ಆಗಸ್ಟ್‌ ತಿಂಗಳ ವರ್ಕ್‌ ರಿಪೋರ್ಟ್‌ ಬಿಡುಗಡೆ ಮಾಡಿದ ಪ್ರಿಯಾಂಕ್

Advertisement

ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳನ್ನು ಪೂರೈಸಿದ್ದು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ ಆಗಸ್ಟ್‌ ತಿಂಗಳ ವರ್ಕ್ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ.

ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ಜನರಿಗೆ ಹೆಚ್ಚೆಚ್ಚು ಉತ್ತರದಾಯಿಯಾಗಲು ಎರಡು ವರ್ಕ್ ರಿಪೋರ್ಟ್ ಬಿಡುಗಡೆಗೊಳಿಸಿದ್ದ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಗಸ್ಟ್ ವರ್ಕ್ ರಿಪೋರ್ಟ್‌ ಬಿಡುಗಡೆ ಮಾಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಐಟಿಬಿಟಿ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕಳೆದು ಎರಡು ತಿಂಗಳಲ್ಲಿ ಮಾಡಿದ್ದ ಎಲ್ಲಾ ಕೆಲಸಗಳನ್ನು ಒಳಗೊಂಡ ವರ್ಕ್ ರಿಪೋರ್ಟ್‌ನ್ನು ರಾಜ್ಯದ ಜನತೆಯ ಮುಂದಿಟ್ಟಿದ್ದೆ. ಇದೀಗ ಆಗಸ್ಟ್ ತಿಂಗಳ ವರ್ಕ್ ರಿಪೋರ್ಟ್ ಬಿಡುಗಡೆ ಮಾಡುತ್ತಿದ್ದೇನೆ. ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಜೊತೆಗೆ ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಾದ ಗೃಹಜ್ಯೋತಿ ಯೋಜನೆಗೆ ನಮ್ಮ ಕಲಬುರಗಿಯಲ್ಲಿ ಚಾಲನೆ ನೀಡಿದ್ದು ಹಾಗೂ ಕಲಬುರ್ಗಿ ಜಿಲ್ಲೆಯ ಜನರಿಗೆ ಪಾರದರ್ಶಕ ಪೊಲೀಸ್ ವ್ಯವಸ್ಥೆ ಕಲ್ಪಿಸುವ ಮೊದಲ ಹೆಜ್ಜೆಯಾಗಿ ಜನಸ್ನೇಹಿ ಪೊಲೀಸ್ ಅಭಿಯಾನ ಮತ್ತು ಕಲಬುರಗಿ ಕನೆಕ್ಟ್ QR ಕೋಡ್ ಆಧಾರಿತ ಅಭಿಯಾನವನ್ನು ಪ್ರಾರಂಭಿಸಿ ಜನಪರ ಆಡಳಿತ ನೀಡುವ ನಮ್ಮ ಚುನಾವಣಾ ಪೂರ್ವ ಭರವಸೆಯನ್ನು ನುಡಿದಂತೆ ನಡೆಯುವಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದೆ. ಈ ತಿಂಗಳು ನಮ್ಮ ರಾಜ್ಯದ ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆಯೂ ಜಾರಿಯಾಗಿದೆ. ಸುಭದ್ರವಾಗಿ, ಪಾರದರ್ಶಕವಾಗಿ ಜನಪರ ಕಾರ್ಯಗಳನ್ನು ಮಾಡುತ್ತಾ ನಮ್ಮ ಸರ್ಕಾರ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ನಿಮ್ಮ ಸಲಹೆ, ಸಹನೆ ಹಾಗೂ ಸಹಕಾರ ಪ್ರಬುದ್ಧ ಕರ್ನಾಟಕ ನಿರ್ಮಿಸುವ ನಮ್ಮ ಪ್ರಯತ್ನಕ್ಕೆ ದೊಡ್ಡ ಪ್ರೇರಕ ಶಕ್ತಿಯಾಗಿದೆ ಎಂದಿದ್ದಾರೆ.