ವಿಜಯಪುರದಲ್ಲಿ ಮಳೆ ಮಧ್ಯೆ ಭೂಕಂಪನ

Advertisement

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದಲೂ ಜಿಟಿ ಜಿಟಿ ಮಳೆಯಾಗುತ್ತಿದೆ. ಈ ಮಧ್ಯೆ ಜಿಲ್ಲೆಯ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ೯.೫೫ ಕ್ಕೆ ಭೂಮಿ ಕಂಪಿಸಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮನಗೂಳಿ ಗ್ರಾಮದಿಂದ ೨.೯ ಕಿ.ಮೀ. ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದ್ದು, ರಿಕ್ಟರ್ ಮಾಪಕದಲ್ಲಿ ೨.೪ ರಷ್ಟು ತೀವ್ರತೆ ದಾಖಲಾಗಿದೆ. ಮಳೆಯಿಂದ ಮಣ್ಣಿನ ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನದ ಅನುಭವ ಆಗುತ್ತಿದೆ. ಅಲ್ಲದೆ ಇತ್ತೀಚೆಗೆ ಕಳೆದ ಜುಲೈ ೫ರಂದು ವಿಜಯಪುರದಲ್ಲಿ ಭೂಕಂಪನವಾಗಿತ್ತು. ನಗರದ ಹೊರವಲಯದಲ್ಲಿರುವ ಐನಾಪುರ ಗ್ರಾಮದ ಬಳಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿತ್ತು.
ಜಿಲ್ಲಾಡಳಿತ ಕಳೆದ ವರ್ಷ ಭೂಕಂಪನ ಮಾಪನ ತಜ್ಞರನ್ನು ಕರೆಯಿಸಿ ಪರಿಶೀಲನೆ ಸಹ ನಡೆಸಿತ್ತು. `ಆಲಮಟ್ಟಿ ಜಲಾಶಯವಿರುವ ಕಾರಣ ಅಂತರ್ಜಲ ಹೆಚ್ಚಾದಾಗ ಭೂಮಿ ಕಂಪಿಸುವುದು ಸಹಜ. ದೊಡ್ಡ ಪ್ರಮಾಣದಲ್ಲಿ ಭೂಕಂಪನ ಆಗುವುದಿಲ್ಲ. ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ತಜ್ಞರ ತಂಡ ಸ್ಪಷ್ಟನೆ ನೀಡಿತ್ತು.
ಪ್ರಸ್ತುತ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಭೂಕಂಪನದ ಅನುಭವವಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.