ಶೆಟ್ಟರ ಮನೆಗೆ ಡಿಕೆಶಿ ಭೇಟಿ: ಉನ್ನತ ಸ್ಥಾನ ಮಾನದ ಸುಳಿವು.‌‌..

Advertisement

ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹುಬ್ಬಳ್ಳಿ ನಿವಾಸಕ್ಕೆ ಭೇಟಿ ನೀಡಿದ್ದು, ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಡಿ.ಕೆ‌. ಶಿವಕುಮಾರ, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ ಜಾರಕಿಹೊಳಿ ಶೆಟ್ಟರ ನಿವಾಸಕ್ಕೆ ಭೇಟಿ ನೀಡಿ ಕೆಲ‌ಕಾಲ ಗೌಪ್ಯ ಸಭೆ ನಡೆಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಸಂಪುಟದಲ್ಲಿ ಜಗದೀಶ ಶೆಟ್ಟರಗೆ ಉನ್ನತ ಸ್ಥಾನ ಮಾನ ನೀಡುವ ಸುಳಿವು ನೀಡಿದರು. ಅಲ್ಲದೆ, ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರಿಂದ ಬಿ ಫಾರಂ ಕೊಟ್ಟ ಮೇಲೆ ಜಗದೀಶ ಶೆಟ್ಟರ್ ಜೊತೆ ಸರಿಯಾಗಿ ಮಾತನಾಡಿರಲಿಲ್ಲ. ಹೀಗಾಗಿ ಅವರ ಭೇಟಿಗೆ ಆಗಮಿಸಿರೋದಾಗಿ ಹೇಳಿದರು. ಶೆಟ್ಟರ್, ಸವದಿ, ಗುಬ್ಬಿ ಶ್ರೀನಿವಾಸ ಅವರಿಂದ ನಮಗೆ ಶಕ್ತಿ ಬಂದಿದೆ. ಇವರೆಲ್ಲ ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ಹೀಗಾಗಿ ಬಹಳ ಬದಲಾಗಣೆ ಆಗಿದ್ದು, ದೊಡ್ಡ ಅವಕಾಶ ಸಿಕ್ಕಿದೆ. ದೇವರು ವರವನ್ನೂ ಕೊಡಲ್ಲ… ಶಾಪನೂ ಕೊಡಲ್ಲ‌ ಅವಕಾಶ ಮಾತ್ರ ಕೊಡ್ತಾನೆ ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.
5 ಗ್ಯಾರಂಟಿಗಳ ಬಗ್ಗೆ ಮಾತನಾಡಿ, ಇವತ್ತು ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ನಡೆಯಲಿದೆ. ನಾವು ನುಡಿದಂತೆ ನಡೆಯುತ್ತೇವೆ ಎಂದ ಡಿಕೆಶಿ, ಶೆಟ್ಟರ್ ಜೊತೆಗೆ ಇರುವಂತೆ ವರಿಷ್ಠರ ಆದೇಶ ಇದೆ. ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇಲೆ ಕೆಲ ಸಂದೇಶಗಳನ್ನು ಶೆಟ್ಟರ್‌ಗೆ ತಲುಪಿಸದ್ದೇವೆ ಎಂದರು.
ಬಳಿಕ ಮಾತನಾಡಿದ ಮಾಜಿ ಸಿಎಂ ಜಗದೀಶ ಶೆಟ್ಟರ, ಡಿಕೆ ಶಿವಕುಮಾರ ಅವರ ಜೊತೆ ಔಪಚಾರಿಕ ಮಾತುಕತೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಡಿಕೆಶಿ ಸಂತೋಷ ವ್ಯಕ್ತಪಡಿಸಿದ್ದಾರೆ. ಮುಂಬರುವ ಲೋಕಸಭೆ, ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ತಯಾರಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಪಕ್ಷವನ್ನ ಇನ್ನೂ ಹೆಚ್ಚಿನ ರೀತಿಯಲ್ಲಿ ಬಲ‌ಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ. ಅವರೂ ಸಹ ಕೆಲವು ಸಲಹೆ, ಸೂಚನೆಗಳನ್ನ ನೀಡಿದ್ದಾರೆ‌
ಪಕ್ಷ ನನ್ನ ಜೊತೆಗಿದೆ ಅನ್ನೋ ಭರವಸೆಯನ್ನ ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿ ಅನ್ನೋ‌ಬಗ್ಗೆ ಯಾವುದೂ ಚರ್ಚೆ ಮಾಡಿಲ್ಲ ಎಂದು ಶೆಟ್ಟರ ಸ್ಪಷ್ಟಪಡಿಸಿದರು‌.