾದ ಹಿನ್ನೆಲೆಯಲ್ಲಿ ಕ್ರೇನ್ ಮೂಲಕ ಕಾರನ್ನು ಹೊರ ತೆಗೆಯಲಾಯಿತು. ಕಾರಿನಲ್ಲಿ ಸಾವನಪ್ಪಿದ ಎಲ್ಲರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾರ್ಗದರ್ಶನದ ಮೇರೆಗೆ ಪಿಎಸ್ಐ ಮೌನೇಶ್ ರಾಠೋಡ್ ಭೇಟಿ ನೀಡಿ ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ ಸಾವನಪ್ಪಿದ ಮೃತದೇಹಗಳನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳಿಸಿಕೊಡುವುದಷ್ಟೇ ಅಲ್ಲದೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.