ದಿನನಿತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲೇ ಅವ್ಯವಸ್ಥೆ

ಸಂಪಾದಕೀಯ
Advertisement

ಅಗತ್ಯವಸ್ತುಗಳ ಬೆಲೆ ನಿಯಂತ್ರಣಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಕೆಜಿ ೫೦ ಪೈಸೆಗೆ ಸಿಗುತ್ತಿದ್ದ ಟೊಮೇಟೊ ಈಗ ೨೦೦ ರೂ. ಇದಕ್ಕೆ ರೈತ- ಗ್ರಾಹಕ ಇಬ್ಬರೂ ಕಾರಣರಲ್ಲ. ಕೇಂದ್ರ-ರಾಜ್ಯಗಳಲ್ಲಿನ ವ್ಯವಸ್ಥೆಯ ಲೋಪ

ದೇಶದಲ್ಲಿ ಪ್ರತಿ ಪ್ರಜೆಗೆ ೨೨ ಅಗತ್ಯವಸ್ತುಗಳು ಬೇಕು ಎಂದು ಪಟ್ಟಿ ಮಾಡಲಾಗಿದೆ. ಇವುಗಳ ಬೆಲೆ ನಿಯಂತ್ರಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕರ್ತವ್ಯ. ಅಗತ್ಯ ವಸ್ತುಗಳಲ್ಲಿ ಅಕ್ಕಿಯಿಂದ ಹಿಡಿದು ಔಷಧದವರೆಗೆ ಎಲ್ಲವೂ ಬರುತ್ತದೆ. ಅದರಲ್ಲೂ ಕೃಷಿ ಉತ್ನನ್ನಗಳು ಹೆಚ್ಚು ದಿನ ಉಳಿಯುವುದಿಲ್ಲ. ಅವುಗಳ ದಾಸ್ತಾನು ಬಹಳ ಕಷ್ಟದ ಕೆಲಸ. ಇವುಗಳ ಬೆಲೆ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಹಳ ಪರಿಶ್ರಮ ಪಡಬೇಕು. ಅಗತ್ಯವಸ್ತುಗಳ ಮಹತ್ವ ಎಂದರೆ ಅದನ್ನು ಉತ್ಪಾದಿಸುವವನಿಗೆ ನಷ್ಟ ಆಗಬಾರದು. ಅದನ್ನು ಖರೀದಿ ಮಾಡುವವನಿಗೂ ಕೈಕಚ್ಚಬಾರದು. ಈ ರೀತಿ ಬೆಲೆಯಲ್ಲಿ ಸಮತೋಲನ ಕಾಯ್ದುಕೊಂಡು ಹೋಗುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯ.
ಹಿಂದೆ ಟೊಮೇಟೊ ದರ ಹಲವು ಬಾರಿ ಕೆಜಿಗೆ ೫೦ ಪೈಸೆಗೆ ಇಳಿದಿತ್ತು. ರೈತರು ಬೆಲೆ ಇಳಿದಿರುವುದನ್ನು ನೋಡಿ ಹೊಲದಲ್ಲೇ ಅದನ್ನು ಬಿಟ್ಟು ಬಿಟ್ಟರು. ಕೆಲವರು ರಸ್ತೆಗೆ ಸುರಿದರು. ಇಂದು ಹಿಂದಿನ ದಿನಗಳ ಕತೆ. ಈಗ ಟೊಮೇಟೊ ಕೆಜಿಗೆ ೨೦೦ ರೂ. ತಲುಪಿದೆ. ಬೇರೆ ರಾಜ್ಯಗಳಲ್ಲಿ ನಾಫೆಡ್ ಸಂಸ್ಥೆ ನ್ಯಾಯಬೆಲೆ ಅಂಗಡಿಗಳ ಮೂಲಕ ಟೊಮೇಟೊ ಮಾರಾಟ ಮಾಡುವ ವ್ಯವಸ್ಥೆ ಮಾಡಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಈ ವ್ಯವಸ್ಥೆ ಇಲ್ಲ. ನಮ್ಮದು ಟೊಮೇಟೊ ಉತ್ಪಾದನೆ ರಾಜ್ಯವಾದ್ದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿಲ್ಲ. ಇದೇ ರೀತಿ ಹಲವು ಅಗತ್ಯ ವಸ್ತುಗಳ ಬೆಲೆ ಏರಿಳಿತ ಮುಂದುವರಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊದಲಿನಿಂದಲೂ ಅಗತ್ಯ ವಸ್ತುಗಳ ಬಗ್ಗೆ ಗಂಭೀರವಾದ ಕ್ರಮ ಕೈಗೊಳ್ಳಲು ಹೋಗಿಲ್ಲ. ೧೯೫೫ ರಿಂದ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ ಜಾರಿಯಲ್ಲಿದೆ. ಇದನ್ನು ವರ್ತಕರು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದಾರೆ. ಆದರೆ ಈ ಕಾಯ್ದೆ ಮೂಲಕ ಜಿಲ್ಲಾಧಿಕಾರಿಗಳು ಕಾಳಸಂತೆಯನ್ನು ನಿಯಂತ್ರಿಸಲು ಅವಕಾಶವಿದೆ. ೧೯ ಅಗತ್ಯ ವಸ್ತುಗಳು ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಅನಗತ್ಯ ದಾಸ್ತಾನು ತಡೆಗಟ್ಟಲು ಅವಕಾಶ ನೀಡುತ್ತವೆ. ಈ ಕಾಯ್ದೆಯನ್ನು ಈಗಲೂ ಬದಲಿಸಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲಿತ ಬೆಲೆ ಫೋಷಿಸುವ ಮೂಲಕ ಅವುಗಳ ನಿಯಂತ್ರಣಕ್ಕೆ ಅಧಿಕಾರ ಹೊಂದಿದೆ. ಅದೇ ರೀತಿ ಬೆಲೆ ಸ್ಥಿರೀಕರಣಕ್ಕೆ ಪ್ರತ್ಯೇಕ ನಿಧಿಯನ್ನು ಹೊಂದಿದೆ. ಕೇಂದ್ರ ಆಹಾರ ನಿಗಮ ಎಲ್ಲ ಆಹಾರಧಾನ್ಯಗಳನ್ನು ಸುಗ್ಗಿಯ ಕಾಲದಲ್ಲಿ ಸಂಗ್ರಹಿಸಿ ಗೋದಾಮುಗಳಲ್ಲಿ ಸಂರಕ್ಷಣೆ ಮಾಡುತ್ತದೆ. ಅಭಾವದ ಕಾಲದಲ್ಲಿ ವಿತರಿಸುತ್ತದೆ. ರಾಜ್ಯ ಸರ್ಕಾರ ಈ ರೀತಿ ಗೋದಾಮು ಸಾಮರ್ಥ್ಯ ಹೆಚ್ಚಿಸಿಕೊಂಡಿಲ್ಲ. ಅದರಿಂದ ಸುಗ್ಗಿಯ ಕಾಲದಲ್ಲಿ ಎಲ್ಲ ಕೃಷಿಉತ್ಪನ್ನಗಳ ಬೆಲೆ ಕಡಿಮೆಯಾಗಿ ತಕ್ಷಣವೇ ಅಧಿಕಗೊಳ್ಳುತ್ತದೆ.
ಕೃಷಿ ವಸ್ತುಗಳ ಬೆಲೆ ನಿಯಂತ್ರಣದಲ್ಲಿ ಮಾಫಿಯಾ ಕೈವಾಡವಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಜನರಿಗೆ ಅಗತ್ಯ ವಸ್ತುಗಳು ಕಡಿಮೆ ದರದಲ್ಲಿ ಲಭಿಸುವಂತೆ ಮಾಡಬಹುದು. ರಾಜ್ಯ ಸರ್ಕಾರಗಳು ಪಡಿತರ ವ್ಯವಸ್ಥೆ ನಿಯಂತ್ರಣ ಹೊಣೆಗಾರಿಕೆ ಹೊಂದಿದೆ. ಇದು ಪಾರದರ್ಶಕವಾಗಿ ನಡೆದರೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆಗಳ ನಿಯಂತ್ರಣ ಸಾಧ್ಯ. ಇದು ಒಂದು ರೀತಿಯಲ್ಲಿ ವಿಷವರ್ತುಲ. ಪಡಿತರ ವ್ಯವಸ್ಥೆಯ ಮೂಲಕ ರಾಜ್ಯ ಸರ್ಕಾರ ಹೆಚ್ಚು ಆಹಾರ ಧಾನ್ಯ ನೀಡಿದರೆ ಅದು ಮುಕ್ತ ಮಾರುಕಟ್ಟೆಗೆ ಬಂದು ದರ ಏರಿಕೆ ಕಾರಣವಾಗುತ್ತದೆ.ಕೃಷಿ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ಹೂಡಿಕೆಯಾದಲ್ಲಿ ಆಹಾರಧಾನ್ಯಗಳ ಬೆಲೆ ಸ್ಥಿರಗೊಳ್ಳುತ್ತದೆ. ದೇಶದಲ್ಲಿ ಬೆಲೆ ನಿಯಂತ್ರಣದ ಬಗ್ಗೆ ಪ್ರತಿದಿನ ಚಿಂತಿಸುವ ಆರ್‌ಬಿಐ ಕೃಷಿ ಸಾಮಗ್ರಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯುವ ಕೆಲಸವನ್ನು ಹೆಚ್ಚು ವೈಜ್ಞಾನಿಕವಾಗಿ ಕೈಗೊಳ್ಳುತ್ತಿಲ್ಲ. ಅದರಿಂದ ಕೃಷಿ ರಂಗದಲ್ಲಿ ಈಗಲೂ ಕಪ್ಪುಹಣದ ಕೈವಾಡ ಇದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆರ್‌ಬಿಐ, ನರ್ಬಾರ್ಡ್, ನಾಫೆಡ್, ಎನ್‌ಸಿಸಿಎಫ್ ಸೇರಿದಂತೆ ಸಂಸ್ಥೆಗಳು ಹೆಚ್ಚು ಅಧ್ಯಯನ ನಡೆಸುವ ಅಗತ್ಯವಿದೆ.