ಮಾಜಿ ಶಾಸಕ ಆಲಮೇಲಕರ ಕೋಮಾಗೆ

Advertisement

ವಿಜಯಪುರ: ನಾಗಠಾಣ (ಹಿಂದಿನ ಬಳ್ಳೊಳ್ಳಿ) ಮೀಸಲು ಕ್ಷೇತ್ರದ ಮಾಜಿ ಶಾಸಕ ವಿಲಾಸಬಾಬು ಆಲಮೇಲಕರ ಅವರು ತೀವ್ರ ಅಸ್ವಸ್ಥರಾಗಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ.
ಕಿಡ್ನಿ ವೈಫಲ್ಯ, ಶುಗರ್, ಹೈಪರ್ ಟೆನ್ಷನ್, ಬಹು ಅಂಗಾಂಗ ವೈಫಲ್ಯದಿಂದ ಅವರು ಬಳಲುತ್ತಿದ್ದಾರೆ.
ಎರಡು ವರ್ಷಗಳಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಕಳೆದ ತಿಂಗಳು ಇಲ್ಲಿನ ಚೌಧರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
`ಆಲಮೇಲಕರ ಅವರು ತೀವ್ರ ಅಸ್ವಸ್ಥರಾದ ಕಾರಣ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ೧೫ ದಿನಗಳಿಂದ ಕೋಮಾಗೆ ತೆರಳಿದ್ದಾರೆ’ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ರವಿ ಚೌಧರಿ ತಿಳಿಸಿದ್ದಾರೆ.
೧೯೯೮ ರಲ್ಲಿ ಬಳ್ಳೊಳ್ಳಿ ಶಾಸಕರಾಗಿದ್ದ ರಮೇಶ ಜಿಗಜಿಣಗಿ ಅವರು ರಾಜಕೀಯ ಸ್ಥಿತ್ಯಂತರದಿಂದಾಗಿ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿಗೆ ಸೇರಿ ಚಿಕ್ಕೋಡಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಅವರ ರಾಜೀನಾಮೆಯಿಂದ ತೆರವಾದ ಬಳ್ಳೊಳ್ಳಿ ಮೀಸಲು ಕ್ಷೇತ್ರದಿಂದ ವಿಲಾಸಬಾಬು ಆಲಮೇಲಕರ ಗೆಲುವು ಸಾಧಿಸಿದ್ದರು. ೨೦೦೯ರ ಲೋಕಸಭೆ ಚುನಾವಣೆಗೆ ಜನತಾದಳದಿಂದ ಸ್ಪರ್ಧಿಸಿದ್ದ ಆಲಮೇಲಕರ ಸೋಲು ಅನುಭವಿಸಿದ್ದರು. ಕೆಲವು ವರ್ಷಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.