ದಿಢೀರನೇ ಬರುವ ದುಡ್ಡು ಅಹಂಕಾರಕ್ಕೆ ಕಾರಣ

PRATHAPPHOTOS.COM
Advertisement

ಮನುಷ್ಯನ ಜೀವಿತಾವಧಿಯಲ್ಲಿ ಶಾಶ್ವತವಾದ ಮತ್ತು ಸದ್ಗತಿಗೆ ಪಥವಾಗುವ ಜ್ಞಾನವಾಗಲಿ ಮತ್ತು ಸಂಪತ್ತಾಗಲಿ ಅದು ಕ್ರಮವಾಗಿಯೇ ನಮಗೆ ಲಭ್ಯವಾಗಬೇಕು. ಹಾಗೊಂದು ವೇಳೆ ಒಮ್ಮಿಂದೊಮ್ಮೆಲೆ ಬಂದರೆ, ಅದರೊಟ್ಟಿಗೆ ಅಹಂಕಾರ ಬಂದು ಬಿಡುತ್ತದೆ.
ಇಲ್ಲಿ ಸಂಪತ್ತು ಎಂದರೆ ಲಕ್ಷ್ಮೀದೇವಿ, ಪರಮಾತ್ಮನ ಅಣತಿಯಂತೆ ಲಕ್ಷ್ಮೀದೇವಿ ತನ್ನ ಕೆಲಸಗಳನ್ನು ಮಾಡುತ್ತಲೇ ಇರುತ್ತಾಳೆ. ಅರಿವಿನ ಕೊರತೆಯಿಂದ ಲಕ್ಷ್ಮೀದೇವಿಯನ್ನು ಸರಿಯಾಗಿ ತಿಳಿಯದೇ ಇರುವ ಕಾರಣಕ್ಕೆ ಅಹಂಕಾರಕ್ಕೂ ಅವಳು ಕಾರಣಳಾಗುತ್ತಾಳೆ. ಸಂಪತ್ತು ನಮಗೆ ದಿಢೀರ್ ಎಂದು ಬರಬಾರದು ಎನ್ನುತ್ತಾರೆ ಹಿರಿಯರು. ಸಂಪತ್ತನ್ನು ಗಳಿಸುವ ನಿಟ್ಟಿನಲ್ಲಿ ಒಮ್ಮಿಲೇ ಶ್ರೀಮಂತರಾಗುವ ತವಕದಿಂದ ಅನಾಹುತಗಳೇ ಹೆಚ್ಚಾಗುತ್ತವೆ. ಅದಕ್ಕೆ ದಾಸರು ಲಕ್ಷ್ಮೀದೇವಿದೇವಿಯ ಕುರಿತು ಕೀರ್ತಿಸುವಾಗ
ಹೆಜ್ಜೆಯ ಮೇಲೊಂದೆಜ್ಹೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಬಾ… ಎಂದು ವಿನಮ್ರವಾಗಿ ಬೇಡಿಕೊಳ್ಳುತ್ತಾರೆ.
ಸಂಪತ್ತು ಬರುವಾಗ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಬಂದಂತೆ ಅಂದರೆ…. ನಿಧಾನವಾಗಿಯೇ ಸಂಪತ್ತು ಕ್ರೋಢಿಕರಣಗೊಳ್ಳಬೇಕು. ಶ್ರಮವಹಿಸಿ ದುಡಿದಾಗ ತಕ್ಕಂತೆ ದುಡ್ಡು ಬರಬೇಕು. ಅಂದರೆ ದುಡ್ಡಿನ ಬೆಲೆ ಮತ್ತು ಶ್ರಮದ ಬೆಲೆ ಅರ್ಥವಾಗುತ್ತದೆ. ಆಗ ಬೇಕಾಬಿಟ್ಟಿಯಾಗಿ ಸಂಪತ್ತನ್ನು ಸೂರೆ ಮಾಡಲಾಗುವದಿಲ್ಲ. ಹಾಗೇ ಬರುವಾಗ ಗೆಜ್ಜೆ ಕಾಳ್ಗಳ ಧ್ವನಿಯ ತೋರುತ… ಎಂದರೆ ನಾವು ಎಷ್ಟು ಕಷ್ಟಪಟ್ಟು ಗಳಿಸಿದ್ದೇವೆ ಎಂಬುದು ಕೂಡ ಜನರಿಗೆ ಗೊತ್ತಾಗಬೇಕು. ಅಂದರೆ ಗಳಿಸಿದ ಹಣ ಪಾಪದ್ದೋ ಇಲ್ಲವೇ ಪುಣ್ಯದ್ದೋ ಎಂದು ಅರ್ಥವಾಗುತ್ತದೆ. ಆಗ ಸಂಪತ್ತಿನ ಅಪಹಾರ ತಪ್ಪುತ್ತದೆ. ದುಡಿಮೆ(ಮಥನ)ಯಿಂದಲೇ ದುಡ್ಡು ಬರಬೇಕು. ಅಲ್ಲಿಯವರೆಗೆ ಹಣದ ಗೋಚರವೂ ಆಗಕೂಡದು ಎಂದು ದಾಸರು ಸೂಚ್ಯವಾಗಿ ವಿವರಿಸಿದ್ದಾರೆ. ದುಡಿದಾಗ ಪ್ರತ್ಯಕ್ಷವಾಗುವ ಸಂಪತ್ತಿನಿಂದ ಆನಂದ ಮತ್ತು ಗೌರವ ವಿನಯವೂ ಬರುತ್ತದೆ. ಕಷ್ಟಪಟ್ಟು ಮನುಷ್ಯ ಹಣ ಗಳಿಸಿದರೆ ಅಹಂಕಾರ ಬರುವುದಿಲ್ಲ.. ಕಷ್ಟ ಪಡದೆ ಸಲೀಸಾಗಿ ದುಡ್ಡು ಬಂದಿದ್ದೇ ಆದಲ್ಲಿ ಅಹಂಕಾರದಿಂದ ಕಣ್ಣು ನೆತ್ತಿಯ ಮೇಲೆ ಬರುತ್ತದೆ. ಅದಕ್ಕೋಸ್ಕರ ಧನವಾಗಲಿ ಸಂಪತ್ತಾಗಲಿ ಸ್ವಲ್ಪ ಸ್ವಲ್ಪವಾಗಿ ಬರಬೇಕು ಅದು ಸಜ್ಜನರ ಸಹವಾಸದಿಂದ ಬರುತ್ತದೆ. ಇದು ಕೂಡ ಹರಿಯ ಸಂಕಲ್ಪವೆಂದೇ ಭಾವಿಸಬೇಕು.