ʻಹೆಬ್ಬುಲಿʼ ಕಟಿಂಗ್ ಬೇಡ: ಕಟಿಂಗ್ ಅಂಗಡಿ ಮಾಲೀಕರಿಗೆ ಶಿಕ್ಷಕ ಪತ್ರ

Advertisement

ಬಾಗಲಕೋಟೆ: ಶಾಲೆಗೆ ಬರುವ ವಿದ್ಯಾರ್ಥಿಗಳು ಶಿಸ್ತಿನಿಂದ ಮತ್ತು ವ್ಯವಸ್ಥಿತವಾಗಿ ಕೂದಲನ್ನು ಕಟಿಂಗ್ ಮಾಡಿಸಿಕೊಂಡು ಬರುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವಾಜಿ ನಾಯಕ ಗ್ರಾಮದ ಐದು ಕಟಿಂಗ್ ಅಂಗಡಿಯ ಮಾಲೀಕರಿಗೆ ಪತ್ರ ಬರೆದಿರುವದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಬೇಸಿಗೆಯ ರಜೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೊಸ ಸ್ಟೈಲ್ ನಲ್ಲಿ ಕಟಿಂಗ್ ಮಾಡಿಸಿಕೊಂಡಿದ್ದರು. ಶಾಲೆ ಆರಂಭವಾದರೂ ಅದನ್ನೆ ಮುಂದುವರೆಸಿಕೊಂಡು ಬಂದಿದ್ದರು.
ವಿದ್ಯಾರ್ಥಿ ದಿಸೆಯಲ್ಲಿ ಈ ರೀತಿಯ ಕ್ಷೌರ ಮಾಡಿಸಿಕೊಂಡು ಬರುವುದು ಶಿಸ್ತು ಎನಿಸುವುದಿಲ್ಲ ಎಂದು ತಾವು ಮತ್ತು ಶಾಲೆಯ ಎಸ್‌ಡಿಎಂಸಿ ಸದಸ್ಯರಿಂದ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಕ್ಷೌರಕ್ಕಾಗಿ ಮನವಿ ಮಾಡಿಕೊಂಡಿದ್ದರು.
ನಂತರ ಗ್ರಾಮದ ಐದು ಕಟಿಂಗ್ ಅಂಗಡಿಯ ಮಾಲೀಕರಿಗೆ ಪತ್ರ ಬರೆದು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ (ಹೆಬ್ಬುಲಿ ಅಂದರೆ ಒಂದು ಕಡೆ ಕೂದಲು ಕಡಿಮೆ ಮಾಡಿಸಿ ಇನ್ನೊಂದು ಕಡೆಗೆ ಕೂದಲು ಬಿಡುವುದು) ಕಟಿಂಗ್ ಮಾಡದಿರಲು ಮನವಿ ಮಾಡಿದರು. ಮಾಡಿಸಿಕೊಳ್ಳದೆ ಇರುವ ವಿದ್ಯಾರ್ಥಿಗಳ ಕುರಿತು ಪಾಲಕರ ಮತ್ತು ಶಾಲೆಯ ಶಿಕ್ಷಕರ ಗಮನಕ್ಕೆ ತೆಗೆದುಕೊಂಡು ಬರುವಂತೆ ತಿಳಿಸಿದ್ದರು.
ಇದಕ್ಕೆ ಗ್ರಾಮದ ಕಟಿಂಗ್ ಅಂಗಡಿಯ ಮಾಲೀಕರು ಕೂಡಾ ಸ್ಪಂದಿಸಿ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಕಟಿಂಗ್ ಮಾಡತೊಡಗಿದರು.
ಮುಖ್ಯ ಶಿಕ್ಷಕರ ಮನವಿಗೆ ಗ್ರಾಮದ ಕಟಿಂಗ್ ಅಂಗಡಿಯ ಮಾಲೀಕರು, ಪಾಲಕರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಈಗ ಶಾಲೆಗೆ ಬರುವ ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಕಟಿಂಗ್ ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ. ಸದ್ಯ ಶಾಲೆಯ ವಿದ್ಯಾರ್ಥಿಗಳ ತೆಲಗೂದಲಿನಲ್ಲಿ ಶಿಸ್ತು ಕಂಡು ಬರುತ್ತಿದೆ ಎನ್ನುತ್ತಾರೆ ಶಿವಾಜಿ ನಾಯಕ.
ನೂತನ ಹೇಯರ್ ಸ್ಟೈಲ್ ಮಾಡಿಕೊಂಡು ಬರುವ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಕಡಿಮೆಯಾಗುತ್ತಿದ್ದು ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಿಂದುಳಿಯುತ್ತಿದ್ದಾರೆ. ಆದ್ದರಿಂದ ಈ ಕ್ರಮವನ್ನು ತೆಗೆದುಕೊಳ್ಳಬೇಕಾಯಿತು ಎಂದು ಮುಖ್ಯ ಶಿಕ್ಷಕ ಶಿವಾಜಿ ನಾಯಕ ತಿಳಿಸಿದರು.