ಕೇವಲ ಹೆಸರಿಗೆ ₹5,000 ಕೋಟಿ ಹಣ

Advertisement

ಬೆಂಗಳೂರು: ಹಿಂದಿನ ಸರ್ಕಾರ ಕೇವಲ ಹೆಸರಿಗೆ ₹5,000 ಕೋಟಿ ಹಣ ಕೊಟ್ಟಿದ್ದಾಗಿ ಹೇಳಿ ಮೋಸ ಮಾಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರು ಇತ್ತಿಚೆಗೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸಚಿವರೂ ಸೇರಿ ಯೋಜನಾ ಸಚಿವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕುರಿತು ಇಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು “ಹಿಂದಿನ ಸರ್ಕಾರದಲ್ಲಿ ನಡೆದ ವ್ಯಾಪಕ ಭೃಷ್ಟಾಚಾರ ಇಡೀ ಮಂಡಳಿಯ ಉದ್ದೇಶಿತ ಹಾದಿಯನ್ನೇ ಮುಳುಗಿಸಿತ್ತು. ಕೇವಲ ಹೆಸರಿಗೆ ₹5,000 ಕೋಟಿ ಹಣ ಕೊಟ್ಟಿದ್ದಾಗಿ ಹೇಳಿ ಮೋಸ ಮಾಡಿದ್ದು, ಅನೇಕ ಕಾನೂನುಗಳನ್ನು ಉಲ್ಲಂಘಿಸಿ ಹಣ ಲೂಟಿ ಮಾಡುವ ಕೆಟ್ಟ ಸಂಪ್ರದಾಯ ಚಾಲ್ತಿಯಲ್ಲಿದಿದ್ದದ್ದು ಕಂಡು ಬಂದಿದೆ. ಈ ಕಾರಣಗಳಿಂದ ಕಳೆದ ಸಾಲಿನಲ್ಲಿ 26%ನಷ್ಟು ಅನುದಾನವನ್ನು ಬಳಸಿಕೊಳ್ಳಲೂ KKRDB ಯಿಂದ ಸಾಧ್ಯವಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಕಾನೂನು ಮುರಿದು ಅಕ್ರಮಗಳಿಗೆ ಕಾರಣರಾದರೆಲ್ಲರನ್ನೂ ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳಲು ಯೋಜನಾ ಸಚಿವರಿಗೆ ಮನವಿ ಸಲ್ಲಿಸಲಾಯಿತು. ನಮ್ಮ ಭಾಗದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ದಿವಂಗತ ಧರಂ ಸಿಂಗ್ ಮುಂತಾದ ನಾಯಕರ ಅವಿರತ ಶ್ರಮದಿಂದ ಸಾಂವಿಧಾನಿಕ ತಿದ್ದುಪಡಿ ಮಾಡಿ 371(J) ಜಾರಿ ಮಾಡಲಾಯಿತು. ಆದರೆ ಕಳೆದ ನಾಲ್ಕು ವರ್ಷದಲ್ಲಿ ಕಾನೂನನ್ನು ನಿಯಮಗಳಿಗೆ ವಿರುದ್ಧವಾಗಿ ಸಡಿಲಗೊಳಿಸಿ ನಮ್ಮ ಭಾಗದ ಜನರಿಗೆ ಸಿಕ್ಕಿರುವ ಹಕ್ಕನ್ನು ಕಸಿದುಕೊಳ್ಳುವ ಕೆಲಸ ನಡೆಸಲಾಗಿತ್ತು. ಆದ್ದರಿಂದ KKRDBಯನ್ನ ಮತ್ತೆ ಪ್ರಗತಿಯ ಹಾದಿಗೆ ತರಲು ನಮ್ಮ ಸಂಪೂರ್ಣ ಪ್ರಯತ್ನ ಜಾರಿಯಲ್ಲಿರಲಿದೆ. ಕಲ್ಯಾಣ ಕರ್ನಾಟಕದ ಹೆಸರಿಗೆ ತಕ್ಕಂತೆ ಅರ್ಥ ತರಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.