ಸದ್ಯದಲ್ಲೇ ವಿರೋಧ ಪಕ್ಷದ ನಾಯಕ ಘೋಷಣೆ

Advertisement

ಕುಷ್ಟಗಿ: ಸದ್ಯದಲ್ಲಿಯೇ ಬಿಜೆಪಿಯಿಂದ ವಿಧಾನಸಭೆ ವಿರೋಧ ಪಕ್ಷದ ನಾಯಕರು ಯಾರಾಗುತ್ತಾರೆ ಎಂಬುದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಆದ್ದರಿಂದ ಕಾಂಗ್ರೆಸ್ಸಿನವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಪಟ್ಟಣದ ಎಪಿಎಂಸಿಯಲ್ಲಿ ಇರುವ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಸೋಲಿನ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ಹೈಕಮಾಂಡ್ ರಾಜ್ಯಕ್ಕೆ ಇಬ್ಬರನ್ನು ಕಳಿಸಿಕೊಟ್ಟು ವರದಿ ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ನಾಲ್ಕು ಜನ ವಿರೋಧ ಪಕ್ಷದ ನಾಯಕನ ಆಯ್ಕೆ ರೇಸಿನಲ್ಲಿ ಇದ್ದಾರೆ. ಅಂತಿಮವಾಗಿ ಜುಲೈ 18 ಅಥವಾ 19ಕ್ಕೆ ವಿರೋಧ ಪಕ್ಷದ ನಾಯಕ ಯಾರು ಎಂಬುವುದು ಗೊತ್ತಾಗಲಿದೆ ಎಂದರು.
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಜಾನುವಾರುಗಳಿಗೆ ಸರಿಯಾದ ಪ್ರಮಾಣದಲ್ಲಿ ಮೇವು ಸಿಗುತ್ತಿಲ್ಲ. ಮೇವು ಎಲ್ಲಿಂದ ತರಬೇಕೆಂಬುವುದರ ಕುರಿತು ಪ್ಲಾನ್ ಮಾಡಬೇಕಾಗಿತ್ತು. ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಹರಿಯಾಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮೇವು ಖರೀದಿ ಮಾಡಿಕೊಂಡು ಬಂದು ಜಾನುವಾರಗಳಿಗೆ ನೀಡಲಾಗಿದೆ. ನೀವು ಎಲ್ಲಿಂದ ತರಬೇಕೆಂಬುವುದರ ಬಗ್ಗೆ ಪ್ಲಾನ್ ರೆಡಿ ಮಾಡಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಮೇವನ್ನು ಒದಗಿಸಿಕೊಡಲು ಸಾಧ್ಯವಾಗದೇ ಇರುವುದರಿಂದ ಸುಮ್ಮನೆ ಕಾಲಹರಣ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ನಿರತವಾಗಿದೆ ಎಂದು ತಿಳಿಸಿದರು.
ಮುಂಬರುವ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ೨೮ ಕ್ಷೇತ್ರಗಳಲ್ಲಿ ಬಿಜೆಪಿ ೨೫ ಸ್ಥಾನ ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಮಲ್ಲಿದ್ದು, ಹಳೆ ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಜೆಡಿಎಸ್ ಪ್ರಭಾವ ಇರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ ಎಂಬವುದರ ಚರ್ಚಿ ನಡೆದಿದೆ. ಇನ್ನು ಈ ವಿಚಾರವಾಗಿ ಮತ್ತೇನು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು.