ಬೋಗಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಹೋರಾಟ

Advertisement

ಧಾರವಾಡ: ವಿಧಾನ ಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಸದನದ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಸರಕಾರದ ಬೋಗಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಸರಕಾರದ ಜನವಿರೋಧಿ ಯೋಜನೆಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ರಾಜ್ಯ ಸರಕಾರ ಜನರಿಗೆ ೧೦ ಕೆಜಿ ಅಕ್ಕಿಯ ಹಣ ಕೊಡಬೇಕು, ಇಲ್ಲವೇ ಕ್ಷಮೆ ಕೇಳಬೇಕು. ಕೇಂದ್ರದಿಂದ ೫ ಕೆಜಿ ಅಕ್ಕಿ ಹಣ ಕೊಡುತ್ತಿರುವ ಸತ್ಯವನ್ನು ಹೇಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ರೇಣುಕಾಚಾರ್ಯರಿಗೆ ಪಕ್ಷದ ವತಿಯಿಂದ ನೋಟೀಸ್ ಕೊಟ್ಟಿರುವ ಕುರಿತು ಮಾತನಾಡಿ, ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರಿಗೆ ಆಪ್ತರು ಎಂಬ ಕಾರಣಕ್ಕೆ ನೊಟೀಸ್ ನೀಡಲಾಗಿದೆ ಎನ್ನುವುದು ಸರಿಯಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ ಅಧ್ಯಕ್ಷತೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಬಿಎಸ್‌ವೈ ಅವರೂ ರೇಣುಕಾಚಾರ್ಯ ಕರೆದು ಮಾತನಾಡಿದ್ದಾರೆ. ನಾನು ಸಹ ಇವತ್ತು ರೇಣುಕಾಚಾರ್ಯರನ್ನು ಕರೆದು ಮಾತನಾಡುತ್ತೇನೆ. ನಮ್ಮ ಪಕ್ಷ ಒಂದು ಪರಿವಾರ ಇದ್ದಂತೆ ಎಂಬುದನ್ನು ಮನವರಿಕೆ ಮಾಡಿಕೊಡುವೆ. ಸ್ವಲ್ಪ ಆಕ್ರೋಶದಲ್ಲಿ ಕೆಲವರು ಮಾತನಾಡಿದ್ದರು. ಪಕ್ಷದ ಮೇಲೆ ಯಾರಿಗೂ ಬೇಸರವಿಲ್ಲ. ಸಾರ್ವಜನಿಕವಾಗಿ ಹೇಳಿಕೆ ನೀಡದಂತೆ ಮುಖಂಡರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.