ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ: ಜನಜೀವನ ಅಸ್ತವ್ಯಸ್ತ, ಒಂದು ಸಾವು

Advertisement

ಮಂಗಳೂರು/ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಳೆಯ ಅಬ್ಬರ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಧಾರಾಕಾರ ಮಳೆಯಾಗುತ್ತಿದ್ದರೂ ರಜೆ ನೀಡದ್ದರಿಂದ ಪದವಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಪರದಾಡುವಂತಾಯಿತು.
ಸಂಪರ್ಕ ಕಳೆದುಕೊಂಡ ಕುಕ್ಕೆ..
ಪವಿತ್ರ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಪ್ರವಾಸಿಗರು ಮತ್ತು ಸುಬ್ರಹ್ಮಣ್ಯಸ್ವಾಮಿ ಭಕ್ತರು ದೇಗುಲಕ್ಕೆ ತೆರಳಲು ಪರದಾಡುವಂತಾಗಿದೆ. ಕುಕ್ಕೆಯಲ್ಲಿ ಕುಮಾರಧಾರ ನದಿ ಉಕ್ಕಿ ಹರಿದು ರಸ್ತೆ ಸಂಪರ್ಕ ಬಂದ್ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸಲು ಸ್ಥಳೀಯ ಗ್ರಾಮಸ್ಥರ ಪರದಾಡುವಂತಾಗಿದೆ. ರಸ್ತೆಯಲ್ಲಿ ಎದೆ ಮಟ್ಟಕ್ಕೆ ಕುಮಾರಧಾರ ಮತ್ತು ದರ್ಪಣ ತೀರ್ಥ ನದಿಯ ನೀರು ಹರಿಯುತ್ತಿದೆ. ಸುಬ್ರಹ್ಮಣ್ಯ ಸಂಪರ್ಕ ಸಾಧ್ಯವಾಗದೆ ದ್ವೀಪದಂತಾಗಿದೆ. ಕುಕ್ಕೆ ಸುಬ್ರಹ್ಮಣ್ಯ-ಪುತ್ತೂರು-ಮಂಜೇಶ್ವರ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಮಳೆ ಹಿನ್ನೆಲೆಯಲ್ಲಿ ಪರಿಸ್ಥಿತಿ ನೋಡಿಕೊಂಡು ರಜೆ ನೀಡುವ ಅಧಿಕಾರವನ್ನು ಆಯಾ ತಹಶೀಲ್ದಾರ್‌ಗೆ ನೀಡಲಾಗಿದ್ದು, ಕೆಲ ಶಾಲೆಗಳಿಗಷ್ಟೇ ರಜೆ ನೀಡಲಾಗಿದೆ. ಪುತ್ತೂರಿನಲ್ಲಿ ಮಧ್ಯಾಹ್ನದ ಬಳಿಕ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ಪರದಾಡಿದ ವಿದ್ಯಾಥಿಗಳು..
ಭಾರೀ ಮಳೆ ಮುಂದುವರಿದಿದ್ದು ಸುಬ್ರಹ್ಮಣ್ಯದಲ್ಲಿ ಪದವಿ ವಿದ್ಯಾರ್ಥಿಗಳು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸಿ ಪರೀಕ್ಷೆಗೆ ಹಾಜರಾಗಬೇಕಾದ ಸ್ಥಿತಿ ಉಂಟಾಯಿತು. ಮಂಗಳೂರು ವಿ.ವಿ. ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದ್ದು, ಮಳೆ ಕಾರಣ ಪರೀಕ್ಷೆ ಮುಂದೂಡಿಕೆಯಾಗದ ಹಿನ್ನೆಲೆಯಲ್ಲಿ ಪಂಜ ಭಾಗದಿಂದ ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿಗೆ ಪರೀಕ್ಷೆಗೆ ಹಾಜರಾಗಲು ಬರುವ ವಿದ್ಯಾರ್ಥಿಗಳು ಜಲಾವೃತಗೊಂಡ ರಸ್ತೆಯಲ್ಲೇ ಸಂಚರಿಸಿ ಪರೀಕ್ಷಾ ಕೇಂದ್ರಗಳತ್ತ ಬಂದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸೆಮಿಸ್ಟರ್ ಪರೀಕ್ಷೆ ಮುಂದೂಡಲಿ ಎಂಬ ಆಗ್ರಹ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನ ಪರೀಕ್ಷೆಗಳು ನಡೆಯುತ್ತಿದೆ. ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮೂಲ್ಕಿ ಮೂಡುಬಿದಿರೆಯಲ್ಲೂ ಭಾರಿ ಮಳೆಯಾಗಿದೆ. ಜಿಲ್ಲೆಯಾದ್ಯಂತ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಅಲ್ಲಲ್ಲಿ ವಿದ್ಯುತ್ ಕಂಬಗಳು, ಮರಗಳು ಬೀಳುವುದು, ಗುಡ್ಡ ಕುಸಿತದ ಘಟನೆಗಳು ನಡೆಯುತ್ತಿವೆ.
ಇಂದು ರಜೆ..
ನಿರಂತರ ಮಳೆಯಾಗುತ್ತಿರುವುದರಿಂದ ಇಂದು (ಜು. 25) ಸುಳ್ಯ ತಾಲೂಕಿನ ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಒಬ್ಬ ಸಾವು…
ಪ್ರವಾಸಕ್ಕೆಂದು ಸ್ನೇಹಿತನೊಂದಿಗೆ ಉಡುಪಿ ಜಿಲ್ಲೆ ಕುಂದಾಪುರದ ಕೊಲ್ಲೂರಿಗೆ ಆಗಮಿಸಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್. ನಗರ ಸುಣ್ಣದ ಹಳ್ಳಿ ನಿವಾಸಿ ಶರತ್ ಕುಮಾರ್(23) ಎಂಬ ಯುವಕ ಜಲಪಾತದಲ್ಲಿ ಕಾಲು ಜಾರಿಬಿದ್ದು ಕೊಚ್ಚಿಹೋದ ಘಟನೆ ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ರೆಡ್ ಆಲರ್ಟ್..
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಇಂದು ಮತ್ತು ನಾಳೆ (ಜು. 24, 25) ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ೭ ದಿನಗಳ ಕಾಲ ಮಳೆ ಅರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ ವರದಿ..
ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಗಾಳಿ ಮಳೆಯಿಂದಾಗಿ ಅನೇಕ ಮನೆಗಳಿಗೆ ಹಾನಿಯಾಗಿದ್ದು ಅಪಾರ ಹಾನಿ ಸಂಭವಿಸಿದೆ. ಅಡಿಕೆ, ತೆಂಗು ತೋಟ ಹಾಗೂ ಕೃಷಿಗೂ ಹಾನಿಯುಂಟಾಗಿದೆ.
ಸೋಮವಾರ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿತ್ತು. ತೀವ್ರ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ತುಂಬಿದೆ. ಉಡುಪಿಯ ಕಲ್ಸಂಕ, ಗುಂಡಿಬೈಲು, ಉಪ್ಪೂರು ಮೊದಲಾದೆಡೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕುಂದಾಪುರ, ಬೈಂದೂರು, ಹೆಬ್ರಿ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಕೆಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ. ಭಾರೀ ಮಳೆಯಿಂದಾಗಿ ಕಡಲು ಕೊರೆತ ತೀವ್ರಗೊಂಡಿದೆ. ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ.