ದಾಟಬೇಕು ಸಂಸಾರ ನದಿ

Advertisement

ಕರ್ಮದ ಅಧೀನವಾಗಿ ಸಂಸಾರವೆಂಬ ವೈತರಣೀ ನದಿಯಲ್ಲಿ ನಾನು ಬಿದ್ದಿದ್ದೇನೆ. ಪುನಃ ಪುನಃ ಜನನ ಮರಣಗಳ ಆಘಾತಗಳಿಗೆ ತುತ್ತಾಗಿ ಭಯಪಡುತ್ತಿದ್ದೇನೆ. ನನ್ನ ಶರೀರದಲ್ಲಿ ಪ್ರೀತಿ, ಮತ್ತೊಬ್ಬರ ಶರೀರದಲ್ಲಿ ದ್ವೇಷ ಮಾಡುತ್ತಿದ್ದೇನೆ. ಸಂಸಾರ ನದಿಯನ್ನು ಹೇಗೆ ದಾಟಬೇಕೆಂಬುದೇ ನನಗೆ ತಿಳಿಯುತ್ತಿಲ್ಲ. ಹೀಗೆ ದುಃಖದ ಮಡುವಿನಲ್ಲಿ ಮುಳುಗಿದ ನನ್ನನ್ನು ಮೇಲೆ ಎಬ್ಬಿಸಿ ರಕ್ಷಿಸು. ಸಂಸಾರ ನದಿಯಿಂದ ದಾಟಿಸಿ ದಡ ಸೇರಿಸು, ಹೀಗೆ ಪ್ರಹ್ಲಾದನು ನರಸಿಂಹದೇವರನ್ನು ಪ್ರಾರ್ಥಿಸುತ್ತಾನೆ.
ಎಲ್ಲರಿಗೂ ಮೋಕ್ಷ ದೊರಕಲಿ: ಸಾಮಾನ್ಯವಾಗಿ ದೇವತೆಗಳು ತಮ್ಮನ್ನು ನಂಬಿದವರಿಗೆ ಮೋಕ್ಷವನ್ನು ಬಯಸುತ್ತಾರೆ. ತಮಗಾಗಿ ಏಕಾಂತದಲ್ಲಿ ಮೌನ ವ್ರತವನ್ನು ಆಚರಿಸುತ್ತಾರೆ. ಮತ್ತೊಬ್ಬರ ಮೋಕ್ಷ ಸಾಧನೆಯಲ್ಲಿ ಅವರಿಗೆ ನಿಷ್ಠ್ಠೆ ಇರುವುದಿಲ್ಲ. ಮುನಿಗಳಿಗೂ ಕೂಡ ಇದೇ ರೀತಿ, ಓ ನರಸಿಂಹನೇ, ನನ್ನನ್ನು ನಂಬಿದ ಅಸುರ ಬಾಲಕರನ್ನು ಬಿಟ್ಟು. ನಾನೊಬ್ಬನೇ ಮೋಕ್ಷವನ್ನು ಹೊಂದಲಾರೆ. ಸಂಸಾರದ ಗೊಂಡಾರಣ್ಯದಲ್ಲಿ ಸುತ್ತುತ್ತಿರುವ ಅವರಿಗೂ ಕೂಡ ಮೋಕ್ಷವನ್ನು ದಯಪಾಲಿಸು. ನೀನೊಬ್ಬನೇ ನಮಗೆ ಗತಿ. ನಿನ್ನನ್ನು ಬಿಟ್ಟು ಬೇರೆ ಯಾರೂ ಸಹ ನಮಗೆ ಗತಿಯಿಲ್ಲ. ಹೀಗೆ ಭಗವಂತನ ಬಳಿ ಪ್ರಾರ್ಥಿಸುತ್ತಾನೆ.
ಆರು ಸೇವೆಗಳು
ಪ್ರಹ್ಲಾದನು ನರಸಿಂಹದೇವನ ಬಳಿ ಹೀಗೆ ಪ್ರಾರ್ಥಿಸುತ್ತಾನೆ. ನರಸಿಂಹನೇ ನೀನೇ ಸರ್ವೋತ್ತಮ. ನಿನ್ನಲ್ಲಿ ನನ್ನ ಮನಸ್ಸು ನೆಲೆ ನಿಲ್ಲಬೇಕು. ನಿನ್ನ ದರ್ಶನದಲ್ಲಿ ಕಣ್ಣುಗಳು ಆಸಕ್ತವಾಗಬೇಕು. ನಾಲಿಗೆಯು ನಿರಂತರವಾಗಿ ನಿನ್ನನ್ನೇ ಸ್ತುತಿಸಬೇಕು. ಎನ್ನ ಕೈಗಳು ನಿನ್ನನ್ನೇ ಪೂಜಿಸಬೇಕು. ನಿನ್ನ ಕಿವಿಗಳು ನಿನ್ನ ಕಥೆಯನ್ನು ಕೇಳುವುದರಲ್ಲೇ ಆಸಕ್ತವಾಗಬೇಕು. ಕಾಲುಗಳು ನಿನ್ನ ಕ್ಷೇತ್ರಗಳತ್ತ ಸಾಗಬೇಕು. ಹೀಗೆ ಆರು ರೀತಿಯ ಸೇವೆಗಳನ್ನು ನಿರಂತರ ನಾನು ನಿನಗೆ ಮಾಡಬೇಕು. ಅದಕ್ಕಾಗಿ ಪರಮಭಕ್ತಿಯನ್ನು ನಿನ್ನ ಬಳಿ ಪ್ರಾರ್ಥಿಸುತ್ತೇನೆ. ಈ ಭಕ್ತಿಯೊಂದು ಬಿಟ್ಟು ನನಗೆ ಬೇರೇನೂ ಬೇಡ.