20 ವರ್ಷಗಳ ಬಳಿಕ ಗ್ರಾಮಕ್ಕೆ ಬಸ್‌: ಗ್ರಾಮಸ್ಥರಲ್ಲಿ ಸಂಭ್ರಮ

Advertisement

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಆಸಂಗಿಯ ಗ್ರಾಮಸ್ಥರು ಏಳೆಂಟು ವರ್ಷಗಳಿಂದ ಬಸ್‌ಗಾಗಿ ಬೇಡಿಕೆಯಿಟ್ಟು ಕೊನೆಗೂ ಬುಧವಾರ ಗ್ರಾಮಕ್ಕೆ ಬಂದ ಬಸ್‌ನ್ನು ಸ್ವಾಗತಿಸಿ, ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಆಸಂಗಿ ಹಾಗು ಅಸ್ಕಿ ಗ್ರಾಮಗಳಲ್ಲಿ ಸಾವಿರಕ್ಕೂ ಅಧಿಕ ಮನೆಗಳಿವೆ. ಅನೇಕ ಸರ್ಕಾರಗಳು ಬಂದು ಹೋದರೂ ಈ ಗ್ರಾಮಗಳಿಗೆ ಸರ್ಕಾರಿ ಬಸ್ ಓಡಿರಲಿಲ್ಲ. ಬಡವರು-ಕೂಲಿ ಕಾರ್ಮಿಕರೇ ಹೆಚ್ಚಿರುವ ಮೂಲಭೂತ ಸೌಲಭ್ಯ ಹಾಗೂ ಸರ್ಕಾರಿ ಬಸ್ ಸೇವೆಗೆ ಮನವಿ ಮಾಡುತ್ತಲೇ ಬಂದಿದ್ದರು. ಆದರೆ ಮಾಡುತ್ತೇವೆ ಅನ್ನೋ ಸರ್ಕಾರ ಹಾಗೂ ಜನನಾಯಕರು ಏನನ್ನೂ ಮಾಡಿರಲಿಲ್ಲ.
ತೊಂದರೆ ಅನುಭವಿಸುತ್ತಿದ್ದ ಗ್ರಾಮೀಣ ವಿದ್ಯಾರ್ಥಿಗಳು, ರೈತರು, ನೌಕರರು, ಕಾರ್ಮಿಕರು, ಅನಾರೋಗ್ಯ ಪೀಡಿತರಿಗೆ ಬಸ್ ಸೌಕರ್ಯದಿಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಸಮೀಪವಿರುವ ರಬಕವಿ-ಬನಹಟ್ಟಿ ನಗರಕ್ಕೆ ಸಂಚರಿಸಲು ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿತ್ತು. ಇದೀಗ ಬಸ್ ಸೌಲಭ್ಯದಿಂದ ಮತ್ತಷ್ಟು ಕೆಲಸಗಳಿಗೆ ಸಹಾಯವಾಗುವುದಲ್ಲದೆ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗಕ್ಕೆ ಸಹಕಾರಿಯಾಗಲಿದೆ ಎಂದರು.
‘ಸಂಯುಕ್ತ ಕರ್ನಾಟಕ’ ಕ್ಕೆ ಅಭಿನಂದನೆ
ಈ ಹಿಂದೆ ಸಂಯುಕ್ತ ಕರ್ನಾಟಕದಲ್ಲಿ `ಬಸ್ ವಂಚಿತ ಆಸಂಗಿ-ಅಸ್ಕಿ ಗ್ರಾಮ’ ಎಂಬ ಬಗ್ಗೆ ವರದಿ ಮಾಡಿ ಗಮನ ಸೆಳೆದಿದ್ದಕ್ಕೆ ಗ್ರಾಮಸ್ಥರ ಪರವಾಗಿ ಮಹಾದೇವ ಗಾಯಕವಾಡ ಅಭಿನಂದನೆ ತಿಳಿಸಿದರು.