ಪೊಲೀಸ್ ಠಾಣೆ ಎದುರು ಬಾಣಂತಿ ಶವ ಇಟ್ಟು ಸಂಬಧಿಕರ ಪ್ರತಿಭಟನೆ

Advertisement

ಚಿಕ್ಕೋಡಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತ ಮಹಿಳೆಯ ಸಂಬಂಧಿಕರು ಮೃತದೇಹವನ್ನು ಪೊಲೀಸ್ ಠಾಣೆ ಎದುರು ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಸಂಕೇಶ್ವರ ಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಕಿರಣ ಟಿಕ್ಕೆ (೨೪) ಮೃತ ಮಹಿಳೆ. ಮೃತಳ ಸಂಬಂಧಿಕರ ಹೇಳಿಕೆ ಪ್ರಕಾರ, ಹುಕ್ಕೇರಿ ತಾಲೂಕಿನ ಕೋಣಕೇರಿ ಗ್ರಾಮದ ಈ ಮಹಿಳೆಗೆ ಕೆಲವು ದಿನಗಳ ಹಿಂದೆ ಹುಕ್ಕೇರಿ ತಾಲೂಕಿನ ನಿಡಸೋಸಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿ ಸಂತಾಣಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ ಮಹಿಳೆಯನ್ನು ಡಿಶ್ಚಾರ್ಜ್ ಮಾಡಲಾಗಿತ್ತು. ಮನೆಗೆ ಬಂದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದರು. ಸ್ಕ್ಯಾನ್ ರಿಪೋರ್ಟ್ ಪ್ರಕಾರ ಹೊಟ್ಟೆಯಲ್ಲಿನ ಸಮಸ್ಯೆಯಿಂದ ಮಹಿಳೆ ಮೃತಪಟ್ಟಿರುವುದು ದೃಢಪಟ್ಟಿತ್ತು.
ಮಹಿಳೆ ಸಾವಿನ ಬಳಿಕ ಸಂಬಂಧಿಕರು ಅಂಬುಲೆನ್ಸ್ ಮೂಲಕ ಶವದೊಂದಿಗೆ ಸಂಕೇಶ್ವರ ಪೊಲೀಸ್ ಠಾಣೆಗೆ ಬಂದು ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ಸಂತಾಣಹರಣ ಶಸ್ತ್ರಚಿಕಿತ್ಸೆ ವೇಳೆ ನಿಡಸೋಸಿ ಸರಕಾರಿ ಆಸ್ಪತ್ರೆಯ ವೈದ್ಯರು ತೋರಿದ ನಿರ್ಲಕ್ಷ್ಯವೇ ಕಾರಣ. ಸಂಬಂಧಿಸಿದ ವೈದ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಂಕೇಶ್ವರ ಪೊಲೀಸರು ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಸಿದ್ದು, ವರದಿಯ ನಂತರ ಬಾಣಂತಿ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.