ಗುಡಿಸಲು ವಾಸಿಗಳಿಗೆ ಎಲ್ಲಿ ಆವಾಸ್?

Advertisement

ಒಂದು ವಾರದ ಮಳೆ ಕರ್ನಾಟಕದ ಹತ್ತಾರು ಯೋಜನೆಗಳ ಅವಾಂತರವನ್ನು ಮತ್ತು ಭ್ರಷ್ಟ ಸ್ಥಿತಿಯನ್ನು ಬೆತ್ತಲುಗೊಳಿಸಿದೆ. ಮನೆ ಕಳೆದುಕೊಂಡು ನಿರ್ಗತಿಕರಾದ ಸಂತ್ರಸ್ತಗೊಂಡವರು ಮನೆಗಳನ್ನು ಮುಚ್ಚಿಕೊಂಡಿದ್ದು ಅಡಕೆ ಸೋಗೆ, ಊರ ಹೆಂಚು, ಮಣ್ಣಿನ ನೆಲ, ಮಣ್ಣು ಗೋಡೆಯಿಂದಷ್ಟೇ!. ಅದೇ ಅವರಿಗೆ ಅರಮನೆ. ಅದೇ ಜಾಗದಲ್ಲಿ, ಅದೇ ಮನೆಯಲ್ಲಿ ಜನನವಾಗಿದೆ. ಮರಣವಾಗಿದೆ. ಹಬ್ಬ ಹರಿದಿನಗಳನ್ನು ಆಚರಿಸಿದ್ದಾರೆ. ಸೂತಕವನ್ನು ಕಂಡಿದ್ದಾರೆ.

ಬಿಳಿಮನೆ ಸಿದ್ದಾಪುರ ತಾಲ್ಲೂಕಿನ ಪುಟ್ಟ ಗ್ರಾಮ. ಮಹಾದೇವಿ ತಿಮ್ಮಾ ನಾಯ್ಕ ಬೂದಗಿತ್ತಿ ಎನ್ನುವವಳಿಗೆ ಮೊನ್ನೆ ಬಿದ್ದ ಭಾರಿ ಮಳೆ ಬದುಕನ್ನೇ ಕತ್ತಲೆಗೆ ನೂಕಿತು. ಪುಟ್ಟ ಗುಡಿಸಲು ನೆಲಸಮವಾಗಿತ್ತು.
ಕುಮಟಾ ತಾಲ್ಲೂಕಿನ ಬಾಡದ ದೇವಕಿ ವಿಷ್ಣು ಹಳ್ಳೇರ ಅವರದ್ದೂ ಅದೇ ಸ್ಥಿತಿ. ತಾನುಳಿದ ಮನೆಯ ಚಾವಣಿಯೇ ಹಾರಿ ಹೋಯಿತು. ಆಕಾಶವೇ ಬಾಯ್ದೆರೆದಿತ್ತು. ಅದೇ ಪಕ್ಕದ ಹುಬ್ಬನಗೇರಿಯ ಪಾರ್ವತಿ ವೆಂಕಟರಮಣ ನಾಯಕ, ಸಾಂತಗಲ್ಲಿನ ದೇವಿಕೃಷ್ಣ ಭಂಡಾರಿ ಅವರ ಗೋಳೂ ಅಷ್ಟೇ.
ತಡವಾಗಿ ಆರಂಭವಾದ ಮುಂಗಾರು ಒಂದು ವಾರವಷ್ಟೇ ಕರಾವಳಿ, ಮಲೆನಾಡು, ಬಯಲುನಾಡಿನಲ್ಲಿ ಆರ್ಭಟಿಸಿತ್ತು. ಹಾಗೆ ನೋಡಿದರೆ ಮಾಮೂಲಿ ಮಳೆಗಾಲ. ಕರಾವಳಿ ಭಾಗದಲ್ಲಿ ೮೫, ೯೦, ೧೫೦ ಮಿಲಿ ಮೀಟರ್ ಮಳೆ ಸಾಮಾನ್ಯ. ಇದೇ ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು ಭಾಗದಲ್ಲಿ ಬಿದ್ದಿದ್ದು ೨೦-೨೨ ಮಿಮೀ ಅಷ್ಟೇ. ಇಷ್ಟಕ್ಕೇ ಸೇತುವೆ- ರಸ್ತೆಗಳು ಕೊಚ್ಚಿ ಹೋದವು. ಸಾವಿರಾರು ಮನೆಗಳು ನೆಲಸಮಗೊಂಡವು. ಸಾವು ನೋವು ಸಂಭವಿಸಿದವು. ಕೇವಲ ಒಂದು ವಾರದ ಮಳೆಯಿಂದ ಕೃಷಿಕರೇನೋ ನಿಟ್ಟುಸಿರು ಬಿಟ್ಟರು. ಮಾಧ್ಯಮಗಳು ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿತೇನೋ ಎನ್ನುವಂತೆ ಉತ್ತರ ಭಾರತದ ಪ್ರವಾಹಕ್ಕೆ ತುಲನೆ ಮಾಡಿಕೊಂಡವು.
ವಾಸ್ತವವಾಗಿ ಈ ವರ್ಷದ ಮಳೆ ಬೆತ್ತಲಾಗಿಸಿದ್ದು ಸರ್ಕಾರಿ ಯೋಜನೆಗಳನ್ನು, ಪೊಳ್ಳು ಆಶ್ವಾಸನೆಗಳನ್ನು, ರಾಜಕೀಯ ನಾಯಕರ ನಾಟಕವನ್ನು, ಎಲ್ಲಕ್ಕಿಂತ ಹೆಚ್ಚಾಗಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು!
ನಿಜ. ಪ್ರಕೃತಿ ವಿಕೋಪ, ವಿಶೇಷವಾಗಿ, ಬರ ಮತ್ತು ಪ್ರವಾಹ, ಅನಾವೃಷ್ಟಿ ಮತ್ತು ಅತಿವೃಷ್ಟಿ ಇವು ಸಂಭವಿಸಿದಷ್ಟೂ ಅಧಿಕಾರಿಗಳು, ರಾಜಕಾರಣಿಗಳು ದುಂಡಗಾಗುತ್ತಾರೆ ಎನ್ನುವ ಆರೋಪ ಇಂದು ನಿನ್ನೆಯದ್ದಲ್ಲ. ಒಂದು ಅನಾವೃಷ್ಟಿ, ಅಥವಾ ಭಾರಿ ಮಳೆ, ಸಾವು ನೋವುಗಳು, ಈ ಸ್ಕೀಮ್ ರೂಪಿಸುವವರ ಮತ್ತು ಅನುಷ್ಠಾನಗೊಳಿಸುವವರ ಮುಖದಲ್ಲಿ ಎಂತಹ ಮಂದಹಾಸ ಮೂಡಿಸುತ್ತವೆಂದರೆ, ಜನ ಅಳುತ್ತಿದ್ದರೆ ಅವರ ಮೊಗದಲ್ಲಿ ಆನಂದಬಾಷ್ಪ ಸುರಿಯುತ್ತದೆನ್ನುವಷ್ಟು ಕ್ರೂರತನದ ಮಾತುಗಳೇ ಕೇಳಿ ಬರುತ್ತವೆ.
ಒಂದು ವಾರದ ಮಳೆ ಕರ್ನಾಟಕದ ಹತ್ತಾರು ಯೋಜನೆಗಳ ಅವಾಂತರವನ್ನು ಮತ್ತು ಭ್ರಷ್ಟ ಸ್ಥಿತಿಯನ್ನು ಬೆತ್ತಲುಗೊಳಿಸಿದೆ. ಮನೆ ಕಳೆದುಕೊಂಡು ನಿರ್ಗತಿಕರಾದ ಸಂತ್ರಸ್ತಗೊಂಡವರು ಮನೆಗಳನ್ನು ಮುಚ್ಚಿಕೊಂಡಿದ್ದು ಅಡಕೆ ಸೋಗೆ, ಊರ ಹೆಂಚು, ಮಣ್ಣಿನ ನೆಲ, ಮಣ್ಣು ಗೋಡೆಯಿಂದಷ್ಟೇ!. ಅದೇ ಅವರಿಗೆ ಅರಮನೆ. ಅದೇ ಜಾಗದಲ್ಲಿ, ಅದೇ ಮನೆಯಲ್ಲಿ ಜನನವಾಗಿದೆ. ಮರಣವಾಗಿದೆ. ಹಬ್ಬ ಹರಿದಿನಗಳನ್ನು ಆಚರಿಸಿದ್ದಾರೆ. ಸೂತಕವನ್ನು ಕಂಡಿದ್ದಾರೆ.
ವರ್ಷಕ್ಕೊಮ್ಮೆ ಸೋಗೆ ಬದಲಾಯಿಸುವುದು, ನಾಲ್ಕಾರು ವರ್ಷಕ್ಕೊಮ್ಮೆ ಮನೆಗೆ ಹಾಕಿದ್ದ ಗೆದ್ದಲು ತುಂಬಿದ ಕಟ್ಟಿಗೆ ಕೋಲುಗಳನ್ನು ತೆಗೆದು ಬೇರೆ ಗಳ ಜೋಡಿಸುವುದು, ಬಿರುಕುಗೊಂಡ ಗೋಡೆಗೆ ಮಣ್ಣಿನ ಲೇಪ ಬಳೆಯುವುದು, ಸಗಣಿಯಿಂದ ನೆಲ ಗುಡಿಸುವುದು ಇಷ್ಟು ಮನೆವಾರ್ತೆ! ನೂರಾರು ವರ್ಷಗಳಿಂದ ಬೆಳೆದ ಬದುಕಿದ ಜಾಗವಿದು ಅವರಿಗೆಲ್ಲ. ಒಂದು ಸುಸಜ್ಜಿತ ಮನೆ ಕಟ್ಟಿಸಿಕೊಳ್ಳುವ ಸ್ಥಿತಿ ಇಲ್ಲ. ಈಗ ಪ್ರಶ್ನೆ ಬಂದಿರುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಇಂಥವರೇಕೆ ಕಾಣುತ್ತಿಲ್ಲ ಎನ್ನುವುದು. ಸುಮಾರು ಹತ್ತು ವರ್ಷಗಳ ಹಿಂದೆ, ಕಳೆದೆರಡು ಚುನಾವಣೆಗಳಲ್ಲಿಯೂ (ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಎರಡಲ್ಲೂ) ರಾಜ್ಯ ಗುಡಿಸಲು ಮುಕ್ತವಾಗಲಿದೆ' ಎಂದು ಘೋಷಿಸಿದವರಿಗೆ ಇಂತಹವರ ಗುಡಿಸಲುಗಳು ಕಾಣಲೇ ಇಲ್ಲವೇ? ಇಲ್ಲಿಯ ಜನಪ್ರತಿನಿಧಿಗಳಿಗೆ ಈ ಮುಕರಿ, ಸಿದ್ಧಿ, ಹಳ್ಳೇರ, ದೇಶಭಂಡಾರಿಗಳ ಗುಡಿಸಲ ವಾಸ- ವಾಸ್ತವದ ಅರಿವಿಲ್ಲವೇ? ಏನಾದವು ಈ ಗುಡಿಸಲು ಮುಕ್ತ ರಾಜ್ಯ ಘೋಷಣೆಗಳು? ಅಂದರೆ, ಗುಡಿಸಲು ಇದೆ. ಅವರೆಲ್ಲ ಅದೇ ಗುಡಿಸಲಲ್ಲಿ ವಾಸವಾಗಿದ್ದಾರೆ. ಆದರೆ ಗುಡಿಸಲು ಮುಕ್ತ ಯೋಜನೆಯಲ್ಲಿ ಮಹಡಿ ಮನೆಗಳು ತಲೆ ಎತ್ತಿವೆ. ೨೦೧೮ರಲ್ಲಿ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಗುಡಿಸಲು ವಾಸಿಗಳ ಮತ್ತು ವಸತಿ ರಹಿತರ ಸಮೀಕ್ಷೆ ಕೈಗೊಂಡಾಗ ೧೮,೭೩,೦೪೮ ಅಂತಹ ಮಂದಿ ಇದ್ದಾರೆಂದು ಹೊರಹೊಮ್ಮಿತ್ತು. ಅದೇ ನಗರ ಪ್ರದೇಶದಲ್ಲೂ ಕೂಡ ೨,೯೬,೦೦೦ ಗುಡಿಸಲು ವಾಸಿಗಳು ಮತ್ತು ವಸತಿ ರಹಿತರಿದ್ದಾರೆಂಬುದು ಬೆಳಕಿಗೆ ಬಂದಿತ್ತು. ೨೦೧೨ರಿಂದ ೨೦೨೨ರ ಅಂತ್ಯದವರೆಗೆ ರಾಜ್ಯ ಸರ್ಕಾರ ೧೨.೫ ಲಕ್ಷ ಜನರಿಗೆ ವಸತಿ ಸೌಲಭ್ಯ ಕಲ್ಪಿಸಿದ್ದಾಗಿ ಹೇಳಿದೆ. ಹಾಗಿದ್ದರೆ ಯಾರು ಫಲಾನುಭವಿಗಳು? ಎಲ್ಲಿದ್ದಾರೆ ಅವರೆಲ್ಲ? ಗುಡಿಸಲು ಗಾಳಿ- ಮಳೆ ಚಳಿಯಲ್ಲಿ ವಾಸಿಸುತ್ತಿರುವರಿಗೆ, ನೊಂದು- ಬೆಂದವರಿಗೆ ಏಕೆ ಈ ಮನೆಗಳು ಸಿಕ್ಕಿಲ್ಲ? ಈ ದೇಶ- ರಾಜ್ಯದಲ್ಲಿ ಸರ್ಕಾರ ರೂಪಿಸಿದ ವಸತಿ ಯೋಜನೆಗಳಿಗೇನೂ ಕಮ್ಮಿಯಿಲ್ಲ. ಬಸವ ವಸತಿ ಯೋಜನೆ, ಅಂಬೇಡ್ಕರ್ ನಿವಾಸ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ, ಆಶ್ರಯ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಇನ್ನೂ ಏನೇನೋ...! ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಯೋಜನೆಗಳೂ ಸಾಕಷ್ಟು.. ಹತ್ತು ವರ್ಷ ಕಳೆದರೂ ಗುಡಿಸಲು ವಾಸ, ಮಳೆ ಬೆಂಕಿಯಿಂದ ಮುಕ್ತಿ ನೀಡುವ ಭದ್ರತೆಯನ್ನು ಒದಗಿಸಲಾಗಲಿಲ್ಲವೇ? ಹಿಂದಿನ ವಸತಿ ಸಚಿವ ವಿ.ಸೋಮಣ್ಣ ರಾಜ್ಯದಲ್ಲಿ ಗುಡಿಸಲು ಮುಕ್ತ ಉದ್ದೇಶದಿಂದ ಹತ್ತು ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ೨೦೨೧ರ ಜೂನ್ ತಿಂಗಳಲ್ಲಿ ಘೋಷಿಸಿದ್ದರು. ಹತ್ತು ಲಕ್ಷ ಮನೆ ಅನುಷ್ಠಾನಗೊಂಡಿದ್ದರೆ ಈ ಗುಡಿಸಲುಗಳು ಸದ್ಯ ಕಾಣಿಸುತ್ತಿರಲಿಲ್ಲ. ಇಂತಹ ಮಳೆಗಳಿಗೆ ಬಡಪಾಯಿಗಳ ಗುಡಿಸಲುಗಳು ನಾಶವಾಗುತ್ತಿರಲಿಲ್ಲ. ಆಶ್ಚರ್ಯವೆಂದರೆ ವರ್ಷ ವರ್ಷ ವಸತಿ ಯೋಜನೆಗಳಿಗಾಗಿ ಸಾವಿರಾರು ಕೋಟಿ ಘೋಷಣೆಯನ್ನು ಮಾಡುತ್ತಿರುವ ಸರ್ಕಾರ ಇದಕ್ಕೊಂದು ಪ್ರತ್ಯೇಕ ನಿಗಮ, ಮಂಡಳಿ, ಕಾರ್ಯಪಡೆ ಮಾಡಿಕೊಂಡಿದೆ. ಅಚ್ಚರಿ ವಿಷಯವೆಂದರೆ ಪ್ರಸಕ್ತ ಸಮೀಕ್ಷೆ ಕೂಡ ಐದು ವರ್ಷಗಳ ಹಿಂದಿನ ವಸತಿ ರಹಿತರ ಅಂಕಿಸಂಖ್ಯೆಯನ್ನೇ ಹೇಳುತ್ತದೆ! ವಾರದ ಹಿಂದಿನ ಮಳೆ ಬೆತ್ತಲುಗೊಳಿಸಿದ್ದು ಕೇವಲ ವಸತಿ ಯೋಜನೆಯನ್ನಷ್ಟೇ ಅಲ್ಲ. ಗ್ರಾಮೀಣ ರಸ್ತೆ, ಪ್ರಧಾನ ಮಂತ್ರಿ ಸಡಕ್ ಯೋಜನೆ, ಕುಡಿಯುವ ನೀರಿನಜಲಜೀವನ ಮಿಷನ್’ ಯೋಜನೆ, ಸೇತುವೆ, ರಸ್ತೆಗಳ ಕಳಪೆ ಗುಣಮಟ್ಟ, ಹೆದ್ದಾರಿ ನಿರ್ಮಾಣದ ಅವೈಜ್ಞಾನಿಕತೆ, ಒಳಚರಂಡಿ ವ್ಯವಸ್ಥೆ ಎಲ್ಲವನ್ನೂ…
ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಇರುವ ಆಸಕ್ತಿ'ಗೆ ಒಂದು ಉದಾಹರಣೆ ಎಂದರೆ ಆದರ್ಶ ಗ್ರಾಮ ಯೋಜನೆ. ಕರ್ನಾಟಕದ ಇಪ್ಪತ್ತೆಂಟು ಸಂಸದರು ಮತ್ತು ಸಂಸತ್ ಸದಸ್ಯರು ಒಂದು ಗ್ರಾಮವನ್ನು ದತ್ತು ಪಡೆದು ಮಾದರಿ ಗ್ರಾಮವಾಗಿಸುವ ಟಾಸ್ಕ್ಅನ್ನು ಸ್ವತಃ ಪ್ರಧಾನ ಮಂತ್ರಿ ನೀಡಿದ್ದರು. ಹಾಗೆ ನೋಡಿದರೆ ರಾಜ್ಯದಲ್ಲಿ ಈವರೆಗೆ ೧೯೦೦ ಗ್ರಾಮಗಳು ಸಕಲ ಸೌಲಭ್ಯಗಳನ್ನು ಹೊಂದಿದ ಮಾದರಿ ಗ್ರಾಮವಾಗಬೇಕಿದ್ದವು. ಪ್ರಧಾನಿ ಘೋಷಣೆ ಮಾಡಿದಾಗ (೨೦೧೪) ಸಂಸದರು ಖುಷಿಯಿಂದ ಉತ್ಸಾಹ ತೋರಿದರು. ಒಂದೆರಡು ಬಾರಿ ಅಧಿಕಾರಿಗಳ ಸಭೆ, ಯೋಜನೆಗಳ ರೂಪುರೇಷೆ ಚರ್ಚೆ, ಸಮಸ್ಯೆಗಳ ಆಲಿಕೆ ಎಲ್ಲವೂ ನಡೆದವು. ದಿನಕಳೆದಂತೆ ಆ ಗ್ರಾಮಗಳಿಗೆ ಸಂಸದರೂ ಬರಲಿಲ್ಲ. ಅಧಿಕಾರಿಗಳೂ ತಲೆ ಹಾಕಲಿಲ್ಲ. ಬಹುತೇಕ ಗ್ರಾಮಗಳ ಪ್ರವೇಶದಲ್ಲಿಇದು ಸಂಸದರ ಆದರ್ಶ ಗ್ರಾಮ’ ಎಂಬ ನಾಮಫಲಕ ಕೂಡಿಸಿದ್ದೇ ಭಾಗ್ಯ.
ಇತ್ತೀಚೆಗೆ ಸಂಸದರ ಆದರ್ಶ ಗ್ರಾಮ ಯೋಜನೆ ಅನುಷ್ಠಾನದ ಗುಣಮಟ್ಟ ಮತ್ತು ಕಾರ್ಯದ ಸಮೀಕ್ಷೆಯನ್ನು ಖಾಸಗಿ ಸಂಸ್ಥೆಯೊಂದು ನಡೆಸಿತು. ಒಂದು ನೂರು ಗ್ರಾಮಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಒಂದೇ ಗ್ರಾಮದ್ದಾಗಿತ್ತು. ಅದೂ ಉಡುಪಿ ತಾಲ್ಲೂಕಿನದ್ದು. ಇದಕ್ಕೂ ಎಂಬತ್ತೊಂದನೇ ಸ್ಥಾನ. ಬಿಟ್ಟರೆ ಪ್ರಧಾನ ಮಂತ್ರಿಗಳ ಆದೇಶವನ್ನು ಬಂಗಾರದ ಪಟ್ಟದಲ್ಲಿಟ್ಟು ಶಿರಸಾ ವಹಿಸುವ ರಾಜ್ಯದ ಬಿಜೆಪಿ ಸಂಸದರೂ ಕೂಡ ಪಿಎಂ ಕನಸು, ಆಶಯವನ್ನು ನುಚ್ಚು ನೂರು ಮಾಡಿದ ಕೀರ್ತಿಗೆ ಪಾತ್ರರಾದರು!
ಪರಿಣಾಮ ಏನಾಯಿತೆಂದರೆ, ಆ ಗ್ರಾಮಕ್ಕೆ ಏನೇ ಸೌಲಭ್ಯ ಕೊಡಬೇಕಿದ್ದರೂ ಕೂಡ ಅದು ಸಂಸದರ ಆದರ್ಶ ಗ್ರಾಮ, ಸಂಸದರು ಮಾಡುತ್ತಾರೆ ಬಿಡಿ'ಎಂಬ ಟಿಪ್ಪಣಿ ಹೊರಹೊಮ್ಮಲಾರಂಭಿಸಿತು. ಹೀಗಾಗಿ ಸಂಸದರೇ ಇಂತಹ ಗ್ರಾಮಗಳಿಗೆ ಕಂಟಕಪ್ರಾಯರಾಗಿದ್ದಾರೆ!. ಕೆಲ ಸಂಸದರಿಗೆ ತಾವು ಯಾವ ಗ್ರಾಮ ಆಯ್ಕೆ ಮಾಡಿಕೊಂಡಿದ್ದೇವೆಂಬ ನೆನಪೂ ಇರಲಿಕ್ಕಿಲ್ಲವೇನೋ. ಒಂದಿಬ್ಬರು ಉದ್ಘಾಟನೆಗೆ ಹೋಗಿದ್ದು ಬಿಟ್ಟರೆ ಅತ್ತ ತಲೆ ಹಾಕಿಯೇ ಇಲ್ಲ. ಇದೇ ಸ್ಥಿತಿ ಶಾಸಕರ ಮಾದರಿ ಶಾಲೆಗಳದ್ದೂ ಕೂಡ. ಈ ವರ್ಷದ ಮಳೆಯಲ್ಲಿ ಶಾಸಕರ ಮಾದರಿ ಶಾಲೆಗಳೇ ಕುಸಿದು ಬಿದ್ದು ಪಾಲಕರು ಮಕ್ಕಳನ್ನು ಕಳಿಸಲು ಹಿಂದೇಟು ಹಾಕುವಂತಾಯಿತು. ಕುಡಿಯುವ ನೀರಿನ ದುಸ್ಥಿತಿಯಂತೂ ಹೇಳುವುದೇ ಬೇಡ. ಈಗ ಕಲುಷಿತ ನೀರು ಕುಡಿದು ಎರಡೇ ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಜನ ಸತ್ತಿರುವ ದಾರುಣ ಸತ್ಯ ಕಣ್ಣ ಮುಂದಿದೆ. ಯೋಜನೆಗಳು, ಇವಕ್ಕಿರುವ ಹಣ ಎಲ್ಲ ಎಲ್ಲಿ ಹೋಗುತ್ತಿವೆ? ಜನಸಾಮಾನ್ಯರ ಅಂಬೋಣದಂತೆ ಕೇವಲ ಕಾಗದದಲ್ಲಿ ಖರ್ಚಾಗುತ್ತಿವೆಯೇ? ಹಿರಿಯ ಅಧಿಕಾರಿಯೊಬ್ಬರ ಬಳಿ ಈ ಸಂಬಂಧ ಪ್ರಶ್ನಿಸಿದಾಗ,ಘೋಷಣೆ, ಯೋಜನೆ, ಸಭೆ, ಗುತ್ತಿಗೆ ಇಲ್ಲಿಯವರೆಗೆ ತ್ವರಿತವಾಗಿ ನಡೆಯುತ್ತದೆ. ಮುಂದೆ ಅನುಷ್ಠಾನಗೊಂಡಿದೆ ಎಂದು ದಾಖಲೀಕರಣವಾಗುತ್ತದೆ’ ಎನ್ನುವ ಮಾತನ್ನು ಅತ್ತ ನೋವು, ಇತ್ತ ಬೇಸರದೊಂದಿಗೆ ಹೇಳಿದ್ದು ಅರ್ಥಪೂರ್ಣ.
ಮಳೆ ಒಂದು ವಾರ ಪರ್ಯಂತ ಸುರಿಯಿತು ಕೆಲವೆಡೆ. ಈಗ ಹಾನಿ ಲೆಕ್ಕಾಚಾರ ಮತ್ತು ಪರಿಹಾರದ ನೆಪದಲ್ಲಿ ಚುರುಕು ಓಡಾಟ. ೨೦೧೯ರಲ್ಲಿ ಬಿದ್ದ ಮನೆಗಳಿಗೇ ಇನ್ನೂ ಪರಿಹಾರ ಕೊಟ್ಟಿಲ್ಲ. ಮನೆ ಕಟ್ಟಿಕೊಳ್ಳಲು ನೆರವು ನೀಡಿಲ್ಲ. ಪ್ರವಾಹ ನಿಯಂತ್ರಣಕ್ಕಾಗಿ ಕೆರೆ ಕಟ್ಟೆಗಳನ್ನು ಸಜ್ಜುಗೊಳಿಸಿಲ್ಲ. ಸುಂದರ ಘೋಷಣೆಗಳು ಮತ್ತು ಭರವಸೆಗಳು ಮಾತ್ರ ಮುಂದುವರಿದಿವೆ. ಜನ ಇವನ್ನೇ ಕೇಳುತ್ತ ಬಾಳಬೇಕಾಗಿ ಬಂದಿದೆ. ಇದು ದುರಂತ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಗಡಿಬಿಡಿಯಲ್ಲಿರುವ ಸರ್ಕಾರಕ್ಕೆ ಗುಡಿಸಲು ನಿವಾಸಿಗಳ ಸ್ಥಿತಿ ಕಾಣಬೇಕಲ್ಲವೇ?