ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ಪಕ್ಷಾತೀತವಾಗಿರಲಿ

Advertisement

ರಬಕವಿ-ಬನಹಟ್ಟಿ: ಇದೇ 30ರಂದು ಜರುಗಲಿರುವ ಗೃಹಲಕ್ಷ್ಮೀ ಯೋಜನೆಯ ಚಾಲನಾ ಕಾರ್ಯಕ್ರಮವು ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದ್ದು, ಪಕ್ಷಾತೀತವಾಗಿ ಸರ್ಕಾರಿ ಕಾರ್ಯಕ್ರಮವಾಗಲಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ನಗರಸಭೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಮೊದಲು ಶಕ್ತಿ ಯೋಜನೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪರ-ವಿರೋಧಗಳ ಘೋಷಣೆಗಳನ್ನು ಕೂಗುತ್ತ ಪೊಲೀಸರ ಅಶಿಸ್ತು ಎದ್ದು ಕಾಣುತ್ತಿತ್ತು. ಈ ಸಭೆಗೂ ಪೊಲೀಸರ ಗೈರು ಹಾಜರಿ ಮತ್ತದೇ ಪ್ರಸಂಗ ಮುಂದುವರೆಯುವಲ್ಲಿ ಕಾರಣವಾಗಲಿದೆ. ಹಾಗಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಪಕ್ಷದ ಧ್ವಜ ಹಾರಾಡುವುದು, ರಾಜಕೀಯ ಪಕ್ಷಗಳ ಜಯಘೋಷ ನಡೆಯದಂತೆ ನೋಡಿಕೊಳ್ಳಬೇಕು. ತಮಗೆ ಸಾಧ್ಯವಾಗದಿದ್ದರೆ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದೆಯೇ ಕಾರ್ಯಕ್ರಮ ನಡೆಸಿದರೂ ಒಳಿತೆಂದು ಸವದಿ ಗರಂ ಆದರು.
ಎಷ್ಟು ಬಾಗುತ್ತೀರಾ..?:
ಅವರೇನು ಜನಪ್ರತಿನಿಧಿಗಳೆ, ಯಾರು ಬೇಕಾದರೂ ಕರೆದರೆ ಸಭೆಗೆ ಹೋಗುವುದು, ಅದೂ ಸರ್ಕಾರಿ ಪ್ರದೇಶದಲ್ಲಿ ಜನಪ್ರತಿನಿಧಿಗಳನ್ನು ಬಿಟ್ಟು ಸಭೆ ನಡೆಸುವುದು ಎಷ್ಟು ಸೂಕ್ತ? ಅಧಿಕಾರಿಗಳೇ ನಿಮಗೂ ಕನಿಷ್ಠ ಸ್ವಾಭಿಮಾನವಿದೆ. ಎಷ್ಟು ಬಾಗಿ ನಡೆಯುತ್ತೀರಾ? ಎಂದು ಪರೋಕ್ಷವಾಗಿ ರವಿವಾರ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರರ ಸಭೆಗೆ ಶಾಸಕ ಸವದಿ ಕೆಂಡಾಮಂಡಲವಾದರು.
ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೧೭ ಗ್ರಾಮ ಪಂಚಾಯಿತಿಗಳಲಲಿ ತಲಾ ೧ ಪ್ರದೇಶದಲ್ಲಿ, ತೇರದಾಳ ಹಾಗು ಮಹಾಲಿಂಗಪುರ ಪುರಸಭೆ ವ್ಯಾಪ್ತಿಯ ೩ ಕಡೆ ಹಾಗು ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ೫ ಪ್ರದೇಶಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರಕಲಿದೆ.
ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಶಾಸಕ ಸಿದ್ದು ಸವದಿಯವರ ಅಧ್ಯಕ್ಷತೆಯಲ್ಲಿ ಯೋಜನೆಗೆ ಚಾಲನೆ ದೊರಕಲಿದೆ. ಆಯಾ ಪ್ರದೇಶಗಳ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಆಯಾ ಭಾಗಗಳಲ್ಲಿ ನಡೆಯಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ತಿಳಿಸಿದರು.
ಪೌರಾಯುಕ್ತ ಜಗದೀಶ ಈಟಿ ಮಾತನಾಡಿ, ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ೨೦ ಸಾವಿರ ಫಲಾನುಭವಿಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವಾಗಿದ್ದು, ಎಲ್ಲರೂ ಭಾಗವಹಿಸಬೇಕೆಂದರು.
ತಹಶೀಲ್ದಾರ್ ಎಸ್.ಬಿ. ಕಾಂಬಳೆ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.