100ದಿನಗಳ ಯಶಸ್ವೀ ಪಯಣ: ಭವಿಷ್ಯದ ಮುನ್ನೋಟ

Advertisement

ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳನ್ನು ಪೂರೈಸಿದ್ದು, ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಈ 100ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 60,000 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ ಎಂದಿದ್ದಾರೆ. ನೂತನ ಸರ್ಕಾರ ಮೊದಲ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಇಂದು ಇಲಾಖೆಯ ಸಾಧನೆಗಳ ಕುರಿತಂತೆ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು 100ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 60,000 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದ ಆಗಿದ್ದು, 30,000 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. 20ಕ್ಕೂ ಹೆಚ್ಚು ಸಾಂಭಾವ್ಯ ಹೂಡಿಕೆದಾರರ ಜತೆ ಮಾತುಕತೆ ನಡೆಯುತ್ತಿದ್ದು, ಇದು ಸಫಲವಾದರೆ ರಾಜ್ಯಕ್ಕೆ 1,00,000 ಕೋಟಿ ರೂಪಾಯಿ ಬಂಡವಾಳ ಹರಿದು ಬರಲಿದೆ. ಸಿಂಗಾಪುರ ಮತ್ತು ಸೌದಿ ಅರೇಬಿಯಾದಂತಹ ಜಾಗತಿಕ ಹೂಡಿಕೆ ಕೇಂದ್ರಗಳಿಗೆ ಪ್ರತಿಸ್ಪರ್ಧಿಯಾಗಿ ಕರ್ನಾಟಕದ ಹೂಡಿಕೆ ಉತ್ತೇಜನಾ ಸಂಸ್ಥೆ (ಐಪಿಎ)ಗೆ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ಹೊಸ ಕೈಗಾರಿಕಾ ನೀತಿ ರಚಿಸಲು ನಮ್ಮ ಸರ್ಕಾರ ಮುಂದಾಗಿದ್ದು, ಎಲೆಕ್ಟ್ರಿಕ್ ವೆಹಿಕಲ್ ಮತ್ತು ವೇರ್‌ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಈಗಾಗಲೇ ಕರಡು ರೂಪುಗೊಂಡಿವೆ. ಬೆಂಗಳೂರು ಸಮೀಪ 2000 ಎಕರೆ ಪ್ರದೇಶದಲ್ಲಿ ‘ನಾಲೆಡ್ಜ್‌ -ಹೆಲ್ತ್‌- ಇನ್ನೋವೇಶನ್ ಅಂಡ್ ರಿಸರ್ಜ್ ಸಿಟಿ’ ಸ್ಥಾಪಿಸುವ ಉದ್ದೇಶವಿದೆ. ಇಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯ, ಆಸ್ಪತ್ರೆ, ಸಂಶೋಧನಾ ಕೇಂದ್ರಗಳಿರಲಿವೆ. ಈ ಯೋಜನೆ ಬೆಂಗಳೂರಿನ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಮತ್ತಷ್ಟು ಬೆಳಗಲಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜಿಸಲು 9 ಆದ್ಯತಾ ವಲಯಗಳಲ್ಲಿ ‘ವಿಷನ್ ಗ್ರೂಪ್’ ರಚಿಸುತ್ತೇವೆ.
ಏಷ್ಯಾದಲ್ಲಿ ಕರ್ನಾಟಕವನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು ನಮ್ಮ ಸರ್ಕಾರದ ಗುರಿ. ಪೂರಕವಾಗಿ ಪರಿಷ್ಕೃತ ಕೈಗಾರಿಕಾ ನೀತಿ, ವಿಶ್ವ ದರ್ಜೆಯ ಮೂಲಸೌಕರ್ಯ, ಡಿಜಿಟಲ್ ಸೇವಾ ವಿತರಣೆ, ನವೀನ ತಂತ್ರಜ್ಞಾನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳು ಭರದಿಂದ ಸಾಗಿದ್ದು, ಈ ನಿಲ್ದಾಣವನ್ನು 2024ರ ಏಪ್ರಿಲ್ ವೇಳೆಗೆ ಉದ್ಘಾಟನೆ ಮಾಡಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಈ ವರ್ಷದ ಬಜೆಟ್ ನ್ಲಲಿ ವಿಜಯಪುರಕ್ಕೆ ಉತ್ಪಾದನೆ ಆಧರಿತ ಕೈಗಾರಿಕಾ ಕ್ಲಸ್ಟರ್ ಘೋಷಿಸಲಾಗಿದೆ. ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳಿಗೆ ಈಗಿನ ಅಗತ್ಯಕ್ಕೆ ತಕ್ಕಂತೆ ‘ನಗರ ಕುಡಿಯುವ ನೀರು ಯೋಜನೆ’ಯನ್ನು ಮಂಜೂರು ಮಾಡಿಸಲಾಗಿದೆ ಎಂದಿದ್ದಾರೆ.