ಈ ವರ್ಷದ ಭಗವದ್ಗೀತೆ ಅಭಿಯಾನದ ಕೇಂದ್ರಸ್ಥಾನ ಬೆಳಗಾವಿ

Advertisement

ಬೆಳಗಾವಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ವತಿಯಿಂದ ಪ್ರತಿ ವರ್ಷ ನಡೆಸಲಾಗುವ ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನವನ್ನು ಈ ವರ್ಷ ಬೆಳಗಾವಿಯನ್ನು ಕೇಂದ್ರಸ್ಥಾನವಾಗಿಸಿಕೊಂಡು ನಡೆಸಲಾಗುವುದು ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಬೆಳಗಾವಿಯಲ್ಲಿ ಈ ಕುರಿತು ಪೂರ್ವಭಾವಿ ಸಭೆ ನಡೆಸಿ ಈ ವಿಷಯವನ್ನು ಅವರು ಪ್ರಕಟಿಸಿದರು. ನವೆಂಬರ್ 21ರಿಂದ ಡಿಸೆಂಬರ್ 22ರವರೆಗೆ ಭಗವದ್ಘೀತೆ ಅಭಿಯಾನ ನಡೆಯಲಿದೆ. ಡಿ.23ರಂದು ಮಹಾ ಸಮರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಸ್ವರ್ಣವಲ್ಲಿ ಮಠದಿಂದ ಭಗವದ್ಗೀತೆ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಬದಲಾವಣೆ ತರುವ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಇದರ ಪರಿಣಾಮವಾಗಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಕೈದಿಗಳೂ ಕ್ಷಮಾಪಣೆಯ ಮಟ್ಟಕ್ಕೆ ಬದಲಾಗಿರುವುದನ್ನು ನಾವು ಗಮನಿಸಿದ್ದೇವೆ. ಮನಸ್ಸಿನ ದೌರ್ಭಲ್ಯಗಳನ್ನು ಹೋಗಲಾಡಿಸಿ, ವ್ಯಕ್ತಿತ್ವವನ್ನು ರೂಪಿಸುವ ಕೆಲಸ ಇದರಿಂದ ಆಗುತ್ತಿದೆ. ಭಾರತವನ್ನು ಭಾರತವಾಗಿ ಉಳಿಸಿಕೊಳ್ಳಲು ಈ ಅಭಿಯಾನ ಅಗತ್ಯ ಎಂದು ಸ್ವಾಮಿಗಳು ಹೇಳಿದರು. ಭಗವದ್ಗೀತೆ ಅಭಿಯಾನದ ಪೂರ್ವಸಿದ್ಧತೆಗೆ ವಿವಿಧ ಸಮಿತಿಗಳನ್ನು ಈ ಸಂದರ್ಭದಲ್ಲಿ ರಚಿಸಲಾಯಿತು.