ಜಗತ್ತಿಗೆ ಬೇಕಾದ ತಾಂತ್ರಿಕ ಕೌಶಲ ಸಾಧಿಸಿ

ಐಐಟಿ
Advertisement

ಧಾರವಾಡ: ತಂತ್ರಜ್ಞಾನದ ಬೆನ್ನು ಬಿದ್ದ ಜಗತ್ತಿಗೆ ಬೇಕಾದ ತಾಂತ್ರಿಕ ಕೌಶಲ್ಯ, ವೃತ್ತಿ ನೈಪುಣ್ಯತೆಯಲ್ಲಿ ಪರಿಣಿತಿ ಸಾಧಿಸಿ ಜಾಗತಿಕ ಮಟ್ಟದ ಸಾಧನೆಗೆ ಪದವೀಧರರು ಮುಂದಾಗಬೇಕು ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ಕರೆ ನೀಡಿದರು.
ಧಾರವಾಡದ ವಾಲ್ಮಿ ಸಭಾಭವನದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ೩ನೇ ಘಟಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಜನರಿಗೆ ಅನುಕೂಲತೆ ಕಲ್ಪಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಯುವ ಪದವೀಧರರ ಮೇಲಿರುವ ದೊಡ್ಡ ಜವಾಬ್ದಾರಿ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಒಳಿತನ್ನುಂಟು ಮಾಡುವ ತಂತ್ರಜ್ಞಾನ ನಮಗೆ ಬೇಕಾಗಿದೆ. ಉತ್ತಮ ಸಂವಹನ ಕಲ್ಪಿಸುವ ತಂತ್ರಜ್ಞಾನವನ್ನು ಸಮಾಜ ನಿರೀಕ್ಷಿಸುತ್ತಿದೆ ಎಂದರು.
ಸೋಶಿಯಲ್ ಕಂಪ್ಯೂಟಿಂಗ್, ಕ್ರೌಡ್‌ಸೋರ್ಸಿಂಗ್ ಸೇರಿದಂತೆ ಆಡಳಿತ ಸುಗಮಗೊಳಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಬೇಕು. ನೂತನ ಶಿಕ್ಷಣ ನೀತಿ ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಮಾನವೀಯ ಮೌಲ್ಯ ಹೊಂದಿದ ಜಾಗತಿಕ ನಾಗರಿಕರನ್ನು ಸೃಷ್ಟಿಸುವಲ್ಲಿ ಪೂರಕವಾಗಿದೆ. ದೂರದೃಷ್ಟಿಯುಳ್ಳ ನಾಯಕರಿಂದ ಭಾರತವು ಜಾಗತಿಕವಾಗಿ ಪ್ರಾಮುಖ್ಯತೆ ಪಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ಬಾಹ್ಯಾಕಾಶ ವಿಜ್ಞಾನಿಯಾಗಿ ನಾನು ಹೇಳುವುದೇನೆಂದರೆ ಯಶಸ್ಸು ಹಾಗೂ ವೈಫಲ್ಯ ಎರಡರಿಂದಲೂ ನಾವು ಕಲಿಯುವುದು ಸಾಕಷ್ಟಿದೆ. ಒಂದು ಗಗನ ನೌಕೆಯನ್ನು ಯಶಸ್ವಿಯಾಗಿ ಅಂತರಿಕ್ಷದಲ್ಲಿ ಹಾರಿಬಿಡಲು ಸಾಂಘಿಕ ಪ್ರಯತ್ನ ಬೇಕು. ದೃಢಸಂಕಲ್ಪ, ಆತ್ಮವಿಶ್ವಾಸ, ಪರಿಶ್ರಮದಿಂದ ಯಾವ ಕಾರ್ಯದಲ್ಲಾದರೂ ಯಶಸ್ವಿಯಾಗಲು ಸಾಧ್ಯ ಎಂದರು.