ಅಮೆರಿಕದ ಕಂಪನಿಗಳ ಹೂಡಿಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ವೇದಿಕೆ ರಚನೆ

Advertisement

ಬೆಂಗಳೂರು: ಅಮೆರಿಕದ ಹತ್ತಾರು ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲು ವೇದಿಕೆಯೊಂದನ್ನು ರಚಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

ಭಾರತದಲ್ಲಿನ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಹೊಸ ಸರ್ಕಾರವು ಅಸ್ತಿತ್ವಕ್ಕೆ ಬಂದಮೇಲೆ ಕಳೆದ 2 ತಿಂಗಳ ಅವಧಿಯಲ್ಲಿ 40,000 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಗಳನ್ನು ಪಡೆದುಕೊಂಡಿದ್ದೇವೆ. 60,000 ಕೋಟಿ ರೂ.ಗಲಿಗೂ ಹೆಚ್ಚು ಹೂಡಿಕೆಯನ್ನು ಪಡೆದುಕೊಳ್ಳುವ ದೃಢ ವಿಶ್ವಾಸ ಹೊಂದಿದ್ದೇವೆ. ಅಮೆರಿಕ ಮೂಲದ IBC ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ‘ಹೂಡಿಕೆ’ಯಲ್ಲಿ ಭರವಸೆಯ ಹೆಜ್ಜೆಗಳನ್ನು ಇರಿಸುತ್ತಾ ಮುನ್ನಡೆಯುತ್ತಿದ್ದೇವೆ ಎಂದರು.

ರಾಜ್ಯದ ಕೈಗಾರಿಕಾ ನೀತಿಗಳು ಉತ್ತೇಜನಕಾರಿಯಾಗಿದ್ದು, ದೇಶದ ಬೇರಾವ ರಾಜ್ಯದಲ್ಲೂ ಇರದ ಅನುಕೂಲಗಳನ್ನು ನೀಡುತ್ತಿದ್ದೇವೆ. ರಾಜ್ಯದ ಎಲ್ಲ ಕೈಗಾರಿಕಾ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಪೂರಕವಾಗಿ ಕೈಗಾರಿಕಾ ನೀತಿ ಜಾರಿಗೆ ತರುವ ಕೆಲಸ ನಡೆಯುತ್ತಿದೆ. ಭೂಮಿ, ನೀರು ಮತ್ತು ವಿದ್ಯುತ್ ಸಮೃದ್ಧವಾಗಿರುವ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಉದ್ಯಮಿಗಳು ಹೂಡಿಕೆಗೆ ಮನಸ್ಸು ಮಾಡಬೇಕು. ಅದನ್ನು ನಾವು ಸಂಪೂರ್ಣ ಸ್ವಾಗತಿಸುತ್ತೇವೆ ಎಂದರು.