ಉಚಿತ ಗ್ಯಾರಂಟಿಗೆ ಸರ್ವರ್ ಕಂಟಕ

Advertisement

೫ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಸೇರ್ಪಡೆಗೊಳ್ಳುವುದು ವಿಳಂಬವಾಗಿದೆ.

ಕರ್ನಾಟಕದಲ್ಲಿ ಹೊಸ ಸರ್ಕಾರ ಬರುವುದಕ್ಕೆ ಮೊದಲೇ ೫ ಉಚಿತ ಗ್ಯಾರಂಟಿ ಯೋಜನೆಗಳು ಜನರ ಬಾಯಲ್ಲಿ ಹರಿದಾಡುತ್ತಿದ್ದವು ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸುವುದಾಗಿ ಸರ್ಕಾರ ಪ್ರಕಟಿಸಿ ಕ್ರಮ ಕೈಗೊಳ್ಳುತ್ತಿದೆ. ಇಂಟರ್‌ನೆಟ್, ಸರ್ವರ್ ಸಮಸ್ಯೆ ದೊಡ್ಡದಾಗಿದೆ.. ಹೆಂಗಸರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಬೇರೆ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಮಹಿಳೆಯರು ಉಚಿತ ಪ್ರಯಾಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಗ್ಯಾರಂಟಿ ಯೋಜನೆ ಬಗ್ಗೆ ಯಾರಿಂದಲೂ ತಕರಾರು ಇಲ್ಲ. ಆದರೆ ಗೃಹ ಜ್ಯೋತಿ ಗ್ಯಾರಂಟಿ ಯೋಜನೆಯಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿವೆ. ಮೊದಮೊದಲು ಇಂಟರ್‌ನೆಟ್ ಮತ್ತು ಪೋರ್ಟಲ್ ಸಿಗುವುದು ಕಷ್ಟವಾಗಿತ್ತು. ಈಗ ಆ ಸಮಸ್ಯೆ ಇಲ್ಲ. ಆಗಸ್ಟ್ ೧ರಿಂದ ಉಚಿತ ವಿದ್ಯುತ್ ಹೇಗೆ ಲಭಿಸುತ್ತದೆ ಎಂಬುದು ಯಾರಿಗೂ ತಿಳಿಯದು. ಜನ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್ ೧ ರಿಂದ ಹೊಸ ವಿದ್ಯುತ್ ಬಿಲ್ ಬಂದಾಗಲೇ ಎಲ್ಲವೂ ತಿಳಿಯುತ್ತದೆ. ಮಾಸಿಕ ೨೦೦ ಯೂನಿಟ್ ಉಚಿತ ಎಂದು ಹೇಳಿದ್ದರೂ ವಿದ್ಯುತ್ ಮೇಲೆ ಇಂಧನ ದರ ಹೊಂದಾಣಿಕೆಯನ್ನು ಯಾರು ಪಾವತಿಸಬೇಕು ಎಂಬುದು ಸ್ಪಷ್ಟವಾಗಿಲ್ಲ. ಗೃಹಜ್ಯೋತಿ ಯೋಜನೆಯಲ್ಲಿ ಹೆಸರು ನೋಂದಾಯಿಸಲು ಅಂತಿಮ ದಿನ ಎಂಬುದು ಇಲ್ಲ. ಪ್ರತಿ ತಿಂಗಳು ೨೭ ರೊಳಗೆ ಹೆಸರನ್ನು ನೋಂದಾಯಿಸಿದರೆ ಮುಂದಿನ ತಿಂಗಳಲ್ಲ್ಲಿ ಅದು ನಮೂದಾಗುತ್ತದೆ. ಒಮ್ಮೆ ನೋಂದಾಯಿಸಿದರೆ ಸಾಕು. ಅದೇ ರೀತಿ ಅನ್ನಭಾಗ್ಯ ಜಾರಿಗೆ ಬಂದಿದೆ. ಇದರಲ್ಲಿ ೫ ಕೆಜಿ ಅಕ್ಕಿ ಕೇಂದ್ರ ನೀಡಿದ್ದು ವಿತರಣೆಯಾಗುತ್ತಿದೆ. ಉಳಿದ ೫ ಕೆಜಿ ಅಕ್ಕಿಗೆ ಪರ್ಯಾಯವಾಗಿ ಹಣ ಕೊಡುವುದು ಇನ್ನೂ ಎಲ್ಲ ಫಲಾನುಭವಿಗಳನ್ನು ತಲುಪುತ್ತಿಲ್ಲ. ಇದಕ್ಕೆ ಬ್ಯಾಂಕ್ ಖಾತೆ ಮತ್ತು ಆಧಾರ್ ನಂಬರ್ ಸೇರ್ಪಡೆ ಅಗತ್ಯ. ಇದಕ್ಕಾಗಿ ಜನ ಪರದಾಡುತ್ತಿದ್ದಾರೆ. ಆಧಾರ್ ವಿವರಗಳು ಸಮರ್ಪಕವಾಗಿದ್ದರೆ ಮಾತ್ರ ಅದನ್ನು ಬ್ಯಾಂಕ್ ಖಾತೆಯೊಂದಿಗೆ ಸೇರ್ಪಡೆ ಮಾಡಬಹುದು. ಬಹುತೇಕ ಜನರ ಕಾರ್ಡ್‌ಗಳಲ್ಲಿ ವಿವರಗಳು ಅಸ್ಪಷ್ಟವಾಗಿದೆ. ಅವರು ಆಧಾರ್‌ನಲ್ಲೇ ಕೆಲವು ತಿದ್ದುಪಡಿ ಮಾಡಿಸಿಕೊಳ್ಳಬೇಕಾಗಿ ಬಂದಿರುವುದು ಬೆಂಗಳೂರು ಒನ್ ಸೇರಿದಂತೆ ಹಲವು ಕೇಂದ್ರಗಳಲ್ಲಿ ಜನಜಂಗುಳಿಗೆ ಕಾರಣವಾಗಿದೆ. ಬ್ಯಾಂಕ್‌ಗಳಲ್ಲೂ ಕೂಡ ಫಲಾನುಭವಿಗಳು ತುಂಬಿ ಹೋಗಿದ್ದಾರೆ. ಲಕ್ಷಾಂತರ ಜನರಿಗೆ ಸೇವೆ ನೀಡಲು ನಮ್ಮ ಸರ್ಕಾರಿ ಇಲಾಖೆಗಳು ಸಶಕ್ತವಾಗಿಲ್ಲ. ಮನೆ ಯಜಮಾನಿಗೆ ಮಾಸಿಕ ೨ ಸಾವಿರ ರೂ. ನೀಡುವುದು ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗ ಭತ್ಯೆ ನೀಡುವುದು ಇನ್ನೂ ಪೂರ್ಣ ಸ್ವರೂಪ ಪಡೆದುಕೊಂಡಿಲ್ಲ. ಜನ ಸಾಮಾನ್ಯರಂತೂ ಅತ್ಯುತ್ಸಾಹದಿಂದ ಗ್ಯಾರಂಟಿ ಯೋಜನೆಗಳ ಫಲ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಅವರ ಉತ್ಸಾಹಕ್ಕೆ ತಕ್ಕಂತೆ ಸ್ಪಂದಿಸಲು ಸರ್ಕಾರಿ ಇಲಾಖೆಗಳು ಸಜ್ಜುಗೊಂಡಿಲ್ಲ. ಇದರಿಂದ ಎಲ್ಲ ಕಡೆ ವಿಳಂಬ ಧೋರಣೆ ಕಂಡು ಬರುತ್ತಿದೆ. ಜನ ಸರ್ಕಾರಿ ಯಂತ್ರದ ಮಂದಗತಿಯನ್ನು ಕಂಡು ಆಕ್ರೋಶಗೊಂಡಿರುವುದಂತೂ ನಿಜ.
ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು ೫ ಕೆಜಿ ಅಕ್ಕಿ ನೀಡುವುದು ಮುಂದುವರಿದಿದೆ. ಉಳಿದ ೫ ಕೆಜಿಗೆ ಹಣ ನೀಡಬೇಕು. ಇಲ್ಲೂ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಜೋಡಣೆಯಾಗುವುದು ಬಹಳ ಮುಖ್ಯ. ಬಹುತೇಕ ಕಡೆ ಇದೇ ಸಮಸ್ಯೆಯಿಂದ ಫಲಾನುಭವಿಗಳಿಗೆ ಹಣ ತಲುಪುವುದು ಕಷ್ಟವಾಗಿದೆ. ೫ ಕೆಜಿ ಅಕ್ಕಿಗೆ ಪರ್ಯಾಯವಾಗಿ ಬೇರೆ ಧಾನ್ಯ ನೀಡುವ ಆಲೋಚನೆ ಇನ್ನೂ ಕಾರ್ಯಗತವಾಗಿಲ್ಲ. ಚುನಾವಣೆ ಕಾಲದಲ್ಲಿ ನೀಡಿದ ಭರವಸೆಗಳನ್ನು ಅನುಷ್ಠಾನಕ್ಕೆ ತರುವುದು ಕಷ್ಟದ ಕೆಲಸ ಎಂಬುದು ಈಗ ಆಡಳಿತ ಪಕ್ಷದವರ ಅರಿವಿಗೆ ಬರುತ್ತಿದೆ. ೫ ಗ್ಯಾರಂಟಿಗಳಿಗೆ ಹಣಕಾಸು ಸಂಪನ್ಮೂಲವನ್ನು ಕಂಡುಕೊಳ್ಳಬೇಕಿರುವುದರಿಂದ ಸರ್ಕಾರ ಗಣಿಗಾರಿಕೆ ರಾಜಧನದ ಹೆಚ್ಚಳದಿಂದ ಹಿಡಿದು ಆಸ್ತಿ ನೋಂದಣಿ ಶುಲ್ಕ ಹೆಚ್ಚಿಸುವವರೆಗೆ ಎಲ್ಲ ಸಂಪನ್ಮೂಲಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.