ದಾರ್ಶನಿಕರ ಜಯಂತಿಯ ರಾಜ್ಯ ಮಟ್ಟದ ಕಾರ್ಯಕ್ರಮ ಜಿಲ್ಲೆಗಳಲ್ಲಿ ಆಚರಿಸುವ ಚಿಂತನೆ: ಸಚಿವ ಸುನೀಲ್‌ಕುಮಾರ್

ಬ್ರಹ್ಮಶ್ರೀ ನಾರಾಯಣ ಗುರು
Advertisement

ಮಂಗಳೂರು: ರಾಜ್ಯ ಮಟ್ಟದಲ್ಲಿ ಆಚರಿಸಲಾಗುವ ದಾರ್ಶನಿಕರ ಜಯಂತಿಗಳನ್ನು ರಾಜಧಾನಿ ಬೆಂಗಳೂರಿಗೆ ಸೀಮಿತ ಮಾಡದೆ ವಿವಿಧ ಜಿಲ್ಲೆಗಳಲ್ಲಿ ಆಚರಿಸುವ ಚಿಂತನೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಮಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಜಯಂತಿಗಳು ಕೇವಲ ಇಲಾಖೆಗೆ ಸೀಮಿತವಾಗದೆ ಜನರ ನಡುವೆ ಕೊಂಡೊಯ್ಯಬೇಕೆನ್ನುವ ಉದ್ದೇಶದಿಂದ ಜಿಲ್ಲೆಗಳಲ್ಲಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೀರ್ಮಾನಿಸಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ತಿಳಿಸಿದರು.
ನಗರದ ಟಿಎಂಎ ಪೈ ಕನ್ವೆಷನ್ ಹಾಲ್‌ನಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ರಾಜ್ಯ ಮಟ್ಟದ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಇಂದಿಗೂ ಪ್ರಸ್ತುತ. ಅವರು ಸಮಾನತೆಯ ಸಂದೇಶವನ್ನು ಸಾರಿದರು. ಗುರುಗಳ ಆದರ್ಶ, ಚಿಂತನೆ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ, ಅವರು ಆದರ್ಶದಲ್ಲಿ ರಾಷ್ಟ್ರೀಯ ಮಟ್ಟದ ಚಿಂತಕರು. ನಾರಾಯಣ ಗುರುಗಳು ಧರ್ಮ ವಾದದ ವಸ್ತುವಲ್ಲ ಎಂದು ಹೇಳಿದ್ದಾರೆ ಅಂದು ಅವರು ಹೇಳಿದ ಮಾತು ಇಂದಿಗೂ ಪ್ರಸ್ತುತ ಎಂದರು.