‘ಶಕ್ತಿ’ ಪ್ರಭಾವ: ಕರಾವಳಿಯ ಪುಣ್ಯ ಕ್ಷೇತ್ರದಲ್ಲಿ ಜನಜಂಗುಳಿ

Advertisement

ಮಂಗಳೂರು: ಪಂಚ ಗ್ಯಾರಂಟಿಯಲ್ಲೊಂದಾದ ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯ ಪರಿಣಾಮದಿಂದಾಗಿ ಕೋಲಾರ, ಬೆಂಗಳೂರು, ಚಿತ್ರದುರ್ಗ, ತುಮಕೂರು, ಉತ್ತರ ಕರ್ನಾಟಕ, ಮಲೆನಾಡು ಭಾಗದಿಂದ ಮಹಿಳೆಯರು ಕರಾವಳಿಯ ಪುಣ್ಯಕ್ಷೇತ್ರಗಳತ್ತ ಆಗಮಿಸುತ್ತಿದ್ದು, ದೇವಸ್ಥಾನಗಳಲ್ಲಿ ಫುಲ್ ರಷ್.
ಕರಾವಳಿಯ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳಗಳಿಗೆ ಮಹಿಳೆಯರು ಗುಂಪು ಗುಂಪಾಗಿ ಬರುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್ಸುಗಳು ಫುಲ್. ಎರಡು ದಿನಗಳ ಹಿಂದೆಯಷ್ಟೇ ‘ಶಕ್ತಿ’ ಯೋಜನೆ ಜಾರಿಗೆ ಬಂದಿತ್ತು. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಸರಕಾರಿ ಬಸ್ಸುಗಳು ಪೂರ್ತಿ ತುಂಬಿಕೊಂಡೇ ಸಾಗುತ್ತಿವೆ.
ಧರ್ಮಸ್ಥಳಕ್ಕೆ ಬಂದು ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಬಸ್ಸುಗಳಲ್ಲಿಯೂ ಕಾಲಿಡುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ. ಎಲ್ಲ ಬಸ್ಸುಗಳಲ್ಲಿಯೂ ಪ್ರವಾಸಿ ಮಹಿಳೆಯರೇ ತುಂಬಿಕೊಂಡಿದ್ದು, ಸ್ಥಳೀಯ ಸಾಮಾನ್ಯ ಜನರಿಗೆ ಬಸ್ಸುಗಳಲ್ಲಿ ಪ್ರಯಾಣ ಮಾಡದ ಸ್ಥಿತಿ ಎದುರಾಗಿದೆ. ದೂರದ ಉತ್ತರ ಕರ್ನಾಟಕ ಭಾಗದಿಂದ ಕರಾವಳಿಗೆ ಬರುವುದಕ್ಕೆ ಸಾಮಾನ್ಯವಾಗಿ ಸಾವಿರಾರು ರೂಪಾಯಿ ಬೇಕಿದ್ದರೆ, ಈಗ ಉಚಿತ ಪ್ರಯಾಣದಿಂದಾಗಿ ದೇವರ ದರ್ಶನವಾಗುತ್ತಿದೆ. ಮಕ್ಕಳು, ಇಡೀ ಕುಟುಂಬವನ್ನು ಕಟ್ಟಿಕೊಂಡು ದೇವರ ದರ್ಶನ ಮಾಡ್ಕೊಂಡು ಬರೋಣ ಎಂದು ಜನರೆಲ್ಲ ಯಾತ್ರೆಗೆ ಹೊರಟು ನಿಂತಿದ್ದಾರೆ.
ಜನರ ದಟ್ಟಣೆಯಿಂದಾಗಿ ಪುಣ್ಯಕ್ಷೇತ್ರಗಳು, ಪ್ರವಾಸಿ ಕೇಂದ್ರಗಳಲ್ಲಿ ವ್ಯಾಪಾರವೂ ಜೋರಾಗಿದೆ. ವ್ಯಾಪಾರ ವಹಿವಾಟಿನಿಂದ ಮಾರುಕಟ್ಟೆ ಮತ್ತೆ ಚಿಗಿತುಕೊಂಡು ಹಣದ ಚಲಾವಣೆ ಬಿರುಸು ಪಡೆದುಕೊಳ್ಳಬಹುದೆಂಬ ನಿರೀಕ್ಷೆಯೂ ಗರಿಗೆದರಿದೆ. ಸಾಮಾನ್ಯವಾಗಿ ಕುಕ್ಕೆ, ಧರ್ಮಸ್ಥಳಗಳಲ್ಲಿ ವಾರಾಂತ್ಯದ ದಿನಗಳಲ್ಲಿ ಜನರ ಸಂಖ್ಯೆ ಹೆಚ್ಚಿರುತ್ತದೆ. ಇದೀಗ ವಾರದ ನಡುವೆಯೂ ಜನ ಬರಲಾರಂಭಿಸಿದ್ದಾರೆ.