ನಿಯಮ ಉಲ್ಲಂಘಿಸಿದ ಕ್ಲಬ್ ಪರವಾನಗಿ ರದ್ದು

ರಿಕ್ರಿಯೇಷನ್ ಕ್ಲಬ್‌
Advertisement

ಕೊಪ್ಪಳ: ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡಿಸುತ್ತಿದ್ದ ನವಯುಗ ಸ್ಪೋರ್ಟ್ಸ್‌ ಮತ್ತು ರಿಕ್ರಿಯೇಷನ್ ಕ್ಲಬ್‌ನ ಪರವಾನಗಿಯನ್ನು ಜಿಲ್ಲಾಧಿಕಾರಿ ಸುಂದರೇಶ ಬಾಬು ರದ್ದುಗೊಳಿಸಿದ್ದಾರೆ.
ಗದಗ ರಸ್ತೆಯ ಶಿಲ್ಪಾ ಗ್ರಾಂಡ್ ಹೊಟೇಲ್ ಹಿಂಭಾಗದಲ್ಲಿರುವ ಅಷ್ಟಾಗಿ ಜನಕ್ಕೆ ಕಾಣದ ತಗಡಿನ ಶೆಡ್‌ಗಳ ಈ ಕ್ಲಬ್‌ನಲ್ಲಿ ಇಸ್ಪೀಟ್ ಎಲೆ ತಟ್ಟುವ ಕೆಲಸ ಜೋರಾಗಿತ್ತು. ನಗರ ಅಷ್ಟೇ ಅಲ್ಲ ಅಕ್ಕಪಕ್ಕದ ತಾಲೂಕುಗಳಲ್ಲೂ ನವಯುಗ ಕ್ಲಬ್ ಹೆಸರಾಗಿತ್ತು. ಇದೇ ವರ್ಷ ಜೂನ್ 24ರಂದು ರಾತ್ರಿ ನವಯುಗ ಕ್ಲಬ್‌ನಲ್ಲಿ 13 ಜನ ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ನಗರ ಠಾಣೆ ಪೊಲೀಸರು ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದರು.
ದಾಳಿ ಸಂದರ್ಭದಲ್ಲಿ 13 ಜನ ಸೇರಿದಂತೆ 20 ಬೈಕ್, 1 ಕಾರ್, 59 ಸಾವಿರ ರೂಪಾಯಿ ವಶಕ್ಕೆ ಪಡೆದಿದ್ದರು. ನಿಯಮ ಉಲ್ಲಂಘಿಸಿದ ಬಗ್ಗೆ ಉಲ್ಲೇಖಿಸಿ, ಪೊಲೀಸ್ ಇಲಾಖೆ ನವಯುಗ ಕ್ಲಬ್ ಪರವಾನಗಿ ರದ್ದುಗೊಳಿಸಲು ಜುಲೈ 4ರಂದು ಪ್ರಸ್ತಾವನೆ ಸಲ್ಲಿಸಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ, ಕ್ಲಬ್ ಪರವಾನಗಿ ರದ್ದುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. 2022ರ ಮಾರ್ಚ್‌ 19ರಂದು ಅನುಮತಿ ಪಡೆದಿದ್ದ ಈ ಕ್ಲಬ್ ಆರೇ ತಿಂಗಳಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.