೧೦೮ಕ್ಕೆ ನೂರೆಂಟು ಸಮಸ್ಯೆ ತುರ್ತು ಪರಿಹಾರ ಅಗತ್ಯ

ಸಂಪಾದಕೀಯ
Advertisement

ಆಸ್ಪತ್ರೆಗಳಿಗೆ ರೋಗಿಗಳನ್ನು ತುರ್ತಾಗಿ ತಲುಪಿಸಲು ೧೦೮ ಆಂಬುಲೆನ್ಸ್ ದೇಶಾದ್ಯಂತ ೨೦ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಇದರ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ಒಪ್ಪಿಸಲಾಗಿದೆ. ಈಗ ಕರ್ನಾಟಕದಲ್ಲಿ ಆಂಬುಲೆನ್ಸ್ ಸಿಬ್ಬಂದಿ ಸಂಬಳಕ್ಕಾಗಿ ಒತ್ತಾಯಿಸಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅವರಿಗ ಕಳೆದ ೪ ತಿಂಗಳಿಂದ ಸಂಬಳ ಪಾವತಿಯಾಗಿಲ್ಲ. ಸರ್ಕಾರ ಕೂಡಲೇ ಇದರತ್ತ ಗಮನಹರಿಸಿ ಸಮಸ್ಯೆ ಬಗೆಹರಿಸುವುದು ಅಗತ್ಯ. ಹಿಂದೆ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ೧೦೮ ಆಂಬೂಲೆನ್ಸ್ ಇರಲಿಲ್ಲ. ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಆಸಕ್ತಿವಹಿಸಿ ಆಂಬುಲೆನ್ಸ್ ಎಲ್ಲ ಕಡೆ ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಮಾಡಿದರು. ಇದಕ್ಕಾಗಿ ಪ್ರತ್ಯೇಕ ವೈರ್‌ಲೆಸ್ ಜಾಲವನ್ನು ಸ್ಥಾಪಿಸಿ ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರಿಗೂ ಸೇವೆ ಲಭಿಸುವಂತೆ ಮಾಡಲಾಯಿತು.
ಕೊರೊನಾ ಕಾಲದಲ್ಲಿ ಇದು ಅತ್ಯುತ್ತಮ ಸೇವೆ ಸಲ್ಲಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. ಕಾಲಕ್ರಮೇಣ ರಾಜ್ಯ ಸರ್ಕಾರಗಳು ಇದರ ನಿರ್ವಹಣೆಗೆ ಗಮನ ಕೊಡಲಿಲ್ಲ. ಕರ್ನಾಟಕದಲ್ಲೂ ಇದೇ ಸಮಸ್ಯೆ. ೧೦೮ ಸೇವೆಯನ್ನು ನೋಡಿಕೊಳ್ಳುವ ಸಿಬ್ಬಂದಿಗೆ ಸಕಾಲದಲ್ಲಿ ಸಂಬಳ ಪಾವತಿಯಾಗುತ್ತಿಲ್ಲ. ೪ ತಿಂಗಳಿಂದ ಸಂಬಳ ನೀಡಿಲ್ಲ ಎಂಬುದು ಸಿಬ್ಬಂದಿಯ ಪ್ರಮುಖ ಆರೋಪ. ರಾಜ್ಯ ಸರ್ಕಾರ ಹಣ ನೀಡುತ್ತಿದ್ದರೂ ಖಾಸಗಿ ಕಂಪನಿ ಸಿಬ್ಬಂದಿಗೆ ಸಕಾಲದಲ್ಲಿ ಹಣ ನೀಡಿಲ್ಲ ಎಂದು ಹೇಳಲಾಗಿದೆ. ಇದನ್ನು ಸರ್ಕಾರ ಸರಿಪಡಿಸದೇ ಇರುವುದರಿಂದ ಈಗ ಮುಷ್ಕರ ನಡೆಸಲು ಸಿಬ್ಬಂದಿ ತೀರ್ಮಾನಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು.
ಆಂಬೂಲೆನ್ಸ್ ಸೇವೆ ಎಲ್ಲ ಕಡೆ ಅಗತ್ಯ ಇರುವ ತುರ್ತು ಸೇವೆ. ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ರೋಗಿಗಳು ಸಕಾಲದಲ್ಲಿ ಆಸ್ಪತ್ರೆ ಸೇರಲು ಇರುವುದು ಇದೊಂದೇ ಮಾರ್ಗ. ಅದರಲ್ಲೂ ರಸ್ತೆಗಳಲ್ಲಿ ಅಪಘಾತ ಸಂಭವಿಸಿದಾಗ ಎಷ್ಟು ತ್ವರಿತವಾಗಿ ಆಂಬುಲೆನ್ಸ್ ಸ್ಥಳಕ್ಕೆ ಬರುತ್ತದೋ ಅಷ್ಟು ಬೇಗ ಜನರ ಪ್ರಾಣ ಉಳಿಸಬಹುದು. ಜನ ಕೂಡ ಆಂಬೂಲೆನ್ಸ್ ಸುಲಭವಾಗಿ ಸಂಚರಿಸಲು ಎಲ್ಲ ಅನುಕೂಲ ಮಾಡಿಕೊಡುತ್ತಾರೆ. ಬೆಂಗಳೂರು ನಗರದಲ್ಲಿ ಜನ ನಿಬಿಡ ಪ್ರದೇಶದಲ್ಲೂ ೧೦೮ಗೆ ಅವಕಾಶ ಮಾಡಿಕೊಡುವುದರಲ್ಲಿ ಯಾರೂ ಹಿಂಜರಿಯುವುದಿಲ್ಲ. ಜನರಿಗೆ ಆಂಬೂಲೆನ್ಸ್ ಮಹತ್ವ ಗೊತ್ತಿದೆ. ಆದರೆ ಸರ್ಕಾರ ಇದರ ಮಹತ್ವ ತಿಳಿದು ತುರ್ತು ಕ್ರಮ ಕೈಗೊಳ್ಳುತ್ತಿಲ್ಲ. ಹಿಂದೆ ಈ ವಾಹನಗಳು ಆಧುನಿಕವಾಗಿತ್ತು., ಅದರಿಂದ ಬಹಳ ವೇಗದಲ್ಲಿ ಸಂಚರಿಸಲು ಸಾಧ್ಯವಾಗಿತ್ತು. ಈಗ ವಾಹನಗಳ ನಿರ್ವಹಣಾ ಮಟ್ಟ ಕುಸಿದಿದೆ. ಆಂಬೂಲೆನ್ಸ್ಗಳೂ ಕೆಟ್ಟು ನಿಲ್ಲುತ್ತಿವೆ. ಅಲ್ಲದೆ ಅಪಘಾತಕ್ಕೆ ಒಳಗಾಗುತ್ತಿವೆ. ಇದು ಸರ್ಕಾರದ ನಿರ್ಲಕ್ಷವನ್ನು ತೋರಿಸುತ್ತದೆ. ಜನರಿಗೆ ಅಗತ್ಯ ಸೇವೆ ನೀಡುವ ವಾಹನಗಳು ಸದಾ ಸುಸ್ಥಿರವಾಗಿರಬೇಕು. ಇದರಲ್ಲಿ ರಾಜಕೀಯ ಬರಬಾರದು. ಎಲ್ಲ ಜಿಲ್ಲೆಗಳಲ್ಲಿ ಇದರ ಸೇವೆ ಸಮರ್ಪಕವಾಗಿರಬೇಕು. ಸಾಮಾನ್ಯವಾಗಿ ಆಂಬೂಲೆನ್ಸ್ ಸೇವೆಯನ್ನು ಆಯಾ ಜಿಲ್ಲಾಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿರುತ್ತದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಇದರ ಸೇವೆ ಪ್ರಮುಖ. ಹಳ್ಳಿಯಲ್ಲಿ ಜನರ ಆರೋಗ್ಯ ವಿಷಮಿಸಿದರೆ ಅವರಿಗೆ ಯಾವ ವಾಹನವೂ ಸಿಗುವುದಿಲ್ಲ. ಸಮೀಪದಲ್ಲಿ ೧೦೮ ಇತ್ತು ಎಂದರೆ ಜನರಿಗೆ ಮಾನಸಿಕ ನೆಮ್ಮದಿ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಉತ್ತಮಪಡಿಸುವುದು ಅಗತ್ಯ. ಅದಕ್ಕೆ ಮುನ್ನ ಆಂಬೂಲೆನ್ಸ್ ದೊರಕುವಂತೆ ಮಾಡುವುದು ಮುಖ್ಯ. ಈ ವಿಷಯದಲ್ಲಿ ಯಾವುದೇ ಸರ್ಕಾರವಾಗಲಿ ಉದಾಸೀನ ತೋರಬಾರದು. ಇದನ್ನು ನಿರ್ವಹಿಸುವುದು ಕಷ್ಟದ ಕೆಲಸವೇನಲ್ಲ. ಇಂಟರ್‌ನೆಟ್ ಜಾಲ ಪ್ರಬಲವಾಗಿರುವುದರಿಂದ ಆಂಬೂಲೆನ್ಸ್ ಎಲ್ಲೂ ನಿಲ್ಲದೆ ನಿಗದಿತ ಆಸ್ಪತ್ರೆ ತಲುಪುವಂತೆ ಮಾಡುವುದು ಕಷ್ಟದ ಕೆಲಸವೇನಲ್ಲ.
ಅದೇರೀತಿ ಅಂಗಾಂಗ ದಾನ ನಡೆದಾಗ ಅದನ್ನು ಬೇರೆ ಸ್ಥಳದಲ್ಲಿರುವ ಮತ್ತೊಂದು ರೋಗಿಗೆ ಅಳವಡಿಸಲು ಅತಿ ಶೀಘ್ರವಾಗಿ ತಲುಪುವುದು ಬಹಳ ಮುಖ್ಯ, ಇದರಲ್ಲಿ ನಮ್ಮ ಆಂಬ್ಯೂಲೆನ್ಸ್ ಸೇವೆ ಉತ್ತಮವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ರಸ್ತೆಗಳಲ್ಲಿ ವಾಹನ ಸಂಚಾರ ಅಧಿಕವಾಗಿದ್ದರೂ ಆಂಬ್ಯೂಲೆನ್ಸ್ ಚಲಿಸಲು ಅಡ್ಡಿ ಆತಂಕ ಬಹಳ ಕಡಿಮೆ. ಬೆಂಗಳೂರು ರೀತಿ ಬೃಹತ್ ನಗರಗಳಲ್ಲಿ ಮೆಟ್ರೋ ರೈಲು ಸಂಪರ್ಕ ಉತ್ತಮವಾಶಗಿದೆ. ಅದನ್ನೂ ಬಳಸಿಕೊಂಡು ಮೆಟ್ರೋ ಆಂಬ್ಯೂಲೆನ್ಸ್ ಸೇವೆಯನ್ನು ಚಾಲನೆಗೆ ತರಬಹುದು.
ಇದರಿಂದ ರಸ್ತೆಯ ಸಂಚಾರ ಸುಗಮಗೊಳ್ಳಲಿದೆ. ರಾಜ್ಯ ಸರ್ಕಾರ ೧೦೮ ಸುಸೂತ್ರವಾಗಿ ಸಂಚರಿಸುವಂತೆ ಮಾಡಬೇಕು. ಇದಕ್ಕೆ ಆರ್ಥಿಕ ಸಂಪನ್ನೂಲ ಕಲ್ಪಿಸಿಕೊಡುವುದು ಕಷ್ಟವಾಗುವುದಿಲ್ಲ. ಅಲ್ಲದೆ ಹೊಸ ವಾಹನಗಳನ್ನು ಕೊಡುಗೆಯಾಗಿ ಖಾಸಗಿ ಕಂಪನಿಗಳಿಂದ ಪಡೆಯಬಹುದು. ಇದಕ್ಕೆ ತೆರಿಗೆ ರಿಯಾಯಿತಿ ನೀಡಿದರೆ ಸಾಕಷ್ಟು ನೆರವು ಹರಿದು ಬರುತ್ತದೆ. ಸಾಮಾಜಿಕ ಕೆಲಸಗಳಲ್ಲಿ ಖಾಸಗಿ ಸಂಸ್ಥೆಗಳು ಭಾಗವಹಿಸುವುದಕ್ಕೆ ಕಾನೂನಿನಲ್ಲೇ ಅವಕಾಶವಿದೆ. ಆರೋಗ್ಯ ಇಲಾಖೆ ಈ ವಿಷಯದಲ್ಲಿ ತುರ್ತಾಗಿ ತೀರ್ಮಾನ ಕೈಗೊಳ್ಳುವುದು ಮುಖ್ಯ, ಜನಸಾಮಾನ್ಯರ ಜೀವದೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ. ಟೆಂಡರ್ ಕರೆಯುವುದೂ ಸೇರಿದಂತೆ ಎಲ್ಲವನ್ನೂ ಸಮರೋಪಾದಿಯಲ್ಲಿ ಕೈಗೊಳ್ಳುವುದು ಅಗತ್ಯ. ಈಗ ಆಂಬೂಲೆನ್ಸ್
ಜನರ ಕಷ್ಟದ ದಿನಗಳನ್ನು ದುರುಪಯೋಗ ಪಡಿಸಿಕೊಂಡು ಶೋಷಣೆ ಮಾಡುವ ಅಪಾಯವಿದೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ಸರ್ಕಾರ ದುರ್ಬಲಗೊಂಡಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತಲೆ ಎತ್ತುವುದು ಸಹಜ.