ದಾವಣಗೆರೆ: ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಅವರಿಗೆ ಅಪರಿಚಿತ ಯುವತಿಯೊಬ್ಬಳು ವಾಟ್ಸಪ್ ವೀಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ವರ್ತಿಸಿರುವ ಬಗ್ಗೆ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ನಿವಾಸದಲ್ಲಿದ್ದ ವೇಳೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್‌ಗೆ ಜು.೨೦ರಂದು ರಾತ್ರಿ ೧೦.೧೬ರ ವೇಳೆ ಹೌ ಆರ್ ಯು ಅಂತಾ ಮೆಸೇಜ್ ಬಂದಿದೆ. ನಂತರ ೧೦.೨೦ಕ್ಕೆ ಕಾಲ್ ಬಂದಿದೆ. ಆ ನಂತರ ವೀಡಿಯೋ ಕಾಲ್ ಮಾಡಿ, ಯುವತಿ ಅಶ್ಲೀಲವಾಗಿ ವರ್ತಿಸಿ, ಸಂಸದರಿಗೆ ಬೆದರಿಕೆ ಹಾಕಿದ್ದಾಳೆ.
ವಿಡಿಯೋ ಕಾಲ್ ಬಂದಾಗ ತಮ್ಮ ಮನೆಯಲ್ಲಿ ಒಳಗಿದ್ದರೆ ಸರಿಯಾಗಿ ಧ್ವನಿ ಕೇಳದೆಂಬ ಕಾರಣಕ್ಕೆ ಸಂಸದ ಸಿದ್ದೇಶ್ವರ ಯಾರೋ ಕರೆ ಮಾಡಿದ್ದಾರೆಂದು ಪತ್ನಿ ಗಾಯತ್ರಿ ಸಿದ್ದೇಶ್ವರ ಜೊತೆಗೆ ಹಾಲ್‌ಗೆ ಬಂದಾಗ ಅಪರಿಚಿತ ಯುವತಿ ವಾಟ್ಸಪ್ ಕಾಲ್ ಮಾಡಿ, ವೀಡಿಯೋ ಕಾಲ್ ಮಾಡಿದ್ದಾಳೆ. ಅಸಭ್ಯವಾಗಿ ವರ್ತಿಸಿದ್ದಾಳೆ. ಯುವತಿಯ ಇಂತಹ ವರ್ತನೆಯಿಂದ ಸಿಟ್ಟಿಗೆದ್ದ ಸಂಸದ ಸಿದ್ದೇಶ್ವರ ಮತ್ತು ಪಕ್ಕದಲ್ಲಿದ್ದ ಗಾಯತ್ರಿ ಸಿದ್ದೇಶ್ವರ ಯುವತಿಯ ಮೇಲೆ ಜೋರು ಮಾಡಿದ್ದಾರೆ.
ನಂತರ ಮತ್ತೆ ಕರೆ ಮಾಡಿದ ಅಪರಿಚಿತ ಯುವತಿ ಸಂಸದ ಸಿದ್ದೇಶ್ವರರಿಗೆ ಬ್ಲಾಕ್ ಮಾಡಿದ್ದಾರೆ. ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುವುದಾಗಿ ಸಂಸದರಿಗೆ ಬೆದರಿಕೆ ಹಾಕಿದ್ದಾಳೆ. ರಾಜಸ್ಥಾನದಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ವೀಡಿಯೋ ಕಾಲ್‌ನಲ್ಲಿ ಅಶ್ಲೀಲವಾಗಿ ವರ್ತಿಸಿದ ಯುವತಿ ಬಗ್ಗೆ ತಕ್ಷಣವೇ ಬೆಂಗಳೂರಿನಿಂದಲೇ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಟ ಡಾ.ಕೆ.ಅರುಣ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ.ಬಸರಗಿ ಅವರಿಗೆ ಕರೆ ಮಾಡಿ, ಅಪರಿಚಿತ ಯುವತಿ ಕರೆ ಮಾಡಿದ್ದು, ವಾಟ್ಸಪ್ ಮೆಸೇಜ್ ಮಾಡಿ, ವೀಡಿಯೋ ಕಾಲ್ ಮಾಡಿ, ಅಶ್ಲೀಲವಾಗಿ ವರ್ತಿಸಿ, ಬ್ಲಾಕ್ ಮೇಲ್ ಮಾಡಿದ್ದ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಆ ನಂಬರ್ ಬ್ಲಾಕ್ ಮಾಡುವಂತೆ ಸಂಸದರಿಗೆ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ. ನಂತರ ಎಸ್ಪಿ ಡಾ.ಕೆ.ಅರುಣ್ ಸಲಹೆಯಂತೆ ಬೆಂಗಳೂರಿನಲ್ಲಿ ತಮ್ಮ ಪರಿಚಿತರಾದ ಡಿವೈಎಸ್ಪಿ ಗೀತಾ ಎಂಬುವರಿಗೆ ಸಂಸದ ಸಿದ್ದೇಶ್ವರ ಕರೆ ಮಾಡಿ, ಘಟನೆ ಬಗ್ಗೆ ವಿವರಿಸಿದ್ದಾರೆ. ನಂತರ ಸಂಸದ ಡಾ.ಜಿ.ಎಂ.ಸಿದ್ದೇಶ್ವರರಿಂದ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಯುವತಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.