ಬೆಲೆ ಏರಿಕೆಯನ್ನೇ ‘ಅಧಿಕೃತ ವ್ಯವಹಾರ’ ಮಾಡಿಕೊಂಡಿವೆ

ಕುಮಾರಸ್ವಾಮಿ
Advertisement

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇಯ ಟೋಲ್‌ ಶುಲ್ಕವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಖಂಡಿಸಿದ್ದು, ಕೇಂದ್ರ, ರಾಜ್ಯ ಸರಕಾರಗಳು ಬೆಲೆ ಏರಿಕೆಯನ್ನೇ ‘ಅಧಿಕೃತ ವ್ಯವಹಾರ’ ಮಾಡಿಕೊಂಡಿವೆ ಎಂದು ಹರಿಹಾಯ್ದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಎಚ್‌ಡಿ ಕುಮಾರಸ್ವಾಮಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯ ಟೋಲ್ ದರವನ್ನು ಯಾರಿಗೂ ಗೊತ್ತಿಲ್ಲದಂತೆ ಶೇ.22ರಷ್ಟು ಏರಿಸಿರುವುದು ಅನ್ಯಾಯದ ಪರಮಾವಧಿಯಾಗಿದ್ದು ಇದು ಖಂಡನೀಯ. ಬಿಜೆಪಿ ಹಾಗೂ ಕಾಂಗ್ರೆಸ್‌ ಸರ್ಕಾರಗಳೆರಡೂ ಸೇರಿ ಜನರ ಮೇಲೆ ಮತ್ತಷ್ಟು ಭಾರ ಹೊರೆಸಿವೆ, ಏಕಾಏಕಿ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ 30ರಿಂದ 200 ರೂ.ವರೆಗೆ ಟೋಲ್ ದರ ಹೆಚ್ಚಳ ಮಾಡಿರುವುದು ಸರಿಯಲ್ಲ, ಸಮರ್ಥನಿಯವೂ ಅಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಟೋಲ್ ದರ ಹೆಚ್ಚಿಸಿರುವುದು ‘ಹೆದ್ದಾರಿಯಲ್ಲಿ ಹಗಲು ದರೋಡೆ’ಯಷ್ಟೇ, ಎಕ್ಸ್‌ಪ್ರೆಸ್ ಹೆದ್ದಾರಿಗೆ ಭೂಮಿ ಕೊಟ್ಟಿದ್ದು ಕರ್ನಾಟಕ ಸರಕಾರ. ಇದ್ದ ನೆಲೆ ಕಳೆದುಕೊಂಡವರು ನಮ್ಮ ರೈತರು. ಈಗ 20% ಸುಲಿಗೆಗೆ ಒಳಗಾಗುತ್ತಿರುವವರು ಕೂಡ ಕನ್ನಡಿಗರೇ. ಕನ್ನಡಿಗರನ್ನು ಕೊಳ್ಳೆ ಹೊಡೆಯುವ ಧೂರ್ತ ನಡೆಗೆ ನಮ್ಮ ಧಿಕ್ಕಾರ, ಕೇಂದ್ರ, ರಾಜ್ಯ ಸರಕಾರಗಳು ಬೆಲೆ ಏರಿಕೆಯನ್ನೇ ‘ಅಧಿಕೃತ ವ್ಯವಹಾರ’ ಮಾಡಿಕೊಂಡಿವೆ. ಇನ್ನೂ ರಾಜ್ಯದ ಕಾಂಗ್ರೆಸ್‌ ಸರಕಾರ ಗ್ಯಾರಂಟಿಗಳೆಂಬ ತುಪ್ಪ ಸವರಿ, ಅದೇ ಗ್ಯಾರಂಟಿಗಳ ಇಲಾಖೆಗಳ ಮೂಲಕವೇ ಜನರ ಮೇಲೆ ಮಣಭಾರ ಹೇರುತ್ತಿದೆ. ಒಂದು ಕೈಯ್ಯಲ್ಲಿ ಕೊಟ್ಟು ಎರಡು ಕೈಗಳಲ್ಲಿ ಬರೆ ಎಳೆಯುತ್ತಿದೆ,
ಹೆದ್ದಾರಿ ಪ್ರಾಧಿಕಾರವು ಹೆಚ್ಚಳ ಮಾಡಿರುವ ಟೋಲ್ ದರವನ್ನು ಕೂಡಲೇ ಹಿಂಪಡೆಯಬೇಕು. ಹೆದ್ದಾರಿ ಪ್ರಾಧಿಕಾರದ ಮೇಲೆ ರಾಜ್ಯ ಸರಕಾರ ಒತ್ತಡ ಹಾಕಬೇಕು. ಬೆಲೆಬರೆ ಬವಣೆಯಿಂದ ಬಸವಳಿದಿರುವ ಜನರು ರೊಚ್ಚಿಗೇಳುವ ಮುನ್ನ ಟೋಲ್ ದರ ಇಳಿಯಬೇಕು. ಪ್ರತಿಪಕ್ಷವಾಗಿದ್ದಾಗ ಬೆಲೆ ಏರಿಕೆ ವಿರುದ್ಧ, ಆಡಳಿತ ಪಕ್ಷವಾದ ಮೇಲೆ ಬೆಲೆ ಏರಿಕೆ ಪರ ಇದ್ದರೆ ಜನರು ತಕ್ಕಪಾಠ ಕಲಿಸುತ್ತಾರೆ. ಊಸರವಳ್ಳಿ ವೈಖರಿ ಸಂಶಯಕ್ಕೆ ದಾರಿ. ಹಿಂದಿನ ಬಿಜೆಪಿ ಸರಕಾರದ ದಾರಿಯಲ್ಲಿಯೇ ಈ ಸರಕಾರವೂ ನಡೆಯುತ್ತಿದೆಯಾ? ಎನ್ನುವ ಅನುಮಾನ ಆರಂಭದಲ್ಲಿಯೇ ಬರುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.