1.47 ಕೋಟಿ ರೂ. ಆಸ್ತಿ ಪತ್ತೆ: ದಂಪತಿ ಮನೆ, ಕಚೇರಿ ಮೇಲೆ ಲೋಕಾ ದಾಳಿ

Advertisement

ಚಿತ್ರದುರ್ಗ: ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರಾದ ಭಾರತಿ ಮತ್ತು ಇವರ ಪತಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಮಹೇಶ್ ಅವರ ಕಚೇರಿ ಹಾಗೂ ಮನೆ ಮೇಲೆ ಗುರುವಾರ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ೧ ಕೋಟಿ ೪೭ ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಆದಾಯಕ್ಕಿಂತ ಹೆಚ್ಚು ಸಂಪಾದನೆ ಮಾಡಿರುವ ಆರೋಪದ ಮೇರೆಗೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ, ಡಿವೈಎಸ್ಪಿ ಮೃತ್ಯುಂಜಯ್ಯ ನೇತೃತ್ವದದ ತಂಡ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಕಚೇರಿ, ಭಾರತಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಬಿಎಂಪಿ ಕಚೇರಿ, ದಾವಣಗೆರೆ ಜಯನಗರದ ಮನೆ ಮೇಲೆ ಬೆಳಿಗ್ಗೆಯೇ ದಾಳಿ ನಡೆಸಿದರು.
ಭಾರತಿ ೨೦೦೬ರಲ್ಲಿ ಕೆಲಸಕ್ಕೆ ಸೇರಿದ್ದು ಇವರ ಪತಿ ೨೦೧೭ರಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಹುದ್ದೆ ಪಡೆದಿದ್ದಾರೆ. ಇವರ ಒಟ್ಟು ಆದಾಯ 70 ಲಕ್ಷ ರೂಪಾಯಿ. ಈಗ ಪತ್ತೆಯಾಗಿರುವುದು ೧ ಕೋಟಿ ೪೭ ಲಕ್ಷ ಅಸಮಾತೋಲನಾ ಆಸ್ತಿ. ೮೫೦ ಗ್ರಾಂ ಚಿನ್ನಾಭರಣ, ೪೧೦ ಗ್ರಾಂ ಬೆಳ್ಳಿ ಆಭರಣ, ಬುಲೇರೋ, ಕಾರು, ಒಂದು ಸ್ಕೂಟಿ ಪತ್ತೆಯಾಗಿದೆ. ಹೊಳಲ್ಕೆರೆ ಹಾಗೂ ಇತರೆ ಕಡೆಗಳಲ್ಲಿ ಅಂದಾಜು ೧೨ ಎಕರೆ ತೋಟ, ಹೊಲ ಹೊಂದಿರುವ ಬಗ್ಗೆ ದಾಖಲೆ ದೊರಕಿದೆ. ಇನ್ನೂ ಮೂರು ಕಡೆಗಳಲ್ಲಿಯೂ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.