ಕನ್ನಡ ಭಾಷಾ ಕಲಿಕೆಗೆ ತಂದೆತಾಯಿಗಳೇ ಅಡ್ಡಿ

ಸಂಪಾದಕೀಯ
Advertisement

ನನ್ನ ಮಗು ಇಂಗ್ಲಿಷ್‌ನಲ್ಲೇ ಎಲ್ಲವನ್ನೂ ಕಲಿಯಬೇಕು ಎಂದು ಬಯಸುವ ತಂದೆತಾಯಿಗಳ ಸಂಖ್ಯೆ ಹೆಚ್ಚಾದಾಗ ಕನ್ನಡ ಬಳಕೆ ದಿನದಿಂದದಿನಕ್ಕೆ ಇಳಿಮುಖಗೊಳ್ಳುವುದು ಸಹಜ. ಅದಕ್ಕೆ ಉತ್ತರ ನಮ್ಮಲ್ಲೇ ಇದೆ.

ಕರ್ನಾಟಕದಲ್ಲಿ ಕನ್ನಡ ಭಾಷೆ ಕಲಿಕೆಗೆ ಮಕ್ಕಳ ತಂದೆತಾಯಿಗಳೇ ಈಗ ಅಡ್ಡಿಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ತಂದೆತಾಯಿಗಳು ಓದು ಬರಹ ಕಲಿಯದೇ ಇದ್ದರೂ ತಮ್ಮ ಮಕ್ಕಳು ಇಂಗ್ಲಿಷ್ ಭಾಷೆ ಕಲಿಯಬೇಕೆಂದು ಬಯಸುತ್ತಾರೆ. ಜೈಲಿನಲ್ಲಿ ಜೀವಾವಧಿ ಶಿಕ್ಷೆಯಲ್ಲಿರುವ ತಂದೆತಾಯಿಗಳೂ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕೆಂದು ಬಯಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ಕನ್ನಡ ಭಾಷೆ ಕಲಿಕೆ ಎಲ್ಲಿಯವರಿಗೆ ಉಳಿಯಲು ಸಾಧ್ಯ? ನ್ಯಾಯಾಲಯಗಳು ಭಾಷಾ ಕಲಿಕೆಯ ವಿಷಯದಲ್ಲಿ ಮಕ್ಕಳ ಪೋಷಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದೆ. ಯಾವುದೇ ಭಾಷೆಯನ್ನು ಬಲವಂತವಾಗಿ ಹೇರಲು ಬರುವುದಿಲ್ಲ. ಕನ್ನಡ ಕಲಿತರೆ ನಮ್ಮ ಮಗು ಕರ್ನಾಟಕದಲ್ಲೇ ಇರಬೇಕು. ಇಂಗ್ಲಿಷ್ ಕಲಿತರೆ ಎಲ್ಲಿ ಬೇಕಾದರೂ ಹೋಗಬಹುದು. ಕೆಲಸ ಬೇಗ ಸಿಗುತ್ತದೆ ಎಂಬುದು ತಂದೆತಾಯಿಗಳ ಅಭಿಮತ. ಅದರಲ್ಲಿ ಸ್ವಲ್ಪಮಟ್ಟಿಗೆ ಸತ್ಯಾಂಶವೂ ಇದೆ. ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಕನ್ನಡದಲ್ಲೇ ಸಂಪೂರ್ಣ ಆಡಳಿತ ಎಂದು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರೆ, ಸರ್ಕಾರಿ ನೌಕರಿಗಾಗಿ ಕನ್ನಡ ಕಲಿಯುತ್ತಿದ್ದರು. ಈಗ ಇಂಗ್ಲೀಷ್ ಕಲಿತರೆ ಸರ್ಕಾರಿ ಮತ್ತು ಖಾಸಗಿ ನೌಕರಿ ಲಭಿಸುವುದು ಸುಲಭ ಎಂದಾದರೆ ಯಾರೂ ಕನ್ನಡ ಕಲಿಯಲು ಮುಂದೆ ಬರುವುದಿಲ್ಲ. ರಾಜ್ಯದಲ್ಲಿ ಪ್ರತಿ ವರ್ಷ ೬೦ ಲಕ್ಷ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಾರೆ. ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಕಲಿಕೆ ಉಳಿದುಕೊಂಡಿದೆ. ಈಗ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಕಲಿಕೆ ಆರಂಭವಾಗಿದೆ. ಎಲ್ಲ ಹಳ್ಳಿಗಳಲ್ಲಿ ಕಾನ್ವೆಂಟ್ ಶಿಕ್ಷಣ ವ್ಯಾಪಿಸಿದೆ. ತಮ್ಮ ಮಕ್ಕಳು ಕಾನ್ವೆಂಟ್‌ಗೆ ಹೋಗುತ್ತಾರೆ ಎಂದು ಹೇಳಿಕೊಳ್ಳುವುದರಲ್ಲೇ ತಂದೆತಾಯಿಗಳಿಗೆ ಹೆಮ್ಮೆ ಇದೆ. ಕನ್ನಡವನ್ನು ಕಲಿತರೆ ಹೆಚ್ಚು ಅಂಕ ಬರುವುದಿಲ್ಲ. ಮೆರಿಟ್ ಸೀಟು ಸಿಗೋಲ್ಲ. ಕನ್ನಡ ಕಲಿತು ಏನಾಗಬೇಕಿದೆ. ಮನೆಯಲ್ಲೇ ಕನ್ನಡ ಹೇಳಿಕೊಟ್ಟರಾಯಿತು ಎಂದು ಹೇಳುವ ಹಿರಿಯರೂ ಇದ್ದಾರೆ. ಹೀಗಾಗಿ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ಕನ್ನಡ ಓದಲು ಮತ್ತು ಬರೆಯಲು ಬರುವುದಿಲ್ಲ. ಅವರು ಸರ್ಕಾರಿ ಕಚೇರಿಗಳಿಗೆ ಹೋದಾಗ ಇಂಗ್ಲೀಷ್‌ನಲ್ಲೇ ವ್ಯವಹಾರ ನಡೆಸುತ್ತಾರೆ. ಸರ್ಕಾರಿ ಅಧಿಕಾರಿಗಳು ಕನ್ನಡದಲ್ಲೇ ಅರ್ಜಿ ಸಲ್ಲಿಸಲು ಹೇಳುವುದಿಲ್ಲ. ಇಂಗ್ಲಿಷ್‌ನಲ್ಲಿ ಬರೆದ ಅರ್ಜಿಗೆ ಹೆಚ್ಚಿನ ಮನ್ನಣೆ. ಹೀಗಾಗಿ ಕನ್ನಡದಲ್ಲಿ ನೀಡಿದ ಅರ್ಜಿಗಳು ಮೂಲೆಗುಂಪಾಗುತ್ತಿವೆ. ಸಿಬಿಎಸ್‌ಸಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಧ್ವನಿ ಕೇಳುವುದಿಲ್ಲ. ಎಲ್ಲ ಶಿಕ್ಷಣ ತಜ್ಞರು ಪ್ರಾಥಮಿಕ ಶಿಕ್ಷಣ ಸ್ಥಳೀಯ ಭಾಷೆ ಅಥವ ಮಾತೃಭಾಷೆಯಲ್ಲಿ ನಡೆಯಬೇಕು ಎಂದು ಹೇಳುತ್ತಾರೆ. ಅದೇ ಮಾತೃಭಾಷೆಯನ್ನು ಮಗುವಿನ ತಾಯಿಯೇ ತಿರಸ್ಕರಿಸಿದರೆ ಗತಿ ಏನು? ಇಂಗ್ಲಿಷ್ ಕಲಿತವನು ಬುದ್ಧಿವಂತ, ಕನ್ನಡ ಕಲಿತವನು ದ್ವಿತೀಯ ದರ್ಜೆ ಎಂಬ ಭಾವನೆ ಬಂದಿದೆ. ಈ ಭಾವನೆ ಇಂದಿನ ಡಿಜಿಟಲ್ ಯುಗದಲ್ಲೂ ಉಳಿದಿರುವುದು ಆಶ್ಚರ್ಯ ಕರವಾಗಿ ಕಂಡರೂ ನಿಜ. ಎಂಜನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲಿ ನೀಡಲು ಸಾಕಷ್ಟು ಸಾಹಿತ್ಯ ಇಲ್ಲ ಎಂಬುದು ನಿಜವಾದರೂ ಸಾಹಿತ್ಯ ತಯಾರು ಮಾಡುವ ಕೆಲಸ ತ್ವರಿತಗತಿಯಲ್ಲಿ ಸಾಗಿಲ್ಲ. ಜಗತ್ತಿನ ಎಲ್ಲ ದೇಶಗಳಲ್ಲಿ ನಮ್ಮಲ್ಲಿರುವ ಹಾಗೆ ಇಂಗ್ಲಿಷ್ ಪಾರಮ್ಯ ಇಲ್ಲ. ಬಹುತೇಕ ದೇಶಗಳು ತಮ್ಮ ತಮ್ಮ ಭಾಷೆಯನ್ನು ರಕ್ಷಿಸಿಕೊಂಡು ಬಂದಿವೆ. ನಮ್ಮ ದೇಶವನ್ನು ಆಳಿದ ಬ್ರಿಟಿಷರು ನಮಗೆ ಇಂಗ್ಲಿಷ್ ಕಲಿಸಿಹೋದರು. ಅಂದಿನಿಂದ ಇಂದಿನವರೆಗೂ ಇಂಗ್ಲಿಷ್ ವ್ಯಾಮೋಹದಿಂದ ಹೊರಬರಲು ಸಾಧ್ಯವಾಗಿಲ್ಲ. ಕನ್ನಡ ಈಗ ಅಡುಗೆ ಮನೆ ಸಾಹಿತ್ಯ ಎಂದು ಅಪಹಾಸ್ಯ ಮಾಡುವ ಹಂತ ತಲುಪಿದೆ. ಸರ್ಕಾರ ಜನರ ಮತಗಳಿಕೆಗಾಗಿ ಕನ್ನಡದ ಬಗ್ಗೆ ಅಭಿಮಾನ ತೋರಿದಂತೆ ನಾಟಕವಾಡಬಹುದು. ಕೇಂದ್ರ ಸರ್ಕಾರ ಇಂಗ್ಲೀಷ್ ಮತ್ತು ಹಿಂದಿಯನ್ನು ಕಲಿಸಲು ಉತ್ಸಾಹ ತೋರುತ್ತದೆಯೇ ಹೊರತು ಸ್ಥಳೀಯ ಭಾಷೆಯ ಬಗ್ಗೆ ಅಲ್ಲ. ಅಂತರ್ಜಾಲ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಜನಪ್ರಿಯಗೊಂಡ ಮೇಲೆ ಕನ್ನಡ ಪ್ರಚಾರ ಸುಲಭದ ಕೆಲಸ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕನ್ನಡ ಬಳಸುವುದು ಕಷ್ಟದ ಕೆಲಸವೇನಲ್ಲ. ಜ್ಞಾನ ಪ್ರಸಾರಕ್ಕೂ ಭಾಷೆಗೂ ಸಂಬಂಧವಿಲ್ಲ. ಹಿಂದೆ ಸಂಸ್ಕೃತದಲ್ಲಿ ಹೇಳದ ವಿಷಯವೇ ಇರಲಿಲ್ಲ. ಅದೇರೀತಿ ಕನ್ನಡವನ್ನೂ ಬಳಸಬಹುದು. ಅದಕ್ಕೆ ಮನಸ್ಸು ಬೇಕು. ಸರ್ಕಾರದ ಸುತ್ತೋಲೆ, ನ್ಯಾಯಾಲಯಗಳ ಆದೇಶದಿಂದ ಕನ್ನಡ ಬಳಕೆಗೆ ಬರುವುದಿಲ್ಲ.