ಕಳಸಾ ಬಂಡೂರಿ ಯೋಜನೆ ಜಾರಿಯಲ್ಲಿ ಜೋಶಿ ರಾಜಕಾರಣ

Advertisement

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಕಳಸಾ ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ಪ್ರಧಾನಮಂತ್ರಿ ಬಳಿ ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋದಾಗ ಈ ಹೋರಾಟ ಕಾನೂನು ಹೋರಾಟ ಎಂದು ಹಾದಿ ತಪ್ಪಿಸುವ ಕೆಲಸ ಮಾಡಿ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಪ್ರಹ್ಲಾದ ಜೋಶಿ ಅನುಸರಿಸಿದ ಧೋರಣೆ ಕುರಿತು ಕಿರು ಹೊತ್ತಿಗೆ ಬಿಡುಗಡೆಗೊಳಿಸಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಡುವಳಿಕೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.
ಜುಲೈ ೧೪ಕ್ಕೆ ಕಳಸಾ ಬಂಡೂರಿ ಯೋಜನೆ ಹೋರಾಟ ೮ ವರ್ಷ ಪೂರೈಸಿ ೯ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇದು ಹೋರಾಟಗಾರರಿಗೆ ನೋವಿನ ಸಂಗತಿಯಾಗಿದ್ದರೇ, ರಾಜಕೀಯ ನಾಯಕರಿಗೆ ರಾಜಕಾರಣ ಮಾಡಲು ಸಹಕಾರಿಯಾಗಿದೆ. ಈ ಮೂಲಕ ಜನರನ್ನು ರಾಜಕೀಯ ನಾಯಕರು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಕಳಸಾ ಬಂಡೂರಿ ಯೋಜನೆ ಕಾನೂನು ಹೋರಾಟದಲ್ಲಿ ನ್ಯಾಯ ಒದಗಿಸಲು ಮಹತ್ವದ ಪಾತ್ರವಹಿಸಿರುವ ಮೋಹನ ಕಾತರಕಿ ಅವರು ಕೂಡಾ ವಿಳಂಬ ಧೋರಣೆ ಮಾಡುತ್ತಿದ್ದಾರೆ. ಇದು ನಾಡಿಗೆ ಅವರು ಎಸಗಿರುವ ದ್ರೋಹವಾಗಿದೆ. ಯೋಜನೆ ಅನುಷ್ಠಾನಕ್ಕಾಗಿ ನಿರಂತರವಾಗಿ ಹೋರಾಟ, ಪಾದಯಾತ್ರೆ, ರಕ್ತದಲ್ಲಿ ಪತ್ರ ಬರೆದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಕಿಡಿ ಕಾರಿದರು.
ಲೋಕಸಭಾ ಚುನಾವಣೆ ಪೂರ್ವಕ್ಕೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜಕೀಯವಾಗಿ ನಡೆದು ಬಂದ ರೀತಿ, ಮಠಾಧೀಶರನ್ನು ಬೇರೆ ಮಾಡಿದ ಹಾಗೂ ವೀರಶೈವ ಲಿಂಗಾಯತರ ನಡುವೆ ಒಡಕು ಮೂಡಿಸಿದ, ತಮ್ಮನ್ನು ಸಂಸದರನ್ನಾಗಿ ಮಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಮನೆಗೆ ಕಳಿಸಿದ ಅಂಶಗಳನ್ನು ಒಳಗೊಂಡಂತೆ ಜೋಶಿ ಕುರಿತ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಗುವುದು. ಈ ಕಿರುಹೊತ್ತಿಗೆಯಲ್ಲಿ ಎಲ್ಲ ಪಕ್ಷಗಳ ರಾಜಕೀಯ ನಡೆಗಳ ಅಂಶಗಳನ್ನು ಒಳಗೊಂಡಿರಲಿದೆ ಎಂದರು.
ಕಳಸಾ ಬಂಡೂರಿ ಯೋಜನೆ ಅನುಷ್ಠಾನ ವಿಳಂಬಕ್ಕೆ ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇ ಕಾರಣವಾಗಿದ್ದಾರೆ. ಅಲ್ಲದೇ ವೀರಶೈವ ಲಿಂಗಾಯತರಲ್ಲಿ ಒಡಕು ಮೂಡಿಸುವುದರಲ್ಲಿ, ಮಠಾಧೀಶರಲ್ಲಿ ಒಡಕು ಮೂಡಿಸಿ ಧರ್ಮ ಒಡೆಯುವ ಕಾರ್ಯವನ್ನು ಪ್ರಹ್ಲಾದ ಜೋಶಿ ಮಾಡಿದ್ದಾರೆ. ಈ ಕಳಸಾ ಬಂಡೂರಿ ಯೋಜನೆಯ ಶೇ.೮೦ ರಿಂದ ೯೦ ರಷ್ಟು ಬಳಕೆ ಮಾಡಿಕೊಂಡವರು ಬಿಜೆಪಿಗರು. ತುಷ್ಟಿಕರಣ ರಾಜಕಾರಣವನ್ನು ಇವರು ಮಾಡಿದ್ದಾರೆ. ಮೋಹನ ಕಾತರಕಿಯವರಿಂದ ಮಹದಾಯಿ ಯೋಜನೆ ಹಿನ್ನಡೆಯಾಗಿದೆ. ತಪ್ಪು ವಾದ ಮಾಡಿದ್ದಾರೆ ಎಂಬ ಅಂಶಗಳು ಕೇಳಿ ಬಂದಿವೆ ಎಂದು ಹೇಳಿದರು. ಮಲ್ಲಿಕಾರ್ಜುನ ಆಲೆಕರ, ಗುರು ರಾಯನಗೌಡ್ರ ಇದ್ದರು.