ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

ಅಶ್ವಥ್ ನಾರಾಯಣ
Advertisement

ಚಿತ್ರದುರ್ಗ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ಕಲಿಕೆಗೆ ಮುಕ್ತ ಅವಕಾಶದ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಿದೆ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.
ಹಿರಿಯೂರು ತಾಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಬಹಳ ಕಡಿಮೆ ಇದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿಯೂ ಗುಣಮಟ್ಟದ ಕಲಿಕೆ ಇಲ್ಲ. ಇದನ್ನು ಸಂಪೂರ್ಣ ಅರಿತು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ ತರುತ್ತಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಕೇವಲ ಶೈಕ್ಷಣಿಕವಾಗಿ ಮಾತ್ರ ಸೀಮಿತವಾಗಿರದೇ ಸಾಂಸ್ಕೃತಿಕ, ದೈಹಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಯಲ್ಲಿಯೂ ಭಾಗವಹಿಸಲು ಅವಕಾಶವಿದೆ. ಕಲಿಕೆ ಕೇವಲ ತರಗತಿಯಲ್ಲಿ ಮಾತ್ರವಲ್ಲ. ಸಮಾಜದಲ್ಲಿ ಆಗುವಂತಹ ಪ್ರತಿಯೊಂದು ವಿಚಾರದಲ್ಲಿಯೂ ಕಲಿಯುವುದು ಅವಕಾಶವಿದೆ ಎಂದರು.