ಮೀಸಲಾತಿಗಾಗಿ ಮತ್ತೆ ಹೋರಾಟ

Advertisement

ಹುಬ್ಬಳ್ಳಿ: ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೇವೆ. ಇದೇ ತಿಂಗಳಿನಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರ ಇನ್ನೂ ನ್ಯಾಯಾಲಯದಲ್ಲಿದೆ. ೨ಎ ಹಾಗೂ ೨ಡಿ ಮೀಸಲಾತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಹೀಗಾಗಿ ಈ ಸರ್ಕಾರಕ್ಕೂ ನಾವು ಮನವಿ ಮಾಡಿದ್ದೇವೆ. ಬಜೆಟ್ ಅಧಿವೇಶನದ ನಂತರ ಸಭೆ ಕರೆದು ಪರಿಶೀಲನೆ ಮಾಡುವುದಾಗಿ ಸಿಎಂ ಹೇಳಿದ್ದರು. ಮೀಸಲಾತಿ ವಿಚಾರದಲ್ಲಿ ಸಮುದಾಯದಲ್ಲಿ ನಿರಾಸೆ ಮೂಡಿದೆ. ಹೀಗಾಗಿ ಕೂಡಲೇ ತಜ್ಞರ ಸಭೆ ಕರೆದು ಮೀಸಲಾತಿ ವಿಚಾರ ಇತ್ಯರ್ಥ ಮಾಡಬೇಕು ಎಂದರು. ಸಮುದಾಯದ ಜನತೆ ಮತ್ತೆ ಹೋರಾಟಕ್ಕೆ ಅಣಿಯಾಗಿದ್ದಾರೆ. ಮೀಸಲಾತಿ ವಿಚಾರದಲ್ಲಿ ಯಾವುದೇ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಮೀಸಲಾತಿ ವಿಚಾರದಲ್ಲಿ ನಮಗೆ ಇನ್ನೂ ಆದೇಶ ಪ್ರತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಶ್ರಾವಣ ಮಾಸದಲ್ಲಿ ಮತ್ತೇ ಹೋರಾಟ ನಡೆಸಲು ರೂಪುರೇಷೆ ಆರಂಭಿಸಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಷ್ಠಲಿಂಗ ಪೂಜೆ ಮಾಡುವ ಮೂಲಕ ಮತ್ತೆ ಹೋರಾಟ ಆರಂಭಿಸುತ್ತೇವೆ ಎಂದರು. ಪಂಚಮಸಾಲಿ ಸಮುದಾಯದ ಶಕ್ತಿ ಈಗಾಗಲೇ ತಿಳಿದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯ ನಿಮ್ಮ ಪಕ್ಷಕ್ಕೆ ಬೆಂಬಲ ನೀಡಿದೆ. ಆದ್ದರಿಂದ ಇದರ ಋಣವನ್ನ ತಿರಿಸುವ ಜವಾಬ್ದಾರಿ ಸರಕರದ ಮೇಲಿದೆ.ನಮ್ಮ ಸಮುದಾಯಕ್ಕೆ ಲೋಕಸಭಾ ಚುನಾವಣೆಯ ಮುನ್ನವೇ ಮೀಸಲಾತಿ ಘೋಷಣೆ ಮಾಡಬೇಕು ಎಂದರು. ೨ಎ ಮೀಸಲಾತಿ ಹೈಕೋರ್ಟ್ನಲ್ಲಿದೆ. ೨ಡಿ ಮೀಸಲಾತಿ ಸುಪ್ರೀಂಕೋರ್ಟ್ನಲ್ಲಿದೆ. ಈ ಎಲ್ಲವನ್ನೂ ಬಗೆಹರಿಸುವ ಶಕ್ತಿ ಸರ್ಕಾರಕ್ಕಿದೆ. ಆದ್ದರಿಂದ ಸರ್ಕಾರ ಮನಸ್ಸು ಮಾಡಿ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಒಂದು ವೇಳೆ ೨ ಎ ಮೀಸಲಾತಿ ನೀಡದೇ ಹೋದರೆ, ಎಲ್ಲ ಲಿಂಗಾಯತರನ್ನು ಓಬಿಸಿಗೆ ಆದರೂ ನೀಡಬೇಕು ಎಂದರು. ಸಿದ್ದರಾಮನವರ ಸರ್ಕಾರದಲ್ಲಿ ಪಂಚಮಸಾಲಿ ಸಮುದಾಯದ ೧೨ ಜನ ಶಾಸಕರಿದ್ದಾರೆ. ೧೨ ರಲ್ಲಿ ೫-೬ ಜನರಿಗೆ ಸಚಿವ ಸ್ಥಾನ ನೀಡಬೇಕೆಂದು ನಾವು ಮನವಿ ಮಾಡಿದ್ದೇವು. ಆದರೆ ಲಕ್ಷ್ಮೀ ಹೆಬ್ಬಾಳ್ಕರ ಮತ್ತು ಶಿವಾನಂದ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿದೆ. ಮುಂದಿನ ದಿನಗಳಲ್ಲಿ ಶಾಸಕರಾದ ವಿನಯ್ ಕುಲಕರ್ಣಿಗೆ ಮತ್ತು ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಸ್ವಾಮೀಜಿ ಒತ್ತಾಯಿಸಿದರು.