ಚಿಕ್ಕೋಡಿಯ ಜೈನಮುನಿ ನಾಪತ್ತೆ

Advertisement

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ ೧೦೮ ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದು, ಭಕ್ತರಲ್ಲಿ ತಳಮಳ ಉಂಟು ಮಾಡಿದೆ.
ಜುಲೈ ೫ರ ರಾತ್ರಿ ೧೦ ಗಂಟೆಯವರೆಗೆ ಆಶ್ರಮದ ತಮ್ಮ ಕೋಣೆಯಲ್ಲಿಯೇ ಇದ್ದ ಮುನಿಗಳು ಮರುದಿನ ಬೆಳಗ್ಗೆ ೬ ಗಂಟೆಗೆ ಭಕ್ತರು ಆಗಮಿದಾಗ ಆಶ್ರಮದಲ್ಲಿ ಕಂಡುಬಂದಿಲ್ಲ. ವಾಸದ ಕೋಣೆಯಲ್ಲಿ ನೋಡಿದರೂ ಅಲ್ಲಿಯೂ ಕಂಡು ಬಂದಿಲ್ಲ. ಇಲ್ಲೇ ಎಲ್ಲಾದರೂ ಹೊರಹೋಗಿರಬೇಕೆಂದು ಭಕ್ತರು ಗಂಟೆಗಟ್ಟಲೆ ಕಾದರೂ ಬಾರದಿದ್ದಾಗ ಗ್ರಾಮದಲ್ಲೆಲ್ಲ ಸುದ್ದಿ ಹರಡಿ ಭಕ್ತರು ದಂಡು ಆಶ್ರಮಕ್ಕೆ ಆಗಮಿಸಿ ಜೈನಬಸದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಇಡೀ ದಿನ ಹುಡುಕಾಟ ನಡೆಸಿದರೂ ಆಚಾರ್ಯ ಮುನಿಗಳು ಸುಳಿವು ಸಿಕ್ಕಿಲ್ಲ. ಅಕ್ಕಪಕ್ಕದ ಊರುಗಳಲ್ಲೂ ವಿಚಾರಿಸಿದರೂ ಆಚಾರ್ಯರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಶುಕ್ರವಾರ ಆಚಾರ್ಯ ಕಾಮಕುಮಾರನಂದಿ ಚಾರಿಟೇಬಲ್ ಅಧ್ಯಕ್ಷ ಭೀಮಪ್ಪ ಉಗಾರೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಚಿಕ್ಕೋಡಿ ಹಾಗೂ ಹಿರೇಕೋಡಿ ಅಕ್ಕಪಕ್ಕದ ಗ್ರಾಮಗಳು. ಕಳೆದ ೧೫ ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ಮುನಿಗಳು ವಾಸವಾಗಿದ್ದರು. ಅವರು ವಾಸವಿರುವ ಕೋಣೆಯಲ್ಲಿಯೇ ಪಿಂಚಿ, ಕಮಂಡಲು ಹಾಗೂ ಮೊಬೈಲ್ ಬಿಟ್ಟು ಹೋಗಿದ್ದಾರೆ. ಮುನಿಗಳು ಎಲ್ಲಿಯೇ ಹೋದರೂ ಪಿಂಚಿ, ಕಮಂಡಲು ಜೊತೆಯಲ್ಲಿಯೇ ಕೊಂಡೊಯ್ಯುವುದು ವಾಡಿಕೆ. ಈಗ ಈ ಎಲ್ಲ ವಸ್ತುಗಳು ಕೋಣೆಯಲ್ಲಿಯೇ ಇದ್ದು, ಮುನಿಗಳು ಮಾತ್ರ ಕಾಣೆಯಾಗಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಆಶ್ರಮಕ್ಕೆ ಸಂಬಂಧಿಸಿದ ಕೆಲವು ದಾಖಲೆಪತ್ರಗಳು ನಾಪತ್ತೆಯಾಗಿವೆ ಎಂಬ ವದಂತಿ ಹರಡಿದೆ.