ಗುರು ರಾಯರ ಮಧ್ಯಾರಾಧನೆ ಸಂಪನ್ನ

Advertisement

ಹುಬ್ಬಳ್ಳಿ: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಮಧ್ಯಾರಾಧನೆ ವೈಭವದಿಂದ ನೆರವೇರಿತು.
ಮಧ್ಯಾರಾಧನೆ ಪ್ರಯುಕ್ತ ನಗರದ ವಿವಿಧ ರಾಯರ ಮಠದಲ್ಲಿ, ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ಅರ್ಚನೆ, ಕನಕಾಭಿಷೇಕ, ನೈವೇದ್ಯ, ಹಸ್ತೋದಕ, ಮಹಾ ಮಂಗಳಾರತಿ, ಪ್ರವಚನ, ರಥೋತ್ಸವ ಸೇವೆ ಹಾಗೂ ವಿವಿಧ ಮಹಿಳಾ ಭಜನಾ ತಂಡದ ಸದಸ್ಯೆಯರು ಭಜನೆ ಮಾಡಿದರು.
ರಾಯರ ದರ್ಶನ ಪಡೆದು ಕೃತಾರ್ಥರಾದ ಭಕ್ತರು ಉರುಳು ಸೇವೆ, ದೀರ್ಘ ದಂಡ ಸೇರಿದಂತೆ ನಾನಾ ಸೇವೆಗಳನ್ನ ಭಕ್ತರು ಸಲ್ಲಿಸಿದರು. ಬಳಿಕ ಫಲ ಮಂತ್ರಾಕ್ಷತೆ ಪಡೆದರು. ಪೂರ್ವಾರಾಧನೆಯ ದಿನವಾದ ಗುರುವಾರ ವರುಣದೇವ ಆರ್ಭಟಿಸಿದ್ದ. ಆದರೆ, ಮಧ್ಯಾರಾಧನೆಯ ದಿನವಾದ ಶುಕ್ರವಾರ ವರುಣದೇವ ಭಕ್ತರಿಗೆ ಅಡಚನೆ ಮಾಡಲಿಲ್ಲ.
ಹುಬ್ಬಳ್ಳಿ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪ ಆವರಣದ ರಾಯರ ದೇವಸ್ಥಾನಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪದ್ಮರಾಜ್ ಐತಾಳ, ರಾಘವೇಂದ್ರ ಭಟ್, ಪ್ರಕಾಶ್ ರಾವ್, ಮೀನಾಕ್ಷಿ ಒಂಟಮೂರಿ. ರವಿ ನಾಯಕ, ಅನಂತರಾಜ್ ಭಟ್, ಪ್ರವೀಣ ಪವಾರ ಮೊದಲಾದವರು ಉಪಸ್ಥಿತರಿದ್ದರು.
ಉತ್ತರಾರಾಧನೆ ಇಂದು : ಗುರು ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಪ್ರಯುಕ್ತ ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಮಹಾ ರಥೋತ್ಸವ, ಅರ್ಚನೆ, ಕನಕಾಭಿಷೇಕ, ನೈವೇದ್ಯ, ಹಸ್ತೋದಕ ನೆರವೇರಲಿದೆ.
ವಿಶ್ವೇಶ್ವರ ನಗರ (ಶಾಂತಿ ಕಾಲನಿ) ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಮಠದಲ್ಲಿ ವಿಶೇಷ ಪೂಜೆ, ತಾರತಮ್ಯ ಭಜನೆ, ಪಂ. ಸದಾಶಿವ ಐಹೊಳೆ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಲಿದೆ.
ನವನಗರದ ಪರಿಮಳ ಮಾರ್ಗ ರಾಯರ ಮಠದಲ್ಲಿ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಅಭಿಷೇಕ, ಅಲಂಕಾರ ಮತ್ತು ಹಸ್ತೋದಕ, ಪ್ರಸಾದ, ಪಾಲಕಿ ಸೇವೆ, ಅಷ್ಟಾವಧಾನ ಸೇವೆ, ರಥಾಂಗ ಹೋಮ, ರಥೋತ್ಸವ ಹಾಗೂ ಸಮಗೀತ ಸೇವೆಗಳು ನೆರವೇರಲಿವೆ.
ರಾಮಕೃಷ್ಣ ನಗರದ ಭಕ್ತಾದಿಗಳ ರಾಯರ ಮಠದಲ್ಲಿ ಸುಪ್ರಭಾತ ಸೇವೆ, ಅಷ್ಟೋತ್ತರ ಪಾರಾಯಣ, ರಥೋತ್ಸವ, ಪ್ರಸಾದ, ಹಸ್ತೋದಕ ಕಾರ್ಯಕ್ರಮಗಳು ನೆರವೇರಲಿವೆ.
ಕುಸುಗಲ್ಲ ರಸ್ತೆಯ ಕುಬೇರಪುರಂ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಥಾಂಹ ಹೋಮ, ಅಷ್ಟಾಕ್ಷರ ಹೋಮ ಮತ್ತ ಉರಥೋತ್ಸವ ನೆರವೇರಲಿದೆ.