ಚಂದ್ರನಲ್ಲಿ ಭಾರತದ ಧ್ವಜ ವಿಸ್ತರಿಸಿದ ಬಾಹ್ಯಾಕಾಶ ಕ್ಷಿತಿಜ

Advertisement

ಚಂದ್ರಯಾನದ ಯಶಸ್ಸಿನ ಮೂಲಕ ಭಾರತ ತನ್ನದೇ ಆದ ಆರ್ಥಿಕ ವಲಯವನ್ನು ಚಂದ್ರನಲ್ಲಿ ಸ್ಥಾಪಿಸಲು ಅವಕಾಶ ಪಡೆದುಕೊಂಡಿದೆ. ಈಗಾಗಲೇ ಈ ಪೈಪೋಟಿಯಲ್ಲಿ ಅಮೆರಿಕ, ಚೀನಾ, ರಷ್ಯಾ, ಜಪಾನ್ ಇದೆ.

ಚಂದ್ರಯಾನ-೩ ಯಶಸ್ಸು ಕಂಡಿರುವುದು ಭಾರತದ ಹಿರಿಮೆಯನ್ನು ಹೆಚ್ಚಿಸಿರುವುದಲ್ಲದೆ ಯುವಕರಲ್ಲಿ ಬಾಹ್ಯಾಕಾಶ ಸಂಶೋಧನೆಯ ಕಡೆ ತಿರುಗುವಂತೆ ಮಾಡಿದೆ. ಇದುವರೆಗೆ ಬಾಹ್ಯಾಕಾಶ ಸಂಶೋಧನೆ ಕೇವಲ ಅಧ್ಯಯನಕ್ಕೆ ಮೀಸಲಾಗಿತ್ತು. ಈಗ ಇದು ಪ್ರತ್ಯೇಕ ತಂತ್ರಜ್ಞಾನವಾಗಿ ರೂಪುಗೊಂಡಿದೆ. ಇಸ್ರೋ ಸಂಸ್ಥೆ ಸರ್ಕಾರಿ ಒಡೆತನದಲ್ಲಿರುವುದರಿಂದ ಯುವಕರನ್ನು ಆಕರ್ಷಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಖಾಸಗಿ ಬಂಡವಾಳ ಅಧಿಕಗೊಂಡಂತೆ ಯುವಕರು ಈ ರಂಗದತ್ತ ದಾಪುಗಾಲು ಹಾಕುವುದರಲ್ಲಿ ಸಂದೇಹವಿಲ್ಲ.
ಚಂದ್ರಯಾನ-೨ ಕೊನೆಗಳಿಗೆಯಲ್ಲಿ ವಿಫಲವಾಯಿತು. ಆಗ ಪ್ರಧಾನಿ ಶ್ರೀಹರಿಕೋಟದಲ್ಲಿದ್ದು ವಿಜ್ಞಾನಿಗಳಿಗೆ ಸ್ಫ್ಪೂರ್ತಿ ತುಂಬಿದ್ದರು. ಆದರೂ ನಮ್ಮ ವಿಜ್ಞಾನಿಗಳು ಛಲ ಬಿಡದ ತ್ರಿವಿಕ್ರಮನಂತೆ ತಮ್ಮ ಗುರಿಯನ್ನು ತಲುಪಿರುವುದು ಶ್ಲಾಘನೀಯ. ಹಲವು ಕಷ್ಟ-ನಷ್ಟಗಳ ನಡುವೆ ವಿಜ್ಞಾನಿಗಳು ಎಲ್ಲ ಸವಾಲುಗಳನ್ನು ಎದುರಿಸಿ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿರುವುದನ್ನು ನೋಡಿದರೆ ಇತರರು ಇದೇ ರೀತಿ ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಗುರಿ ಮುಟ್ಟುವುದು ಕಷ್ಟವೇನಲ್ಲ.
ಮುಂಬರುವ ದಿನಗಳಲ್ಲಿ ಭಾರತದ ಬಾಹ್ಯಾಕಾಶ ಸಾಧನೆಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಅಧಿಕಗೊಳ್ಳಲಿದೆ. ನಮಗೇನು ಲಾಭ ಎಂದರೆ ಮುಂಬರುವ ದಿನಗಳಲ್ಲಿ ಚಂದ್ರನಲ್ಲಿ ನಮ್ಮದೇ ಆದ ಆರ್ಥಿಕ ವಲಯವನ್ನು ಪ್ರತಿಷ್ಠಾಪಿಸಲು ಸಾಧ್ಯವಾಗಲಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಬೇರೆ ದೇಶದವರು ತಮ್ಮ ಲ್ಯಾಂಡರ್ ಇಳಿಸಲು ಸಾಧ್ಯವಾಗಿಲ್ಲ. ನಮ್ಮ ಪ್ರಯತ್ನ ಈ ದೃಷ್ಟಿಯಿಂದ ಲಾಭದಾಯಕ. ಮುಂದಿನ ದಿನಗಳಲ್ಲಿ ಚಂದ್ರನಲ್ಲಿಗೆ ಹೋಗಲು ಜನ ಬಯಸುವುದು ಸಹಜ. ಆಗ ನಮ್ಮ ರಾಕೆಟ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಜಗತ್ತಿನ ವಿವಿಧ ದೇಶಗಳ ಜನರನ್ನು ಕರೆದುಕೊಂಡು ಹೋಗಿ ಚಂದ್ರನಲ್ಲಿರುವ ಜನವಸತಿ ಕೇಂದ್ರದಲ್ಲಿ ಇಳಿಸಬಹುದು. ಇದು ಸಾವಿರಾರು ಶತಕೋಟಿ ಡಾಲರ್‌ಗಳ ವ್ಯಾಪಾರ. ಈಗ ಈ ವ್ಯಾಪಾರದಲ್ಲಿ ಅಮೆರಿಕ, ಚೀನಾ ಜಪಾನ್ ಕಾಲಿರಿಸಿದೆ. ನಾವೂ ಈ ವ್ಯಾಪಾರಕ್ಕೆ ಕೈಹಾಕಬಹುದು. ಅದಕ್ಕೆ ಬೇಕಾದ ತಂತ್ರಜ್ಞಾನ ನಮ್ಮ ಬಳಿ ಇದೆ. ಕೇದಾರ-ಬದ್ರಿನಾಥ್‌ಗೆ ಪ್ಯಾಕೇಜ್ ಯಾತ್ರೆ ಇರುವ ಹಾಗೆ ಮುಂಬರುವ ದಿನಗಳಲ್ಲಿ ಚಂದ್ರನ ಯಾತ್ರೆ ಕೈಗೊಳ್ಳುವ ಶ್ರೀಮಂತರು ಕ್ಯೂ ನಿಲ್ಲುವುದರಲ್ಲಿ ಸಂದೇಹವಿಲ್ಲ. ಅಮೆರಿಕ ಈಗ ಚಂದ್ರನ ಆರ್ಥಿಕ ವ್ಯಾಪಾರದಲ್ಲಿ ಶೇಕಡ ೫೧ ರಷ್ಟು ಪಾಲುಗಾರಿಕೆ ಪಡೆದುಕೊಂಡಿದೆ. ಚೀನಾ ಮತ್ತು ಜಪಾನ್ ಶೇಕಡ ೩೧ ಪಾಲು ಹೊಂದಿದೆ. ಭಾರತ ಮತ್ತು ಯೂರೋಪ್ ದೇಶಗಳು ಶೇ೧೮ ರಷ್ಟು ಪಾಲುಗಾರಿಕೆ ಪಡೆಯಲು ಅವಕಾಶಗಳಿವೆ. ಅಮೆರಿಕ ಒಟ್ಟು ೬೩೪ ಶತಕೋಟಿ ಡಾಲರ್ ವ್ಯಾಪಾರ ಹೊಂದಿದೆ ಎಂದ ಮೇಲೆ ಚಂದ್ರನ ಮಾರುಕಟ್ಟೆ ಎಷ್ಟು ದೊಡ್ಡದು ಎಂಬುದು ತಿಳಿಯುತ್ತದೆ.
ಚಂದ್ರನ ಮೇಲೆ ನಮಗೆ ಬೇಕಾದ ಎಲ್ಲ ಸಮೂಹ ಸಂಪರ್ಕ ಸಾಧನಗಳನ್ನು ಪ್ರತಿಷ್ಠಾಪಿಸಿ ಅದರ ಮೂಲಕ ಹವಾಮಾನ ವೈಪರೀತ್ಯದಿಂದ ಹಿಡಿದು ಹಲವು ವಿಷಯಗಳ ಮೇಲೆ ಅಧ್ಯಯನಗಳನ್ನು ಕೈಗೊಳ್ಳಬಹುದು. ಅಲ್ಲದೆ ಚಂದ್ರನ ಮೇಲಿನ ಆರ್ಥಿಕ ಚಟುವಟಿಕೆಯಿಂದ ೩೭ ಸಾವಿರ ಜನರಿಗೆ ಉದ್ಯೋಗ ಸಿಗುವ ಅವಕಾಶಗಳಿವೆ ಎಂದು ಅಂದಾಜು ಮಾಡಲಾಗಿದೆ. ರಾಕೆಟ್ ಉಡಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನಿಗಳು ಮತ್ತು ತಂತ್ರಜ್ಞರು ಅಗತ್ಯ. ಮಾನವ ಸಂಪನ್ಮೂಲವನ್ನು ಒದಗಿಸುವ ಪ್ರಮುಖ ಕೇಂದ್ರ ಭಾರತ ಆಗಲಿದೆ. ಏಕೆಂದರೆ ಜಗತ್ತಿನಲ್ಲಿ ಅತಿ ಹೆಚ್ಚು ಯುವ ಜನಾಂಗ ಇರುವುದು ಭಾರತದಲ್ಲಿ ಮಾತ್ರ. ಪರಿಸರ ರಕ್ಷಣೆ ಈಗ ಪ್ರಮುಖ ಸಮಸ್ಯೆ. ಅದಕ್ಕೆ ಚಂದ್ರನ ಮೇಲೆ ಸ್ಥಾಪಿಸುವ ಪ್ರಯೋಗಾಲಯ ಪ್ರಮುಖ ಕೇಂದ್ರವಾಗಲಿದೆ. ಈ ರಂಗದಲ್ಲೂ ಹೆಚ್ಚು ಸಂಪಾದನೆ ಸಾಧ್ಯ ಎಂದು ಗೊತ್ತಾದರೆ ಯುವಕರು ಸಾಲುಗಟ್ಟಿ ಬರುತ್ತಾರೆ. ಈಗ ಕಂಪ್ಯೂಟರ್ ವಿಜ್ಞಾನ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆ. ಸೈಬರ್ ಅಪರಾಧ, ಡಾಟಾ ವಿಶ್ಲೇಷಣೆ ಅಧ್ಯಯನ ಮಹತ್ವ ಪಡೆಯುತ್ತಿದೆ. ಅದೇರೀತಿ ಬಾಹ್ಯಾಕಾಶ ಸಂಶೋಧನೆಯೂ ಯುವ ಪೀಳಿಗೆಯನ್ನು ಆಕರ್ಷಿಸುವ ಕಾಲ ಬರಲಿದೆ. ಸಾಗರದ ಅಂತರಾಳದಲ್ಲಿ ಈಗ ಸಂಶೋಧನೆ ನಡೆಯುತ್ತಿರುವ ಹಾಗೆ ಬಾಹ್ಯಾಕಾಶ ಕೇಂದ್ರಗಳಲ್ಲಿ ಪ್ರಯೋಗಾಲಯಗಳು ಸ್ಥಾಪನೆಗೊಳ್ಳುವ ಕಾಲ ದೂರವಿಲ್ಲ.