ಏಕದೇವೋಪಾಸನೆ

Advertisement

ಮನೆಯಲ್ಲಿ ಏನೋ ತಾಪತ್ರಯ, ಶನಿಕಾಟವಿರಬಹುದೆಂದು ಭಾವಿಸಿ ಅದರ ನಿವಾರಣೆಗೋಸ್ಕರ ಹನುಮಪ್ಪನ ದೇವಸ್ಥಾನಕ್ಕೆ ಹೋಗುತ್ತೇವೆ. ನಮ್ಮ ತಾಪತ್ರಯಗಳನ್ನು ಅವನೆದುರಿಗೆ ವಿವರಿಸುತ್ತೇವೆ. ಪರಿಹರಿಸಲು ಪ್ರಾರ್ಥಿಸುತ್ತೇವೆ. ಸರ್ವಜ್ಞನಾದ ಸರ್ವೆಶ್ವರನಿಗೆ ನಮ್ಮೊಬ್ಬರ ಕಷ್ಟದ ಜ್ಞಾನವಿರುವುದಿಲ್ಲವೇ? ಎಲ್ಲ ಬಲ್ಲ ಅವನಿಗೆ ನಮಗೆ ಬಂದ ಕಷ್ಟಗಳ ಅರಿವೂ ಇದ್ದೇ ಇರುತ್ತದೆ. ಎಲ್ಲವನರಿತ ಅವನಿಗೆ ನಮ್ಮ ಕಷ್ಟ ಹೇಳಿಕೊಳ್ಳುವುದು ಕೇವಲ ನಮ್ಮ ಸಮಾಧಾನಕ್ಕಾಗಿ ಮಾತ್ರ. ನಮ್ಮ ಕಷ್ಟ ಪರಿಹಾರದ ಬೇಡಿಕೆಯನ್ನಿರಿಸಿ ಅದಕ್ಕಾಗಿ ಏನೇನೋ ಲಂಚ (ನೈವೇದ್ಯ, ದುಡ್ಡು, ಒಡವೆ ಇತ್ಯಾದಿ) ಕೊಡುತ್ತೇವೆ. ಏನೇನೋ ಹರಕೆ ಹೊರುತ್ತೇವೆ. ನಾಲ್ಕು ಶನಿವಾರ ಗತಿಸುತ್ತವೆ. ನಮ್ಮ ಕಷ್ಟಗಳು ಮೊದಲಿನಷ್ಟೇ, ಮೊದಲಿದ್ದಂತೆಯೇ ಇವೆ. ಆಗ ಮನದಲ್ಲಿ ಸಂಶಯ. ಈ ದೇವರಲ್ಲಿ ನಮ್ಮ ಕಷ್ಟಗಳನ್ನು ನಿವಾರಿಸುವ ಶಕ್ತಿ ಇದೆಯೋ ಇಲ್ಲವೋ ಎಂದು. ಈ ಸಂಶಯದಲ್ಲಿಯೇ ಮತ್ತೆರಡು ಶನಿವಾರ ಗತಿಸುತ್ತವೆ. ಕಷ್ಟಮಯ ಬದುಕಿನಲ್ಲಿ ಮಾತ್ರ ಬದಲಾವಣೆ ಇಲ್ಲ. ಹನುಮಂತನಿಂದಲೂ ಬಿಡಿಸಲಾಗದಷ್ಟು ಶನಿಕಾಟ ನಮಗೆ ಬಂದಿದೆ; ಇದು ಹನುಮಂತನಿಂದ ದೂರಾಗುವುದಿಲ್ಲ, ಶನಿಯ ಪ್ರಭಾವದ ಮುಂದೆ ಹನುಮಂತನ ಶಕ್ತಿ ಸಾಲದು, ಇಂತಹ ಅಶಕ್ತ ದೇವರಿಗೆ ಎಷ್ಟು ಶನಿವಾರ ನಡೆದುಕೊಂಡರೂ ಏನೂ ಪ್ರಯೋಜನವಾಗಲಾರದು ಎಂದು ಭಾವಿಸಿ ಗಣಪತಿ ಗುಡಿಯ ಕಡೆ ಗಮನಾಗಮನ ಪ್ರಾರಂಭಿಸುತ್ತೇವೆ. ಅಲ್ಲಿಯೂ ಕಷ್ಟಗಳು ದೂರಾಗುವುದಿಲ್ಲ. ಆಗ ಇನ್ನೊಬ್ಬ ದೇವರು ನಂತರ ಮತ್ತೊಬ್ಬ ದೇವರು. ಹೀಗೆ ದೇವರನ್ನು ಬದಲಾಯಿಸುವುದರಲ್ಲೇ ನಮ್ಮ ಜೀವನದ ಇತಿಶ್ರೀ ಆಗುತ್ತದೆ. ಆದರೆ ನಮ್ಮಲ್ಲಿ ಏಕನಿಷ್ಠೆಯ ಅಥಶ್ರೀ ಆಗುವುದಿಲ್ಲ.
ಏಕನಿಷ್ಠೆಯಿಲ್ಲದ ಮಾನವನ ಭಕ್ತಿ ಫಲಕಾರಿಯಾಗುವುದು ಕನಸಿನ ಮಾತು. ಅಂತೆಯೇ ಬಸವೇಶ್ವರರು
“ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ
ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ
ಇದ್ದರೇನು ಶಿವ ಶಿವಾ ಹೋದರೇನು ಶಿವ ಶಿವಾ…..?
ಎಂದಿರುವರು. ವೀರಶೈವನಾದವನು ಲಿಂಗದಲ್ಲಿಯೇ ಪರಮನಿಷ್ಠೆಯನ್ನಿರಿಸಿ ಬದುಕಬೇಕು. ನಮ್ಮೆಲ್ಲ ಇಷ್ಟಾರ್ಥಗಳನ್ನು ಈಡೇರಿಸುವ ಸಾಮರ್ಥ್ಯ ಇಷ್ಟಲಿಂಗದಲ್ಲಿ ನೆಲೆಸಿದೆ. ಇಂತಹ ಇಷ್ಟಲಿಂಗವನ್ನು ಬದಿಗಿರಿಸಿ ವಿವಿಧ ದೇವರ ಬೀದಿ ಬೀದಿ ತಿರುಗುವಾತ ವೀರಶೈವ ಹೇಗೆ? ಈ ವಿಷಯದಲ್ಲಿ ಅಂಬಿಗರ ಚೌಡಯ್ಯನವರದು ತುಂಬ ಉಗ್ರ ನಿಲುವು.
“ಕಟ್ಟಿದ ಲಿಂಗವ ಕಿರಿದು ಮಾಡಿ
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ”
ಇಂತಹ ಕಟ್ಟು ನಿಟ್ಟಿನ ನಿಲುವು ನೆಲೆಗೊಂಡ ಭಕ್ತನೇ ಏಕದೇವೋಪಾಸಕನಾಗುತ್ತಾನೆ. ಯಾವುದೇ ದೇವರ ಬಗ್ಗೆಯಾಗಲಿ ಹೃದಯದಲ್ಲಿ ಪರಮನಿಷ್ಠೆ ಒಡಮೂಡಬೇಕಾದರೆ ಆ ದೇವರೇ ಪರಮೋತ್ಕೃಷ್ಟ ಮತ್ತು ಕರ್ತುಂ ಅಕರ್ತುಂ ಅನ್ಯಥಾಕರ್ತುಂ ಶಕ್ತ (ಯಾವುದೇ ಕಾರ್ಯವನ್ನು ಮಾಡಲು, ಮಾಡದೇ ಇರಲು ಮತ್ತು ಅದನ್ನು ಬೇರೆ ರೀತಿಯಲ್ಲಿ ಮಾಡಲು ಸಮರ್ಥ) ಎಂಬ ಸರ್ವಶಕ್ತಿಮಾನ್ ಆಗಿರುವನೆಂಬ ಭಾವ ಇರಬೇಕಾಗುತ್ತದೆ. ಆಗ ಮಾತ್ರ ಏಕನಿಷ್ಠ ಗಟ್ಟಿಗೊಳ್ಳುತ್ತದೆ.