ಪಡೆದ ಉಪಕಾರವನ್ನು ಎಂದೂ ಮರೆಯಬೇಡ

Advertisement

ಪರಿಪೂರ್ಣವಾಗಿ ನಂಬಿದ ಸ್ನೇಹಿತನಿಗೆ ಎಂದೂ ದ್ರೋಹವನ್ನು ಬಗೆಯಬಾರದು. ಉಪಕಾರವನ್ನು ಪಡೆದು ಮರೆಯಬಾರದು. ನಂಬಿದವರಿಗೆ ಮೋಸ ಮಾಡಬಾರದು. ಇದಕ್ಕೆ ವಿರುದ್ಧವಾಗಿ ನಡೆದರೆ ಸೂರ್ಯ ಚಂದ್ರರಿರುವ ತನಕ ನರಕದಲ್ಲಿ ಬೀಳಬೇಕಾಗುತ್ತದೆ. ಎಂದು ಸ್ಮೃತಿಗಳು ಹೇಳುತ್ತವೆ.
ಆದ್ದರಿಂದ ಮುಖವನ್ನು ಪದ್ಮದಂತೆ ಸೊಗಸಾಗಿ ಮಾಡಿಕೊಂಡು, ಚಂದನದಂತೆ ಮಾತು ತಂಪು ಮಾಡಿಕೊಂಡು ಹೃದಯವನ್ನು ಮಾತ್ರ ಕತ್ತರಿ ಮಾಡಿಕೊಳ್ಳುವ ಸ್ವಭಾವ ಎಂದೆಂದೂ ಹೊಂದಿರಬಾರದು. ಇಂಥ ಸ್ವಭಾವವುಳ್ಳವರು ಯಾವಾಗಲೂ ಕೃತಘ್ನರಾಗಿರುತ್ತಾರೆ. ಈ ಕೃತಘ್ನರಿಂದ ಎಚ್ಚರದಿಂದ ಇರಬೇಕು.
ಉತ್ತಮ ಸ್ಥಾನವನ್ನು ಹೊಂದಿದವರು, ಉತ್ತಮರಾಗಲು ಬಯಸುವವರು ಎಂದೂ ಅಪ್ರಾಮಾಣಿಕವಾಗಿ ನಡೆದುಕೊಳ್ಳುವಂತಿಲ್ಲ. ಉತ್ತಮರು ಯಾವುದನ್ನು ಆಚರಿಸುತ್ತಾರೋ, ಬೇರೆಯವರು ಅದರಂತ ನಡೆದುಕೊಳ್ಳುತ್ತಾರೆ. ಉತ್ತಮರು ಯಾವುದನ್ನು ಪ್ರಮಾಣವೆನ್ನುತ್ತಾರೋ, ಬೇರೆಯವರು ಅದನ್ನೇ ಪ್ರಮಾಣ ಎನ್ನುತ್ತಾರೆ. ಹೀಗೆ ಭಾಗವತವು ಉತ್ತಮರನ್ನು ಎಚ್ಚರಿಸಿದೆ.
ಕೆಲವರು ಧೈರ್ಯವಾಗಿ ಕೆಟ್ಟ ಕೆಲಸವನ್ನು ಮಾಡುತ್ತಾರೆ. ಇದರಿಂದ ನನಗೇನೂ ಆಗುವುದಿಲ್ಲ ಎಂದು ಬೀಗುತ್ತಾರೆ. ಕೆಲವರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಇದರಿಂದ ನನಗೆ ಒಳ್ಳೆ ಫಲ ಸಿಗಲಿಲ್ಲ ಎಂದು ಕೊರಗುತ್ತಾರೆ. ಇವೆರಡೂ ಕೂಡ ತಪ್ಪು. ಕೆಟ್ಟ ಕೆಲಸ ಮಾಡಿದವನು ಶಿಕ್ಷೆಯನ್ನು ಅನುಭವಿಸಲೇಬೇಕು. ಒಳ್ಳೆಯ ಕೆಲಸ ಮಾಡಿದವನಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ. ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳ ಫಲವನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ. ಕಲ್ಪಕೋಟಿಗಳು ಕಳೆದರೂ ಅನುಭವಿಸದೆ ಕರ್ಮ ಮುಗಿಯುವುದಿಲ್ಲ. ಹೀಗೆ ಗರುಡ ಪುರಾಣದಲ್ಲಿ ತಿಳಿಸಲಾಗಿದೆ.