ಸಾವಿನಲ್ಲೂ ಸಾರ್ಥಕತೆ

ಯಶರಾಜ್
Advertisement

ಮಂಗಳೂರು: ಸಿಟಿ ಬಸ್ಸಿಂದ ಎಸೆಯಲ್ಪಟ್ಟು ಒಂದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಪಿಯುಸಿ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದು, ಶೋಕದ ನಡುವೆಯೂ ಕುಟುಂಬ ವರ್ಗದವರು ವಿದ್ಯಾರ್ಥಿಯ ಅಂಗಾಂಗ ದಾನಗೈದಿದ್ದು ಸಾವಿನಲ್ಲೂ ವಿದ್ಯಾರ್ಥಿ ಸಾರ್ಥಕತೆ ಮೆರೆದಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆ, ಬೈದರಪಾಲು ನಿವಾಸಿಗಳಾದ ತ್ಯಾಗರಾಜ್ – ಮಮತಾ ಕರ್ಕೇರ ದಂಪತಿಯ ಪ್ರಥಮ ಪುತ್ರ ಯಶರಾಜ್(16) ಮೃತ ವಿದ್ಯಾರ್ಥಿ. ಯಶರಾಜ್ ನಗರದ ಎಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದ. ಸೆ. 7ರಂದು ಬೆಳಗ್ಗೆ ಯಶರಾಜ್ ಉಳ್ಳಾಲ, ಮಾಸ್ತಿಕಟ್ಟೆಯಿಂದ ಸಿಟಿ ಬಸ್‌ನಲ್ಲಿ ಕಾಲೇಜಿಗೆ ಪಯಣಿಸುತ್ತಿದ್ದಾಗ ರಾ.ಹೆ. 66ರ ಅಡಂ ಕುದ್ರುವಿನಲ್ಲಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದ. ತಲೆಗೆ ಗಂಭೀರ ಗಾಯಗೊಂಡಿದ್ದ ಯಶರಾಜನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವಾರದಿಂದ ನಿರಂತರ ಚಿಕಿತ್ಸೆ ನೀಡುತ್ತಿದ್ದರೂ ಯಶರಾಜ್ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಂದು ಮಧ್ಯಾಹ್ನ ಮೆದುಳು ನಿಷ್ಕ್ರಿಯಗೊಂಡಿದೆ. ಮುದ್ದಿನ ಹಾಲುಗೆನ್ನೆಯ ಮಗನ ಮಡುಗಟ್ಟಿದ ಸಾವಿನ ಶೋಕದ ನಡುವೆಯೂ ಕುಟುಂಬ ವರ್ಗದವರು ಯಶರಾಜ್ ಅಂಗಾಂಗ ದಾನಗೈದು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮೃತ ಯಶರಾಜ್ ತಾಯಿ, ತಂದೆ, ತಂಗಿಯನ್ನು ಅಗಲಿದ್ದಾರೆ. ತಂದೆ ತ್ಯಾಗರಾಜ್ ಹೊಟೇಲ್ ಮಾಲೀಕರಾಗಿದ್ದು, ತಾಯಿ ಮಮತಾ ಕೊಲ್ಯದ ಜಾಯ್ ಲ್ಯಾಂಡ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.