ಯಮಕನಮರಡಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅದ್ದೂರಿ ರೋಡ್‌ ಶೋ

Advertisement

ಯಮಕನಮರಡಿ: ಯಮಕನಮರಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾವು ಸದಾ ಸಿದ್ಧ, ಯಮಕನಮರಡಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ನಿಮ್ಮ ಬೆಂಬಲ ಮತ್ತು ವಿಶ್ವಾಸ ಸದಾ ಇರಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.
ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ ಲೋಕೋಪಯೋಗಿ ಇಲಾಖೆಯ ಸಚಿವರಾಗಿ ಯಮಕನಮರಡಿಗೆ ಪ್ರಥಮ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಯಮಕನಮರಡಿಯಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ಸ್ವಾಗತ ಸಮಾರಂಭ, ರೋಡ್ ಶೋ ನಲ್ಲಿ ಪಾಲ್ಗೊಂಡು ನಂತರ ನಡೆದ ವೇದಿಕೆ ಸಭೆಯಲ್ಲಿ ಅವರು ಮಾತನಾಡಿದರು.
ನಾವು ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಜಯಗಳಿಸಿದ್ದೇವೆ, ಬಿಜೆಪಿಯವರಂತೆ ಚುನಾವಣೆಯಲ್ಲಿ ಗೆಲ್ಲಲು ಸುಳ್ಳು ಹೇಳಲಿಲ್ಲ. ಹೀಗಾಗಿ ಜನ ನಮ್ಮನ್ನು ನಂಬಿ ಆಯ್ಕೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಅಭಿವೃದ್ಧಿಯನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.
ಕಳೆದ 15 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಕುಡಿಯಲು ನೀರು, ರಸ್ತೆಗಳು ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿದ್ದೇವೆ ಎಂದ ಅವರು, ನನ್ನನ್ನು 57 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ ಕ್ಷೇತ್ರದ ಜನರಿಗೆ, ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ನಾನು ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲಿಲ್ಲ. 103 ಬೂತ್‌ ಗಳಲ್ಲಿ ಹಿನ್ನಡೆಯಾದರೂ ಜಯಗಳಿಸಿದ್ದೆ, ಈ ಭಾರಿ 52 ಬೂತ್‌ ಗಳಲ್ಲಿ ಹಿನ್ನಡೆಯಾಗಿದೆ. 1 ಲಕ್ಷಕ್ಕೂ ಅಧಿಕ ಮತ ಪಡೆದು 57 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಗೆಲುವಿನ ಅಂತರ ಇನ್ನಷ್ಟು ಹೆಚ್ಚಳವಾಗಬೇಕೆಂದು ತಿಳಿಸಿದರು.
ವಿರೋಧಿಗಳು ಇದ್ದಾಗ ಮಾತ್ರ ರಾಜಕೀಯಕ್ಕೆ ಒಂದು ಅರ್ಥ ಬರುತ್ತದೆ. ವಿರೋಧಿಗಳು ಇಲ್ಲದೇ ಹೋದರೆ ಕಾರ್ಯಕರ್ತರು ಮನೆಯಲ್ಲಿ ಮಲಗುತ್ತಾರೆ. ಬಿಜೆಪಿಯವರು ನಮ್ಮನ್ನು ಸೋಲಿಸುತ್ತೇನೆ ಸೋಲಿಸುತ್ತೇನೆ ಎಂದು ಪದೇ ಪದೇ ಹೇಳಿದ್ದರಿಂದ ಕಾರ್ಯಕರ್ಯರು ಎಚ್ಚರಗೊಂಡು ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದಾರೆ ಎಂದರು.
ಯವ ನಾಯಕ ರಾಹುಲ್‌ ಜಾರಕಿಹೊಳಿ ಮಾತನಾಡಿ, ನಿಮ್ಮ ಆಶೀರ್ವಾದದಿಂದ ತಂದೆ ಸತೀಶ್ ಜಾರಕಿಹೊಳಿ ಅವರು 57 ಸಾವಿರ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ದೀನ ದಲಿತರ, ಹಿಂದುಳಿದವರ, ರೈತರ, ಕಾರ್ಮಿಕರ ಪ್ರಗತಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿಯವರು ನಮ್ಮ ಬಸ್‌ ಬೆಂಗಳೂರಿಗೆ ಹೋಗುತ್ತದೆ ಬಸ್‌ ಹತ್ತಿ ಎಂದರು. ಆದರೆ ಬಿಜೆಪಿಯವರ ಒಂದು ಬಸ್ ಬೆಳಗಾವಿ ಮುಟ್ಟಲಿಲ್ಲ. ಇದೊಂದು ಬಸ್ ವಂಟಮೂರಿಯೂ ದಾಟಲಿಲ್ಲಿ. ಆದರೆ ನಮ್ಮ ಬಸ್ ಮಾತ್ರ ನಾಲ್ಕನೇ ಬಾರಿಯೂ ಬೆಂಗಳೂರು ಹೋಗಿ ತಲುಪಿದೆ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್‌ ಮುಖಂಡ ಮಹಾಂತೇಶ ಮಗದುಮ್ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಬಿಜೆಪಿಯವರು ನಮ್ಮ ನಾಯಕ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಬೇಕೆಂದು ಪಣ ತೊಟ್ಟರು, ಆದರೆ ಸುಳ್ಳು ಹೇಳುವ ಬಿಜೆಪಿಯವರನ್ನು ಯಮಕನಮರಡಿ ಜನತೆ ನಂಬಲಿಲ್ಲ. ರಾಜ್ಯದಲ್ಲಿಯೇ ಟಾಪ್ ಐದರಲ್ಲಿ ಆಯ್ಕೆ ಮಾಡಿದರು. ಇದೇ ಸತೀಶ್ ಅಣ್ಣಾ ಜಾರಕಿಹೊಳಿ ಅವರ ತಾಕತ್ತು ಎಂದರು.
ಸಚಿವ ಸತೀಶ್‌ ಜಾರಕಿಹೊಳಿ ಅದ್ದೂರಿ ರೋಡ್‌ ಶೋ: ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ ಲೋಕೋಪಯೋಗಿ ಇಲಾಖೆಯ ಸಚಿವರಾಗಿ ಸತೀಶ್‌ ಜಾರಕಿಹೊಳಿ ಅವರು ಯಮಕನಮರಡಿಗೆ ಪ್ರಥಮ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅದ್ದೂರಿ ರೋಡ್ ಶೋ ನಡೆಸಿ, ಪಟಾಕಿ ಸಿಡಿಸಿ ಜಯಘೋಷ ಹಾಕುವುದರ ಮೂಲಕ ಸಂಭ್ರಮಿಸಿದರು. ಕ್ಷೇತ್ರದ ಕಾಂಗ್ರೆಸ್‌ ಪಕ್ಷ ದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಹೂ ಮಾಲೆಗಳನ್ನು ಸಮರ್ಪಿಸಿ ಶುಭ ಕೋರಿದರು.
ಕಾಂಗ್ರೆಸ್‌ ಮುಖಂಡ ಕಿರಣ ರಜಪೂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ವೀರಣ್ಣ ಬಿಸಿರೊಟ್ಟಿ, ಅಬ್ದುಲ್‌ ಗಣಿ ದರ್ಗಾ ಸೇರಿದಂತೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಪಂ, ತಾಪಂ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಸಾವಿರಾರು ಸಂಖ್ಯೆಯ ಕಾರ್ಯಕರ್ಯರು ಇದ್ದರು.