ಭ್ರಷ್ಟಾಚಾರ ನಿರ್ಮೂಲನೆ ಕಾಲಮಿತಿ ಕಾರ್ಯಕ್ರಮ ಬೇಕು

ಸಂಪಾದಕೀಯ
Advertisement

ಭ್ರಷ್ಟಾಚಾರ ಬೃಹದಾಕಾರವಾಗಿ ಬೆಳೆದು ಸಾಂಸ್ಥಿಕ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ರಾಜ್ಯಪಾಲರು ವಿಧಾನಮಂಡಲ ಅಧಿವೇಶನದಲ್ಲಿ ತಮ್ಮ ಭಾಷಣದಲ್ಲಿ ಹೇಳಿರುವುದು ಕೇವಲ ಘೋಷಣೆಯಾಗಬಾರದು. ಸ್ಪಷ್ಟ ಹಾಗೂ ಕಾಲಬದ್ಧ ಕ್ರಿಯಾ ಯೋಜನೆ ಪ್ರಕಟಿಸಬೇಕು. ಉಚಿತ ಅಕ್ಕಿ. ವಿದ್ಯುತ್, ಬಸ್ ಪ್ರವಾಸ ಸೇರಿದಂತೆ ಹಲವು ಗ್ಯಾರಂಟಿಗಳನ್ನು ಘೋಷಣೆಯೊಂದಿಗೆ ಲಂಚದ ಹಾವಳಿಯನ್ನು ದಮನ ಮಾಡಲು ನಿಗದಿತ ಕಾಲಾವಧಿಯ ಗ್ಯಾರಂಟಿ ನೀಡಿದ್ದರೆ ಜನ ಸಂತೋಷ ಪಡುತ್ತಿದ್ದರು. ಲಂಚ ಇರುವುದೇ ವಿಧಾನಸೌಧದಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಯಾವ ಯಾವ ಹಂತದಲ್ಲಿ ಲಂಚದ ಹಾವಳಿ ಇದೆ ಎಂಬುದನ್ನು ಯಾರೂ ತೋರಿಸಿಕೊಡಬೇಕಾದ ಅಗತ್ಯವಿಲ್ಲ. ಎಲ್ಲವೂ ಹಾಡಹಗಲೇ ನಡೆಯುತ್ತಿದೆ. ಸರ್ಕಾರ ಬದಲಾಗಿದೆಯೇ ಹೊರತು ಮಧ್ಯವರ್ತಿಗಳು ಬದಲಾಗಿಲ್ಲ. ಹೊಸ ಸರ್ಕಾರ ಬಂದು ೧ ತಿಂಗಳಾಗಿದೆ. ಅಧಿಕಾರಿಗಳನ್ನು ಲೋಕಾಯುಕ್ತ ಹಿಡಿಯುವುದನ್ನು ನಿಲ್ಲಿಸಿಲ್ಲ. ಬೆಂಗಳೂರು ಸಮೀಪದಲ್ಲೇ ಇದ್ದ ತಹಸೀಲ್ದಾರ್ ಮನೆಯಲ್ಲಿ ದೊರಕಿದ ಲಂಚವನ್ನು ನೋಡಿದರೆ ತಲೆತಿರುಗಿ ಬೀಳುವಂತೆ ಆಗುತ್ತದೆ. ಒಬ್ಬ ತಹಸೀಲ್ದಾರ್ ಇಷ್ಟೊಂದು ಹಣ ಹೊಡೆಯಬೇಕಾದರೆ ಉಳಿದವರ ಪಾಲು ಎಷ್ಟು? ಇವುಗಳೆಲ್ಲ ಭ್ರಷ್ಟಾಚಾರ ಸಾಂಸ್ಥಿಕ ಸ್ವರೂಪ ಪಡೆದಿರುವುದಕ್ಕೆ ಸಾಕ್ಷಿ. ಆದರೆ ಇದರ ವಿರುದ್ಧ ಸರ್ಕಾರದ ಮಟ್ಟದಲ್ಲಿ ಒಂದು ಹುಲು ಕಡ್ಡಿಯೂ ಅಲುಗಾಡಿಲ್ಲ. ಹಿಂದೆ ಕರ್ನಾಟಕದ ಲೋಕಾಯುಕ್ತ ಇಡೀ ದೇಶದಲ್ಲಿ ಹೆಸರು ಪಡೆದಿತ್ತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ನೀಡಿದ್ದ ವರದಿ ಇಡೀ ದೇಶಕ್ಕೆ ಮಾದರಿಯಾಗಿತ್ತು. ಅನಂತರದ ದಿನಗಳಲ್ಲಿ ನೋಡಿದರೆ ಇಡೀ ಕರ್ನಾಟಕ ತಲೆ ತಗ್ಗಿಸುವಂತಾಯಿತು. ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಲಂಚದ ಹಾವಳಿ ಕಳೆದ ಸರ್ಕಾರದಲ್ಲಿ ಶೇ. ೪೦ ರಷ್ಟು ಇತ್ತು ಎಂದು ಗುತ್ತಿಗೆದಾರರೇ ಆರೋಪಿಸಿದ್ದರು. ಚುನಾವಣೆ ಕಾಲದಲ್ಲಿ ಅದು ರಾಜಕೀಯ ವಿಷಯವಾಗಿತ್ತು. ಈಗ ಎಷ್ಟರಮಟ್ಟಿಗೆ ಕಡಿಮೆ ಮಾಡಲಾಗುವುದು ಎಂಬುದನ್ನು ಸರ್ಕಾರವೇ ಹೇಳಬೇಕು. ಲಂಚವನ್ನು ಶೂನ್ಯಕ್ಕೆ ತರುತ್ತೇವೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಅದನ್ನು ಯಾವ ಮಟ್ಟಕ್ಕೆ ತಗ್ಗಿಸುತ್ತೇವೆ ಎಂದು ವಚನ ನೀಡುವುದು ವಾಸ್ತವವಾಗಬಹುದು. ಈಗ ಮೊದಲು ಯಾವ ಯಾವ ಇಲಾಖೆಯಲ್ಲಿ ಅತಿಹೆಚ್ಚು ಲಂಚದ ಹಾವಳಿ ಇದೆ ಎಂಬುದನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಕಂಪ್ಯೂಟರೀಕರಣಗೊಂಡ ಮೇಲೆ ಪಾರದರ್ಶಕತೆ ಹೆಚ್ಚಾಗಿ ಲಂಚದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಜನ ಭಾವಿಸಿದ್ದರು. ಆದರೆ ತದ್ವಿರುದ್ಧವಾಗಿ ನಡೆಯಿತು. ಸರ್ಕಾರದ ಆಡಳಿತ ವಿಕೇಂದ್ರೀಕರಣಗೊಂಡಾಗ ಲಂಚ ಕಡಿಮೆಯಾಗುತ್ತದೆ ಎಂದರು. ಪಂಚಾಯ್ತಿ ಮಟ್ಟದಲ್ಲೂ ಲಂಚ ಕಾಣಿಸಿಕೊಂಡಿತು. ಮಹಿಳೆಯರು ಆಡಳಿತದಲ್ಲಿ ಹೆಚ್ಚು ಪಾಲ್ಗೊಂಡರೆ ಲಂಚ ಇಳಿಮುಖಗೊಳ್ಳುತ್ತದೆ ಎಂದರು. ಈಗ ಮಹಿಳೆಯರೂ ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಾರೆ. ಲೋಕಾಯುಕ್ತ ಪ್ರತಿದಿನ ಭ್ರಷ್ಟರನ್ನು ಹಿಡಿದರೂ ಅವರಿಗೆ ಶಿಕ್ಷೆ ಆಗುತ್ತಿಲ್ಲ. ಆರೋಪಿಗಳೇ ಬಡ್ತಿ ಪಡೆದು ಅವರಲ್ಲಿ ಕೆಲವರು ಅದೇ ಹಣದಲ್ಲಿ ಚುನಾವಣೆಯಲ್ಲಿ ಗೆದ್ದು ಜನಪ್ರತಿನಿಧಿಗಳಾಗಿದ್ದಾರೆ. ಇದೂ ಕೂಡ ಭ್ರಷ್ಟಾಚಾರದ ಸಾಂಸ್ಥಿಕ ಸ್ವರೂಪವಲ್ಲದೆ ಬೇರೇನೂ ಅಲ್ಲ. ಭ್ರಷ್ಟಾಚಾರ ಕಡಿಮೆಯಾಗಬೇಕು ಎಂದರೆ ಮೊದಲು ಮುಖ್ಯಮಂತ್ರಿ ಕಚೇರಿಯಿಂದ ಆರಂಭಗೊಳ್ಳಬೇಕು. ಆಡಳಿತದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಪಾರದರ್ಶಕತೆ ಮತ್ತು ದಾಖಲೀಕರಣ ನಡೆಯಬೇಕು. ಅಧಿಕಾರಿಗಳ ವಿವೇಚನಾ ಅಧಿಕಾರ ಕಡಿಮೆ ಮಾಡಬೇಕು. ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗೆ ಒಂದು ತಿಂಗಳಲ್ಲಿ ಶಿಕ್ಷೆ ಆಗಬೇಕು. ಅಪರಾಧ ಸಾಬೀತಾಗಲಿಲ್ಲ ಎಂದರೆ ಸರ್ಕಾರ ಅದರ ಹೊಣೆ ಹೊರಬೇಕು. ಮೊದಲು ಶಾಸಕರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು. ಇದು ನಿಯಮ. ಆದರೆ ವಿವರ ಸಲ್ಲಿಸದೇ ಇರುವ ಜನಪ್ರತಿನಿಧಿಗಳ ಮೇಲೆ ಕ್ರಮ ಏಕಿಲ್ಲ? ಇದಕ್ಕೆ ಯಾರು ಹೊಣೆ? ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಹೊಸ ಆಸ್ತಿ ಪಡೆದರೆ ಅದು ಬಹಿರಂಗಗೊಳ್ಳಬೇಕು.